ಇನ್ನೂ ನನಸಾಗದ 24X7 ನೀರು ಪೂರೈಕೆ

7
ಪಾಲಿಕೆಯಿಂದ ಯೋಜನೆ; ಎಲ್ಲ ವಾರ್ಡ್‌ಗಳಿಗೂ ವಿಸ್ತರಣೆ ಸಾಧ್ಯವಾಗಿಲ್ಲ

ಇನ್ನೂ ನನಸಾಗದ 24X7 ನೀರು ಪೂರೈಕೆ

Published:
Updated:
ಇನ್ನೂ ನನಸಾಗದ 24X7 ನೀರು ಪೂರೈಕೆ

ಬೆಳಗಾವಿ: ನಗರದ ಎಲ್ಲ ವಾರ್ಡ್‌ಗಳಲ್ಲೂ ಕುಡಿಯುವ ನೀರು ನಿರಂತರ ಪೂರೈಕೆ ಮಾಡುವ ಯೋಜನೆ ಇನ್ನೂ ಕನಸಾಗಿಯೇ ಉಳಿದಿದೆ.

ಇಲ್ಲಿ 58 ವಾರ್ಡ್‌ಗಳಿವೆ. ಈ ಪೈಕಿ 10 ವಾರ್ಡ್‌ಗಳಲ್ಲಿ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ದಿನದ 24 ಗಂಟೆಯೂ ಪೂರೈಸಲಾಗುತ್ತಿದೆ. ಉಳಿದ 48 ವಾರ್ಡ್‌ಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಹಲವು ವರ್ಷಗಳಿಂದಲೂ ಹೇಳಲಾಗುತ್ತಿದೆ. ಆದರೆ, ಇದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಯಲ್ಲಿಯೇ ಸಮಯ ಕಳೆಯುತ್ತಿದೆ. ಇದರಿಂದಾಗಿ ಸ್ಮಾರ್ಟ್‌ ಸಿಟಿಯ ಎಲ್ಲ ಬಡಾವಣೆಗಳಲ್ಲೂ ಕುಡಿಯುವ ನೀರನ್ನು ನಿರಂತರವಾಗಿ ಪೂರೈಕೆ ಮಾಡುವುದಕ್ಕೆ ಇನ್ನಷ್ಟು ವರ್ಷಗಳೇ ಬೇಕಾಗಲಿವೆ!

ಯೋಜನೆ ಅನುಷ್ಠಾನಕ್ಕಾಗಿ ₹ 427 ಕೋಟಿ ಬೇಕಾಗುತ್ತದೆ ಎಂದು ಯೋಜಿಸಲಾಗಿದೆ. 320 ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್‌ ಸಮ್ಮತಿ ಸೂಚಿಸಿದೆ. ಉಳಿದುದನ್ನು ಪಾ‍ಲಿಕೆಯೇ ಭರಿಸಬೇಕಾಗುತ್ತದೆ. ಇಲ್ಲಿಗೆ ಭೇಟಿ ನೀಡಿ ವೀಕ್ಷಿಸಿದ್ದ ವಿಶ್ವಬ್ಯಾಂಕ್‌ ಅಧಿಕಾರಿಗಳ ತಂಡ, ಸಾಲ ನೀಡುವುದಕ್ಕೆ ಅಸ್ತು ಎಂದಿದೆ. ಈ ಆರ್ಥಿಕ ನೆರವು ಪಡೆಯುವುದಕ್ಕೋಸ್ಕರ, ಜಲಮೂಲಗಳಿಂದ ಹೆಚ್ಚಿನ ನೀರನ್ನು ತರುವ ಸಾಮರ್ಥ್ಯವುಳ್ಳ ಜಾಲವನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ.

ಅಮೃತ್‌ ಯೋಜನೆಯಡಿ: ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರ್ಯಾದೇಶ ನೀಡಿದ ಮೇಲೆ ಒಂದು ವರ್ಷದವರೆಗೆ ಅಧ್ಯಯನಕ್ಕೆ ಸಮಯ ಕೊಡಬೇಕಾಗುತ್ತದೆ. ಅದಾದ ಮೂರು ವರ್ಷಗಳಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಪಂಪಿಂಗ್ ಯಂತ್ರಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ ‘ಅಮೃತ್’ ಯೋಜನೆಯಲ್ಲಿ ಅನುದಾನ ದೊರೆಯಲಿದೆ. ಪಾಲಿಕೆಯೂ ತನ್ನ ಪಾಲಿನ ಹಣ ಕೊಡಬೇಕಾಗುತ್ತದೆ. ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಬಳಿ, ನೀರಿನ ಕಂದಾಯ ಸಂಗ್ರಹಿಸಿದ ಹಣವಿದೆ. ಅದರಲ್ಲಿ ಪಾಲಿಕೆಯ ಪಾಲನ್ನು ಭರಿಸಬಹುದಾಗಿದೆ’ ಎನ್ನುತ್ತಾರೆ ಅವರು. ‘ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಉನ್ನತಮಟ್ಟದ ಸಮಿತಿ ಸಭೆಯಲ್ಲೂ ಚರ್ಚೆಯಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಬಹುದೇ ಎಂದೂ ಚರ್ಚೆಯಾಗಿದೆ. ಏಪ್ರಿಲ್‌–ಮೇಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದರು.

***

ಮೇಲ್ದರ್ಜೆಗೇರಿಸಬೇಕು

ಹಿಡಕಲ್‌ ಜಲಾಶಯ ಹಾಗೂ ತಾಲ್ಲೂಕಿನ ರಕ್ಕಸಕೊಪ್ಪದಲ್ಲಿರುವ ಜಲಾಶಯಗಳು ನಗರಕ್ಕೆ ನೀರು ಪೂರೈಸುವ ಪ್ರಮುಖ ಮೂಲಗಳಾಗಿವೆ. ಹಿಡಕಲ್ ಜಲಾಶಯದಿಂದ ನಗರಕ್ಕೆ ನೀರು ಪೂರೈಸಲು ಅಳವಡಿಸಲಾಗಿರುವ ಪಂಪ್‌ಸೆಟ್‌ ಬಹಳಷ್ಟು ಹಳೆಯದಾಗಿದೆ. ಹೀಗಾಗಿ, ಅದರ ಸಾಮರ್ಥ್ಯವನ್ನು 12 ಎಂಜಿಡಿಯಿಂದ 18 ಎಂಜಿಡಿಗೆ ಏರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಕೆಲ ತಿಂಗಳ ಹಿಂದೆಯೇ ಪಾಲಿಕೆ ಪರಿಷತ್‌ ಸಭೆಯಲ್ಲಿ ಅನುಮೋದನೆಯನ್ನೂ ನೀಡಲಾಗಿದೆ.

‘ಹಿಡಕಲ್ ಜಲಾಶಯದಿಂದ ನೀರೆತ್ತಲು ಅಳವಡಿಸಲಾಗಿರುವ ಪಂಪಿಂಗ್ ಯಂತ್ರಗಳು ಹಳೆಯವಾಗಿವೆ. ಈ ಘಟಕವನ್ನು 17 ವರ್ಷಗಳ ಹಿಂದೆ ಅಳವಡಿಸಿ, ಕಾರ್ಯಾರಂಭ ಮಾಡಲಾಗಿದೆ. ಹೀಗಾಗಿ ಅವುಗಳನ್ನು ಬದಲಾಯಿಸಬೇಕಾಗಿದೆ. ಇದರಿಂದ ನಿತ್ಯವೂ ಹೆಚ್ಚುವರಿಯಾಗಿ 6 ಎಂಜಿಡಿ (ಮಿಲಿಯನ್‌ ಗ್ಯಾಲನ್‌ ಪರ್‌ ಡೇ) ನೀರನ್ನು ನಗರಕ್ಕೆ ಪೂರೈಸಬಹುದಾಗಿದೆ. 2031ರ ವೇಳೆಗೆ ನಗರದ ಜನಸಂಖ್ಯೆ 7 ಲಕ್ಷ ಮೀರುತ್ತದೆ ಎಂದು ಅಂದಾಜಿಸಲಾಗಿದೆ. ಇಷ್ಟು ಜನರಿಗೆ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕಾದರೆ, ಈಗಿರುವ ಪಂಪಿಂಗ್‌ ಯಂತ್ರಗಳನ್ನು ಬದಲಾಯಿಸಿ ಮೇಲ್ದರ್ಜೆಗೇರಿಸಬೇಕಾಗಿದೆ. ಇದಕ್ಕೆ ₹ 32 ಕೋಟಿ ವೆಚ್ಚವಾಗುತ್ತದೆ ಎಂದು ಯೋಜನೆ ರೂಪಿಸಲಾಗಿದೆ. ಇದು ಸಾಧ್ಯವಾದರೆ, ನಗರದಲ್ಲಿ 24X7 ನೀರು ಪೂರೈಕೆ ಸರಾಗವಾಗಲಿದೆ’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರತಿಕ್ರಿಯಿಸಿದರು.

***

ನಗರದ ಎಲ್ಲ ವಾರ್ಡ್‌ಗಳಲ್ಲೂ 24X7 ನೀರು ಪೂರೈಕೆ ಮಾಡುವುದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

– ಶಶಿಧರ ಕುರೇರ, ಆಯುಕ್ತರು, ನಗರಪಾಲಿಕೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry