ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

7
ಗೆಜೆಟ್‌ನಲ್ಲಿ ಹೊಸ ಜಾಹೀರಾತು ನೀತಿ ಪ್ರಕಟ

ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

Published:
Updated:
ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

ರಾಮನಗರ: ನಗರದೆಲ್ಲೆಡೆ ರಾರಾಜಿಸುತ್ತಿರುವ ಅಕ್ರಮ ಜಾಹೀರಾತು ಫಲಕಗಳ ಕಡಿವಾಣಕ್ಕೆ ಇಲ್ಲಿನ ನಗರಸಭೆ ಹೊಸ ಅಸ್ತ್ರ ಪ್ರಯೋಗಿಸಿದೆ. ನಗರದ ವ್ಯಾಪ್ತಿಯಲ್ಲಿ ಜಾಹೀರಾತು ನೀತಿ ಜಾರಿಗೊಳಿಸಲಾಗುತ್ತಿದ್ದು, ಗೆಜೆಟ್‌ ಪ್ರಕಟಣೆಯೂ ಹೊರಬಿದ್ದಿದೆ.

ನಗರದ ಒಳಗೆ ಇಂದು ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಹಬ್ಬಕ್ಕೆ ಶುಭಾಶಯ ಕೋರುವವರು, ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಶಯ ಹೇಳುವವರು ಆಳೆತ್ತರದ ಫಲಕಗಳನ್ನು ತೂಗುಬಿಟ್ಟಿದ್ದಾರೆ. ನಾನಾ ರಾಜಕೀಯ ಪಕ್ಷಗಳು ಈ ಫಲಕಗಳನ್ನು ಹಾಕುವಲ್ಲಿ ಪೈಪೋಟಿಗೆ ಬಿದ್ದಿವೆ. ಆದರೆ, ಫ್ಲೆಕ್ಸ್‌ ಹಾಕುವ ಉತ್ಸಾಹವನ್ನು ಅದಕ್ಕೆ ಅನುಮತಿ ಪಡೆಯುವಲ್ಲಿ ತೋರಿಲ್ಲ. ಇಂತಹ ಅಕ್ರಮ ಫಲಕಗಳನ್ನು ತೆರವುಗೊಳಿಸುವ ಜೊತೆಗೆ ಅದನ್ನು ಹಾಕಿದವರ ಮೇಲೆ ಕ್ರಮ ಜರುಗಿಸಲು ನಗರಸಭೆ ಮುಂದಾಗಿದೆ.

ಜಾಹೀರಾತು ನೀತಿ: ಅನಧಿಕೃತ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರೊಬ್ಬರು ವರ್ಷದ ಹಿಂದೆ ಲೋಕಾಯುಕ್ತದ ಮೊರೆ ಹೋಗಿದ್ದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಅದರಂತೆ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಜಾಹೀರಾತು ನೀತಿಯನ್ನು ರೂಪಿಸಿದ್ದು, ಅದಕ್ಕೆ ಕೆಲವು ದಿನದ ಹಿಂದಷ್ಟೇ ಗೆಜೆಟ್ ಮನ್ನಣೆಯೂ ಸಿಕ್ಕಿದೆ.‌‌

ಶುಲ್ಕ ನಿಗದಿ: ಹೊಸ ಜಾಹೀರಾತು ನೀತಿಯಂತೆ ನಗರದ ವ್ಯಾಪ್ತಿಯಲ್ಲಿ ಎಲ್ಲಿಯೇ ಜಾಹೀರಾತು ಫಲಕ ಅಳವಡಿಸಿದರೂ ಅದಕ್ಕೆ ನಗರಸಭೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಹೀಗೆ ಅಳವಡಿಸಲಾಗುವ ಫಲಕಗಳಿಗೆ ನಗರಸಭೆ ಒಂದು ದಿನಕ್ಕೆ ಪ್ರತಿ ಚದರ ಅಡಿಗೆ ₹1 ಶುಲ್ಕ ನಿಗದಿಪಡಿಸಿದೆ. ಅವಧಿ ಮುಗಿದ ಬಳಿಕ ಜಾಹೀರಾತು ಹಾಕಿದವರೇ ಅದನ್ನು ತೆರವುಗೊಳಿಸಬೇಕಾಗುತ್ತದೆ.‌

‘ಹೊಸ ನೀತಿಯ ಅನ್ವಯ ಜಾಹೀರಾತು ಹಾಕುವವರು ಮೂರು ದಿನ ಮೊದಲೇ ನಗರಸಭೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಜಾಹೀರಾತಿನ ಮೇಲೆ ಅದನ್ನು ಪ್ರಕಟಿಸುವವರ ಹೆಸರು, ಮುದ್ರಕರ ಹೆಸರು, ಪರವಾನಗಿ ಅವಧಿ ಎಲ್ಲವನ್ನೂ ಪ್ರಕಟಿಸಬೇಕು’ ಎಂದು ನಗರಸಭೆ ಆಯುಕ್ತ ಕೆ. ಮಾಯಣ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗೃತಿ ಕಾರ್ಯಕ್ರಮ: ಹೊಸ ಜಾಹೀರಾತು ನೀತಿಯ ಕುರಿತು ಮೊದಲ ಹಂತದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ನಗರಸಭೆ ಯೋಜಿಸಿದೆ. ಕರಪತ್ರ ಮುದ್ರಿಸಿ ಹಂಚುವುದು, ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಸಂಘ–ಸಂಸ್ಥೆಗಳಿಗೆ ಅಂಚೆ ಪತ್ರ ಕಳುಹಿಸುವುದು ಇದರಲ್ಲಿ ಸೇರಿದೆ.

ನೋಟಿಸ್‌: ಅಕ್ರಮ ಜಾಹೀರಾತುಗಳ ನಿಯಂತ್ರಣದಲ್ಲಿ ಮುದ್ರಣ ಘಟಕಗಳ ಮಾಲೀಕರ ಪಾತ್ರವೂ ಇದೆ. ತಮ್ಮಲ್ಲಿ ಮುದ್ರಣಕ್ಕೆಂದು ಬರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಗೆ ಅನುಮತಿ ಪಡೆಯಲಾಗಿದೆಯೇ ಎಂದು ಅವರು ಪರಿಶೀಲಿಸಬೇಕಾಗುತ್ತದೆ. ಅನುಮತಿ ಪಡೆದಿರುವ ಮತ್ತು ಅಷ್ಟೇ ಸಂಖ್ಯೆಯ ಜಾಹೀರಾತು ಮುದ್ರಿಸಿಕೊಡಬೇಕು ಎಂದು ಜಾಹೀರಾತು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಮುಂದಿನ ಹಂತದಲ್ಲಿ ಮುದ್ರಣ ಘಟಕಗಳ ಮಾಲೀಕರಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗುವುದು ಎಂದು ವಿವರಿಸುತ್ತಾರೆ ಮಾಯಣ್ಣ ಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry