ಬಿಜೆಪಿ ಗೆಲುವಿಗಾಗಿ ಮಹಾಯಜ್ಞ!

7

ಬಿಜೆಪಿ ಗೆಲುವಿಗಾಗಿ ಮಹಾಯಜ್ಞ!

Published:
Updated:
ಬಿಜೆಪಿ ಗೆಲುವಿಗಾಗಿ ಮಹಾಯಜ್ಞ!

ನವದೆಹಲಿ: ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧವಾಗಿರುವಂತೆಯೇ, ಬಿಜೆಪಿಯ ಇಲ್ಲಿನ ಸಂಸದರೊಬ್ಬರು ಚುನಾವಣೆಗಳಲ್ಲಿ ತಮ್ಮ ಪಕ್ಷ ಜಯ ಗಳಿಸಬೇಕೆಂಬ ಆಕಾಂಕ್ಷೆಯಿಂದ ‘ಆಡಳಿತ ದೇವತೆ’ಯ ಪೂಜೆಗೆ ಮೊರೆ ಹೋಗಿದ್ದಾರೆ!

ಐತಿಹಾಸಿಕ ಕೆಂಪುಕೋಟೆಗೆ ಸಮೀಪದ ಸ್ಥಳದಲ್ಲಿ ಮಾರ್ಚ್‌ನಲ್ಲಿ ಈ ’ಮಹಾಯಜ್ಞ‘ ಆಯೋಜಿಸಲಾಗುತ್ತದೆ. ಸಂಸದ ಮಹೇಶ್‌ ಗಿರಿ ಅವರು ಸಂಘಟಿಸುತ್ತಿರುವ ಯಜ್ಞದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮತ್ತು ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಲ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಜಯ ಗಳಿಸುವ ಸಲುವಾಗಿ ’ಬಗಲಾಮುಖಿ ದೇವಿ’ಯ ಆಶೀರ್ವಾದ ಪಡೆಯಲು ’ರಾಷ್ಟ್ರ ರಕ್ಷಾ ಯಜ್ಞ’ ಆಯೋಜಿಸಲಾಗಿದೆ. ‘ಆವೋ ಏಕ್‌ ಸಂಕಲ್ಪ್‌ ಲೇ, ಆವೋ ಏಕ್‌ ಆಹುತಿ ದೇ (ಬನ್ನಿ ಸಂಕಲ್ಪ ಮಾಡೋಣ, ಬನ್ನಿ ಪೂರ್ಣಾಹುತಿಯಲ್ಲಿ ಭಾಗಿಯಾಗೋಣ) ಎನ್ನುವುದು ಈ ಕಾರ್ಯಕ್ರಮದ ಘೋಷವಾಕ್ಯವಾಗಿದೆ. ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿ ಅವರ ಶಿಷ್ಯರಾಗಿರುವ ಗಿರಿ ಅವರ ಮನೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಆದರೆ ಯಜ್ಞದ ಬಗ್ಗೆ ಹೇಳಿಕೆ ನೀಡಲು ಗಿರಿ ನಿರಾಕರಿಸಿದ್ದಾರೆ. ಇದೇ 22ರಂದು ಎಲ್ಲ ವಿವರ ನೀಡುವುದಾಗಿ ತಿಳಿಸಿದ್ದಾರೆ.

ರಾಜಸ್ತಾನ, ಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲು, ಕರ್ನಾಟಕದಲ್ಲಿ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಾರದಂತೆ ತಡೆಯಲು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿ ಹವಣಿಸುತ್ತಿರುವ ಸಂದರ್ಭದಲ್ಲಿ ಈ ಮಹಾಯಜ್ಞ ಆಯೋಜಿಸಲಾಗಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶವು 2019ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.

ದೇವೇಗೌಡರ ಕುಟುಂಬದಿಂದ ಅತಿರುದ್ರ ಮಹಾಯಾಗದ ಪೂರ್ಣಾಹುತಿ

ಶೃಂಗೇರಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಕುಟುಂಬ ಇಲ್ಲಿನ ಶಾರದಾ ಪೀಠದಲ್ಲಿ 12 ದಿನಗಳಿಂದ ಕೈಗೊಂಡಿದ್ದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ಭಾನುವಾರ ಭಾರತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.

ದೇವೇಗೌಡ, ಪತ್ನಿ ಚೆನ್ನಮ್ಮ ಮಕ್ಕಳಾದ ಬಾಲಕೃಷ್ಣ, ರೇವಣ್ಣ, ಕುಮಾರಸ್ವಾಮಿ, ಡಾ.ರಮೇಶ್, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಗೌಡರ ಪುತ್ರಿಯರಾದ ಅನಸೂಯ ಹಾಗೂ ಶೈಲಜಾ, ಅಳಿಯಂದಿರಾದ ಡಾ.ಮಂಜುನಾಥ್, ಡಾ.ಚಂದ್ರಶೇಖರ್, ಬೀಗರಾದ ಡಾ.ರಂಗಪ್ಪ, ಮೊಮ್ಮಗ ಪ್ರಜ್ವಲ್ ರೇವಣ್ಣ ಉಪಸ್ಥಿತರಿದ್ದರು.

ಶಾರದಾ ಮಠದ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ಹೋಮ ನಡೆಯುತ್ತಿದ್ದ ಯಾಗಶಾಲೆಗೆ ಉಭಯ ಗುರುಗಳು ಬಂದ ನಂತರ ಪೂರ್ಣಾಹುತಿ ವಿಧಿಗಳು ಜರುಗಿದವು. 150ಕ್ಕೂ ಅಧಿಕ ಋತ್ವಿಜರ ಮಂತ್ರಘೋಷದ ನಡುವೆ ಪೂರ್ಣಾಹುತಿ ಜರುಗಿತು.

ವಿಧಾನ ಪರಿಷತ್ ಸದಸ್ಯರಾದ ಶರವಣ, ಶ್ರೀಕಂಠೇಗೌಡ, ಶಾಸಕರಾದ  ಜಿ.ಟಿ.ದೇವೇಗೌಡ, ಬಾಲಕೃಷ್ಣ, ವೈ.ಎಸ್.ವಿ.ದತ್ತ, ಎನ್‌.ಎಚ್‌.ಕೋನರೆಡ್ಡಿ, ಪಕ್ಷದ ಮುಖಂಡರಾದ ಎಚ್.ಟಿ.ರಾಜೇಂದ್ರ, ಎಚ್.ಜಿ.ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry