ಜಿಲ್ಲೆಯಲ್ಲಿ ತೀರ್ಪು ಆಟಕ್ಕುಂಟು ಲೆಕ್ಕಕ್ಕಿಲ್ಲ

7
ಪೊಲೀಸರ ‘ದಂಡದ ಅಸ್ತ್ರ’ಕ್ಕೂ ಬಗ್ಗದ ಬೈಕ್‌ ಸವಾರರು; ಐಎಸ್‌ಐ ಮುದ್ರೆ ಹೆಲ್ಮೆಟ್‌ಗೆ ಸವಾರರಿಂದ ಸಿಗದ ಪ್ರೋತ್ಸಾಹ

ಜಿಲ್ಲೆಯಲ್ಲಿ ತೀರ್ಪು ಆಟಕ್ಕುಂಟು ಲೆಕ್ಕಕ್ಕಿಲ್ಲ

Published:
Updated:
ಜಿಲ್ಲೆಯಲ್ಲಿ ತೀರ್ಪು ಆಟಕ್ಕುಂಟು ಲೆಕ್ಕಕ್ಕಿಲ್ಲ

ಕೋಲಾರ: ಬೈಕ್‌ ಸವಾರರು ಭಾರತೀಯ ಮಾನಕ ಸಂಸ್ಥೆಯ (ಐಎಸ್‌ಐ) ಮುದ್ರೆಯಿರುವ ಹೆಲ್ಮೆಟ್‌ಗಳನ್ನೇ ಧರಿಸಬೇಕು ಎಂದು ಹೈಕೋರ್ಟ್‌ ನೀಡಿರುವ ತೀರ್ಪು ನಗರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆನೆ ನಡೆದದ್ದೆ ದಾರಿ ಎಂಬಂತೆ ಬೈಕ್‌ ಸವಾರರು ಸಂಚಾರ ಪೊಲೀಸರ ‘ದಂಡದ ಅಸ್ತ್ರ’ಕ್ಕೂ ಬಗ್ಗದೆ ತೀರ್ಪು ಉಲ್ಲಂಘಿಸುತ್ತಿದ್ದಾರೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ ಜನಸಂಖ್ಯೆಯು 2 ಲಕ್ಷದ ಗಡಿ ದಾಟಿದೆ. ನಗರ ಬೆಳೆದು ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ನಗರದಲ್ಲಿ ಸದ್ಯ ಸುಮಾರು 80 ಸಾವಿರ ದ್ವಿಚಕ್ರ ವಾಹನಗಳಿದ್ದು, ನಿತ್ಯ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಜತೆಗೆ ಹೊರ ಭಾಗದಿಂದ ಸಾವಿರಾರು ದ್ವಿಚಕ್ರ ವಾಹನಗಳು ನಗರಕ್ಕೆ ಬಂದು ಹೋಗುತ್ತಿವೆ.

ವಾಹನಗಳ ಸಂಖ್ಯೆ ಹೆಚ್ಚಿದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ಚಾಲನೆ ಮಾಡುವುದು ಸಾಮಾನ್ಯವಾಗಿದೆ. ಪೊಲೀಸರು ಸಂಚಾರ ವ್ಯವಸ್ಥೆ ಮೇಲೆ ಹದ್ದಿನ ಕಣ್ಣಿಟ್ಟಿದ್ದರೂ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ನಿಯಮ ಉಲ್ಲಂಘಿಸುವುದು ಮುಂದುವರಿದಿದೆ.

ರಸ್ತೆ ಅಪಘಾತಗಳಲ್ಲಿ ತಲೆಯ ಭಾಗಕ್ಕೆ ಪೆಟ್ಟಾಗಿ ಸಾಯುವವರ ಸಂಖ್ಯೆ ಹೆಚ್ಚು ಎಂದು ವೈದ್ಯಕೀಯ ಸಂಶೋಧನೆ ಮತ್ತು ಅಧ್ಯಯನದಿಂದ ದೃಢಪಟ್ಟಿದೆ. ಸವಾರರ ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯಗಳು ಹಾಗೂ ಸರ್ಕಾರ ಸಾಕಷ್ಟು ಸಂಚಾರ ನಿಯಮಗಳನ್ನು ರೂಪಿಸಿವೆ. ಆದರೆ, ಈ ನಿಯಮಗಳ ಅನುಷ್ಠಾನದಲ್ಲಿ ಪೊಲೀಸ್‌ ಇಲಾಖೆ ಎಡವಿದೆ.

ಕಡತಕ್ಕೆ ಸೀಮಿತ: ಐಎಸ್‌ಐ ಮುದ್ರೆಯಿರುವ ಹೆಲ್ಮೆಟ್‌ ಧರಿಸದೆ ಅಪಘಾತಕ್ಕೀಡಾಗಿ ಬೈಕ್‌ ಸವಾರ ಮೃತಪಟ್ಟರೆ ಅಥವಾ ಅಂಗ ಊನವಾದರೆ ವಿಮಾ ಕಂಪೆನಿಗಳು ವಿಮೆ ಹಣ ಪಾವತಿಸಬಾರದು ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಹೆಲ್ಮೆಟ್‌ ಧರಿಸುವುದೆಂದರೆ ನೆಪಕ್ಕೆ ಯಾವುದೊ ಒಂದು ಹೆಲ್ಮೆಟ್‌ ಹಾಕಿಕೊಳ್ಳುವುದಲ್ಲ. ಮೋಟಾರು ವಾಹನ ಕಾಯ್ದೆ (ಕೆಎಂವಿ) 1988ರ ನಿಯಮ 230ರ ಪ್ರಕಾರ ಬೈಕ್‌ ಸವಾರರು (ಹಿಂಬದಿ

ಸವಾರರು ಸೇರಿದಂತೆ) ಕಡ್ಡಾಯವಾಗಿ ರಕ್ಷಣಾತ್ಮಕ ಹೆಲ್ಮೆಟ್‌ ಧರಿಸಬೇಕು. ಜತೆಗೆ ಹೆಲ್ಮೆಟ್‌ ಮೇಲೆ

ಐಎಸ್‌ಐ 4151: 1993 ಮುದ್ರೆ ಇರಬೇಕೆಂದು ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ಹೆಲ್ಮೆಟ್‌ ಮೇಲೆ ತಯಾರಿಕಾ ಕಂಪೆನಿ ಹೆಸರು, ಉತ್ಪಾದನಾ ದಿನಾಂಕ, ವರ್ಷ ಮತ್ತು ಗಾತ್ರದ ವಿವರವನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಆ ವಿವರವು ಅಳಿಸಿ ಹೋಗವಂತಿರಬಾರದು ಹಾಗೂ ಸುಲಭವಾಗಿ ಓದುವಂತೆ ಇರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆದರೆ, ಈ ತೀರ್ಪಿನ ಷರತ್ತುಗಳು ಕಡತಕ್ಕಷ್ಟೇ ಸೀಮಿತವಾಗಿವೆ. ಬೆರಳೆಣಿಕೆ ಬೈಕ್‌ ಸವಾರರು ಹೆಲ್ಮೆಟ್‌ ಧರಿಸುತ್ತಿದ್ದಾರೆ. ಕೆಲ ಸವಾರರು ನೆಪ ಮಾತ್ರಕ್ಕೆ ಟೋಪಿ ಮಾದರಿಯ ಅರ್ಧ ಹೆಲ್ಮೆಟ್‌ಗಳನ್ನು ಧರಿಸುತ್ತಿದ್ದಾರೆ. ಮತ್ತೆ ಕೆಲ ಸವಾರರು ಹಣ ಉಳಿಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಬೆಲೆಯ ಐಎಸ್‌ಐ ಮುದ್ರೆಯಿಲ್ಲದ ಹೆಲ್ಮೆಟ್‌ಗಳನ್ನು ಖರೀದಿಸಿ ಧರಿಸುತ್ತಿದ್ದಾರೆ.

ಗ್ರಾಹಕರಿಗೆ ವಂಚನೆ: ಹೆಚ್ಚಿನ ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶ, ಸರ್ಕಾರಿ ಕಚೇರಿಗಳು, ಪಾದಚಾರಿ ಮಾರ್ಗದಲ್ಲಿ ಹಾಗೂ ಹೆದ್ದಾರಿ ಬದಿಯಲ್ಲಿ ಹೆಲ್ಮೆಟ್ ಮಾರಾಟ ಮಳಿಗೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಈ ಮಳಿಗೆಗಳಲ್ಲಿ ಐಎಸ್‌ಐ ಮುದ್ರೆಯಿಲ್ಲದ ಕಳಪೆ ಹೆಲ್ಮೆಟ್‌ಗಳನ್ನು ಮಾರಲಾಗುತ್ತಿದೆ. ಕೆಲವೆಡೆ ಹೆಲ್ಮೆಟ್‌ಗಳ ಮೇಲೆ ನಕಲಿ ಐಎಸ್‌ಐ ಮುದ್ರೆ ಹಾಕಿ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸಲಾಗುತ್ತಿದೆ.

ದಂಡವೆಷ್ಟು: ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದರೆ ಪೊಲೀಸರು ಮೊದಲ ಬಾರಿಗೆ ₹ 100, ಎರಡನೇ ಬಾರಿಗೆ ₹ 200 ಹಾಗೂ ಮೂರನೇ ಬಾರಿಗೆ ₹ 300 ದಂಡ ವಿಧಿಸುತ್ತಾರೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಅಂತಹ ಸವಾರರ ಚಾಲನಾ ಪರವಾನಗಿ (ಡಿ.ಎಲ್‌) ರದ್ದುಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ

(ಆರ್‌ಟಿಒ) ಶಿಫಾರಸು ಮಾಡಲು ಅವಕಾಶವಿದೆ. ಆದರೆ, ಈ ನಿಯಮವು ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

***

ಐಎಸ್‌ಐ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ಸಂಬಂಧ ಇಲಾಖೆಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ.

ರೋಹಿಣಿ ಕಟೋಚ್‌ ಸೆಪಟ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry