ಮುನ್ನೆಲೆಗೆ ಫೆನ್ಸಿಂಗ್‌

7

ಮುನ್ನೆಲೆಗೆ ಫೆನ್ಸಿಂಗ್‌

Published:
Updated:
ಮುನ್ನೆಲೆಗೆ ಫೆನ್ಸಿಂಗ್‌

ಮೈ ಪೂರ್ತಿ ಮುಚ್ಚಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತಾ ಕೈಯಲ್ಲಿ ‘ಕತ್ತಿ’ ಹಿಡಿದು ಸೆಣಸುವ ಆಟವನ್ನು ನೋಡಿದರೆ ಮೊದ ಮೊದಲು ಬೆಚ್ಚಿ ಬೀಳುತ್ತಿದ್ದವರೇ ಹೆಚ್ಚು. ಆದರೆ ಈಗ ಇದರ ಬಗ್ಗೆ ಒಲವು ಹೆಚ್ಚುತ್ತಿದೆ. ಫೆನ್ಸಿಂಗ್ ಎಂಬ ಈ ಕ್ರೀಡೆಯ ಬಗ್ಗೆ ಅಷ್ಟೇನೂ ಗೊತ್ತಿಲ್ಲದಿದ್ದ ಕರ್ನಾಟಕದಲ್ಲಿ ತರಬೇತಿಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.

ರಾಜ್ಯದಲ್ಲಿ ಒಮ್ಮೆ ಪ್ರವರ್ಧಮಾನಕ್ಕೆ ಹೋಗಿ ಮತ್ತೆ ನೇಪಥ್ಯಕ್ಕೆ ಸರಿದಿದ್ದ ಫೆನ್ಸಿಂಗ್ ಈಗ ಮರುಜೀವ ಪಡೆದುಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ‘ಕಿರಿಯರು’ ತೋರಿದ ಸಾಮರ್ಥ್ಯ ಇಲ್ಲಿನ ಫೆನ್ಸಿಂಗ್‌ ಕೋಚ್‌ಗಳು ಮತ್ತು ಸಂಘಟಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಕಾರಣವಿಷ್ಟೇ: ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಇತರ ರಾಜ್ಯದವರಲ್ಲಿ ಬಹುತೇಕರು 18–19 ವರ್ಷದವರು. ಆದರೆ ಕರ್ನಾಟಕವನ್ನು ಪ್ರತಿನಿಧಿಸಿದವರ ಪೈಕಿ ಹೆಚ್ಚಿನವರು 14, 15, 16 ವರ್ಷದವರು.

ಫೆನ್ಸಿಂಗ್ ಕ್ರೀಡೆಯನ್ನು ತಳಮಟ್ಟದಿಂದ ಬೆಳೆಸುವ ಪ್ರಯತ್ನ ಈಗ ರಾಜ್ಯದಲ್ಲಿ ನಡೆಯುತ್ತಿದೆ. ಅದಕ್ಕಾಗಿಯೇ ರಾಜ್ಯ ಫೆನ್ಸಿಂಗ್ ಸಂಸ್ಥೆ, ರಾಜ್ಯ ಒಲಿಂಪಿಕ್‌ ಸಂಸ್ಥೆ ಮತ್ತು ಬೆಂಗಳೂರು ಫೆನ್ಸಿಂಗ್ ಅಕಾಡೆಮಿ 11ರ ಆಸುಪಾಸಿನ ವಯಸ್ಸಿನವರ ಮೇಲೆ ‘ಕಣ್ಣು’ ನೆಟ್ಟಿದೆ. ಇದರ ಪ್ರತಿಫಲ ಎಂಬಂತೆ ಈ ಬಾರಿಯ ಸಬ್‌ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಮತ್ತು ಮೂರು ಕಂಚಿನ ಪದಕಗಳು ರಾಜ್ಯಕ್ಕೆ ದಕ್ಕಿವೆ.

2006ರ ವರೆಗೆ ‘ಸುವರ್ಣ’ ಕಾಲ: ಫೆನ್ಸಿಂಗ್ ಕ್ರೀಡೆ ರಾಜ್ಯಕ್ಕೆ ಕಾಲಿಟ್ಟದ್ದು 90ರ ದಶಕದಲ್ಲಿ. 2006ರ ವರೆಗೆ ಇಲ್ಲಿ ಫೆನ್ಸಿಂಗ್‌ನ ಸುವರ್ಣ ಕಾಲವಾಗಿತ್ತು. ವಿವಿಧ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕದ ಫೆನ್ಸರ್‌ಗಳು ಪದಕ ಗಳ ಬೇಟೆಯಾಡಿದರು.

ಆದರೆ ಹೆಸರು ಮಾಡಿದವರು ಒಬ್ಬೊಬ್ಬರಾಗಿ ನಿವೃತ್ತ ರಾಗುತ್ತಿದ್ದಂತೆ ಫೆನ್ಸಿಂಗ್ ಹೆಸರು ಇಲ್ಲಿನ ಕ್ರೀಡಾ ವಲಯದಿಂದ ದೂರ ಸರಿಯತೊಡಗಿತು. ಚಾಂಪಿಯನ್‌ಷಿಪ್‌ಗಳಲ್ಲಿ ಗಳಿಸುವ ಪದಕಗಳ ಸಂಖ್ಯೆ ಕಡಿಮೆಯಾಗುತ್ತ ಸಾಗಿತು. ಸ್ಪರ್ಧೆಗಳಲ್ಲಿ ಮೊದಲ ಹತ್ತರೊಳಗೆ ಸ್ಥಾನ ಪಡೆಯುವುದು ಕೂಡ ಕಷ್ಟವಾಗತೊಡಗಿತು.

ಇದಕ್ಕೆ ಪರಿಹಾರ ಕಾಣಲು ಶ್ರಮಿಸಿದ ತ್ರಿವಳಿ ಸಂಘಟನೆಗಳ ಶ್ರಮಕ್ಕೆ ನಿಧಾನವಾಗಿ ಫಲ ಸಿಗತೊಡಗಿತು. 2012ರ ರಾಷ್ಟ್ರೀಯ ಚಾಂಪಿಯನ್‌ಷಿಪ್ ವೇಳೆ ಸ್ಪರ್ಧಾ ಳುಗಳ ಪಟ್ಟಿಯಲ್ಲಿ ನಮ್ಮವರ ಹೆಸರು ಎದ್ದು ಕಾಣತೊಡಗಿತು.

ಗ್ರಾಮೀಣ ಪ್ರದೇಶದಲ್ಲಿ ಫೆನ್ಸಿಂಗ್ ಶಾಲೆ: ಬೆಂಗಳೂರಿನಲ್ಲಿ ಫೆನ್ಸಿಂಗ್ ಅಕಾಡೆಮಿ ಮತ್ತು ಸ್ಯಾಕ್ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಚಾಮ ರಾಜನಗರದಲ್ಲಿ ಫೆನ್ಸಿಂಗ್‌ ಶಾಲೆ ಆರಂಭಿಸಲಾಗಿದೆ. ಅಲ್ಲಿ ಗ್ರಾಮೀಣ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು ಮೈಸೂರಿನಲ್ಲೂ ತರಬೇತಿ ಕೇಂದ್ರವಿದೆ. ಕೊಡಗು ಮತ್ತು ಸಮೀಪದ ಜಿಲ್ಲೆಗಳಿಂದ ಇಲ್ಲಿಗೆ ಬಂದು ತರಬೇತಿ ಪಡೆಯುವವರೂ ಇದ್ದಾರೆ.

‘2006ರಿಂದ 2015ರ ವರೆಗೆ 40 ಮಂದಿ ಮಾತ್ರ ರಾಜ್ಯದಲ್ಲಿ ಫೆನ್ಸಿಂಗ್ ತರಬೇತಿ ಪಡೆಯುತ್ತಿದ್ದರು. ಈಗ ಈ ಸಂಖ್ಯೆ 350ಕ್ಕೇರಿದೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆದ ಐವರು ಕೋಚ್‌ಗಳು ರಾಜ್ಯದಲ್ಲಿ ತರಬೇತಿ ನೀಡುತ್ತಿದ್ದಾರೆ. ದಕ್ಷಿಣ ಭಾಗದಲ್ಲಿ ಮಾತ್ರ ಈಗ ತರಬೇತಿ ನಡೆಯುತ್ತಿದೆ. ಸದ್ಯದಲ್ಲೇ ಉತ್ತರ ಕರ್ನಾಟಕ ಭಾಗಕ್ಕೂ ಚಟುವಟಿಕೆ ವಿಸ್ತರಿಸಲಾಗುವುದು’ ಎಂದು ರಾಜ್ಯ ಫೆನ್ಸಿಂಗ್ ಸಂಸ್ಥೆಯ ಕಾರ್ಯದರ್ಶಿ ಆರ್‌.ಪ್ರಕಾಶ್ ತಿಳಿಸಿದರು.

ಬೆಳೆವ ಸಿರಿಯ ಪೋಷಣೆ

ಫೆನ್ಸಿಂಗ್‌ನಲ್ಲಿ ಹೊಸ, ಯುವ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ಮತ್ತು ಪ್ರೇರಣೆ ನೀಡಲು ತ್ರಿವಳಿ ಸಂಸ್ಥೆಗಳು ಟೊಂಕ ಕಟ್ಟಿ ನಿಂತಿವೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಪತ್ತೆಹಚ್ಚಿ ಅವರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ‘ಯುವ ಫೆನ್ಸರ್‌ಗಳು ಭವಿಷ್ಯದಲ್ಲಿ ರಾಜ್ಯ ಮತ್ತು ದೇಶಕ್ಕೆ ಹೆಸರು ತಂದುಕೊಡುವ ಭರವಸೆ ಮೂಡಿಸಿದ್ದಾರೆ’ ಎನ್ನುತ್ತಾರೆ ಆರ್.ಪ್ರಕಾಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry