ತುಂಗೆಯಲ್ಲಿ ಮಿಂದೆದ್ದ ಭಕ್ತರು

7
ವಿರೂಪಾಕ್ಷೇಶ್ವರನ ದರ್ಶನ ಪಡೆದು, ದೋಣಿಯಲ್ಲಿ ವಿಹರಿಸಿ ಸಂಭ್ರಮಿಸಿದ ಜನರು

ತುಂಗೆಯಲ್ಲಿ ಮಿಂದೆದ್ದ ಭಕ್ತರು

Published:
Updated:
ತುಂಗೆಯಲ್ಲಿ ಮಿಂದೆದ್ದ ಭಕ್ತರು

ಹೊಸಪೇಟೆ: ಮಕರ ಸಂಕ್ರಮಣದ ಪ್ರಯುಕ್ತ ತಾಲ್ಲೂಕಿನ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಭಾನುವಾರ ಸಹಸ್ರಾರು ಜನ ಪುಣ್ಯಸ್ನಾನ ಮಾಡಿದರು.

ಬೆಳಿಗ್ಗೆ ಆರು ಗಂಟೆಯಿಂದಲೇ ಜನ ಹಂಪಿಯತ್ತ ಮುಖ ಮಾಡಿದ್ದರು. ಆರಂಭದಲ್ಲಿ ಸ್ವಲ್ಪವೇ ಜನ ಇದ್ದರು. ಸುರ್ಯೋದಯವಾಗುತ್ತಿದ್ದಂತೆ ವಿವಿಧ ಕಡೆಗಳಿಂದ ಜನರ ದಂಡೇ ಹರಿದು ಬಂದಿತ್ತು. ಪುಣ್ಯಸ್ನಾನ ಮಾಡಲು ಜನ ನದಿಯತ್ತ ಧಾವಿಸಿದ್ದರಿಂದ ಸ್ನಾನಘಟ್ಟದಲ್ಲಿ ಜನಜಂಗುಳಿ ಕಂಡು ಬಂತು. ಎಂಟು ಗಂಟೆಯ ಸುಮಾರಿಗೆ ಸ್ನಾನಘಟ್ಟದಲ್ಲಿ ಕಾಲಿಡಲು ಜಾಗವಿಲ್ಲದಂತಾಗಿತ್ತು.

ಕುಟುಂಬ ಸಮೇತರಾಗಿ ಬಂದಿದ್ದ ಜನ ತುಂಗೆಯಲ್ಲಿ ಮಿಂದೆದ್ದು ಪುನೀತರಾದರು. ನಂತರ ವಿರೂಪಾಕ್ಷೇಶ್ವರ ದೇಗುಲಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಪಡೆದರು. ದರ್ಶನಕ್ಕೆ ವಿವಿಧ ಭಾಗಗಳಿಂದ ಜನ ಬಂದದ್ದರಿಂದ ದೇವಸ್ಥಾನದಲ್ಲೂ ಜನಜಾತ್ರೆ ಕಂಡು ಬಂತು. ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಬಳಿಕ ಪರಸ್ಪರ ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿದರು.

ದೂರದ ಊರುಗಳಿಂದ ಬಂದಿದ್ದ ಕೆಲವರು ದೇಗುಲದ ಬಳಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ಬುತ್ತಿ ಕಟ್ಟಿಕೊಂಡು ಬಂದಿದ್ದವರು ನದಿ ಅಂಚಿನ ಬಂಡೆಗಲ್ಲುಗಳ ಮೇಲೆ ಕುಳಿತುಕೊಂಡು ಭೋಜನ ಸವಿದರು. ಕುಟುಂಬ ಸದಸ್ಯರೊಂದಿಗೆ ದೋಣಿಯಲ್ಲಿ ವಿಹಾರ ಮಾಡಿ ಸಂಭ್ರಮಿಸಿದರು. ನದಿ ದಡಕ್ಕೆ ನಿಂತುಕೊಂಡು ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು.

ಹಬ್ಬದ ಅಂಗವಾಗಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಯು ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮರಿದೇವ ಸಂಗೀತ ಸಾಂಸ್ಕೃತಿಕ ಕಲಾ ವೃಂದ ಹಾಗೂ ವಿಜಯವಾಡದ ಕಲಾವಿದರು ನೃತ್ಯ ಪ್ರಸ್ತುತಪಡಿಸಿದರು.

ಕ್ಯಾಲೆಂಡರ್‌ನಲ್ಲಿ ಸೋಮವಾರ ಮಕರ ಸಂಕ್ರಮಣದ ರಜೆ ಇತ್ತು. ಆದರೆ, ಬಹುತೇಕ ಭಾಗಗಳಲ್ಲಿ ಭಾನುವಾರವೇ ಹಬ್ಬ ಆಚರಿಸಲಾಯಿತು. ಹಬ್ಬದ ನಿಮಿತ್ತ ಇಲ್ಲಿನ ಅರವಿಂದ ನಗರ, ಪಟೇಲ್‌ ನಗರ, ರಾಣಿಪೇಟೆ, ಅಮರಾವತಿ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆಗಳ ಮನೆ ಎದುರಿನ ಜಾಗ ವಿವಿಧ ಬಗೆಯ ರಂಗೋಲಿಯಿಂದ ಕಂಗೊಳಿಸುತ್ತಿದ್ದವು.

ಅರವಿಂದ ನಗರದಲ್ಲಂತೂ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಇದರಿಂದ ಆ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ಕಂಡುಬಂತು.

ಜಲಾಶಯದಲ್ಲೂ ದಟ್ಟಣೆ: ರಜಾ ದಿನವಾಗಿದ್ದರಿಂದ ಭಾನುವಾರ ತುಂಗಭದ್ರಾ ಜಲಾಶಯದಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಎರಡನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಮಕರ ಸಂಕ್ರಮಣದ ರಜೆ ಇರುವುದರಿಂದ ವಿವಿಧ ಕಡೆಗಳಿಂದ ಜನ ನಗರಕ್ಕೆ ಬಂದಿದ್ದು, ಹಂಪಿ ಹಾಗೂ ಅಣೆಕಟ್ಟೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಹಂಪಿ ಹಾಗೂ ಅಣೆಕಟ್ಟೆಯಲ್ಲಿ ಭಾನುವಾರ ಜನಜಂಗುಳಿ ಇತ್ತು. ಸೋಮವಾರ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry