ಏ.15ರಿಂದ ‘ಚೆರಿಯಮನೆ ಕಪ್’

7
ಕೊಡಗು ಗೌಡ ಕುಟುಂಬಗಳ ‘ಕ್ರಿಕೆಟ್ ಹಬ್ಬ’ಕ್ಕೆ ಮುನ್ನುಡಿ, ಲಾಂಛನ ಬಿಡುಗಡೆ

ಏ.15ರಿಂದ ‘ಚೆರಿಯಮನೆ ಕಪ್’

Published:
Updated:
ಏ.15ರಿಂದ ‘ಚೆರಿಯಮನೆ ಕಪ್’

ಮಡಿಕೇರಿ: ಏಪ್ರಿಲ್– ಮೇ ಬಂದರೆ ಸಾಕು. ಕೊಡಗಿನಲ್ಲಿ ಕ್ರೀಡಾ ಹಬ್ಬಗಳು ಆರಂಭಗೊಳ್ಳುತ್ತವೆ. ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಹಾಗೂ ಗೌಡ ಕುಟುಂಬಗಳ ನಡುವೆ ನಡೆಯುವ ಕ್ರಿಕೆಟ್‌ ಹಬ್ಬವು ಎಲ್ಲೆಡೆ ಪ್ರಸಿದ್ಧಿ ಪಡೆದಿದೆ.

ಕಳೆದ ವರ್ಷ ಗೌಡ ಕುಟುಂಬಗಳ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯವನ್ನು ‘ಪೈಕೇರ ಕುಟುಂಬ’ವು ವಹಿಸಿತ್ತು. ಈ ಬಾರಿ ಚೆರಿಯಮನೆ ಕುಟುಂಬಕ್ಕೆ ಅವಕಾಶ ಸಿಕ್ಕಿದ್ದು, ಚಾಲನೆ ಲಭಿಸಿದೆ.

ನಗರದ ಕೊಡಗು ಗೌಡ ಸಮಾಜದಲ್ಲಿ ಶನಿವಾರ ಕೊಡಗು ಗೌಡ ಯುವ ವೇದಿಕೆಯಿಂದ ಚೆರಿಯಮನೆ ಕುಟುಂಬದ ಸಹಯೋಗದಲ್ಲಿ ನಡೆದ ಚೆರಿಯಮನೆ ಕ್ರಿಕೆಟ್ ಕಪ್ – 2018ರ ಲಾಂಛನ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಿಂದ ನೆರವೇರಿತು.

ಲಾಂಛನ ಬಿಡುಗಡೆ ಸಮಾರಂಭ ದಲ್ಲಿ ಚೆರಿಯಮನೆ ಕಪ್ ಕ್ರೀಡಾ ಸಮಿತಿ ಅಧ್ಯಕ್ಷ ಚೆರಿಯಮನೆ ರಾಮಚಂದ್ರ ಮಾತನಾಡಿ, ‘ಆರೋಗ್ಯ, ಆರ್ಥಿಕ ಸದೃಢತೆ ಹಾಗೂ ಆಧ್ಯಾತ್ಮಿಕ ಸ್ಥಿರತೆ ನಮ್ಮಲ್ಲಿರಬೇಕಾದರೆ ವಯಸ್ಸಿನ ಮಿತಿ ತೊರೆದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

ಮಕ್ಕಳನ್ನು ಓದಿನೊಂದಿಗೆ ಕ್ರೀಡೆ ಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಬಾಲ್ಯದಿಂದಲೇ ಕ್ರೀಡೆ ಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಕ್ರೀಡೆ ಯಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

920 ಗೌಡ ಕುಟುಂಬಗಳಲ್ಲಿ 565 ಕುಟುಂಬಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿವೆ. 355 ಕುಟುಂಬಗಳು ಕೊಡಗು ಜಿಲ್ಲೆಯಲ್ಲಿ ನೆಲೆಸಿದ್ದು, ಸಹಬಾಳ್ವೆಗೆ ಹೆಸರು ವಾಸಿ ಎಂದು ತಿಳಿಸಿದರು.

‘ಟಿಪ್ಪು ಸುಲ್ತಾನ್ ಕೊಡಗಿನ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಹತ್ಯೆಗಳು ಮತ್ತು ಮತಾಂತರಗಳು ನಡೆದವು. ಟಿಪ್ಪುವಿನ ದಾಳಿಯ ನಂತರ ಆತನ ಯೋಧರು ನಡೆಸಿದ ದೌರ್ಜನ್ಯಕ್ಕೆ ಹೆದರಿದ ಚೆರಿಯಮನೆ ಕುಟುಂಬ ಭಾಗಮಂಡಲದ ಮೂಲ ಪ್ರದೇಶದಿಂದ ಬೆಟ್ಟತೂರು ಗ್ರಾಮವನ್ನು ಪ್ರವೇಶಿಸಿದರು. ಹೀಗಾಗಿ ಚೆರಿಯಮನೆ ಕುಟುಂಬದ ಐನ್‌ಮನೆ ಬೆಟ್ಟತೂರಿನಲ್ಲಿಯೇ ಇದೆ’ ಎಂದು ಮಾಹಿತಿ ನೀಡಿದರು.

‘ಕಳೆದ ಬಾರಿ ನಡೆದ ಪೈಕೇರ ಕ್ರಿಕೆಟ್ ಕಪ್‌ನಲ್ಲಿ 210 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. ಟೂರ್ನಿಯಲ್ಲಿ 200 ತಂಡಗಳು ಭಾಗವಹಿಸಿದ್ದವು. ಆದರೆ, ಈ ಬಾರಿ 250 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈ ಕಾರ್ಯಕ್ರಮಕ್ಕೆ ಚೆರಿಯಮನೆ ಕುಟುಂಬಸ್ಥರು ಮಾತ್ರವಲ್ಲದೆ ಎಲ್ಲಾ ಗೌಡ ಕುಟುಂಬಗಳಿಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ’ ಎಂದು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್ ಹೇಳಿದರು.

‘ಏಪ್ರಿಲ್ 15ರಿಂದ ಮೇ 10ರವರೆಗೆ ಒಟ್ಟು 17 ದಿನಗಳ ಕಾಲ ಚೆರಿಯಮನೆ ಕ್ರಿಕೆಟ್ ಹಬ್ಬ ನಡೆಯಲಿದೆ’ ಎಂದು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾಹಿತಿ ನೀಡಿದರು.

ಕೇಕಡ ಚಂದ್ರಮ್ಮ, ಚೆರಿಯಮನೆ ಪಟ್ಟೆದಾರರಾದ ಕೆಂಚಪ್ಪ, ಬೆಳ್ಯಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ್, ರಮೇಶ್ ಜೋಯಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry