ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವಣ್ಣನ ಗುತ್ತಿಗೆ ಹಿಡಿದವರಂತೆ ವರ್ತನೆ’

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ‘ಕೆಲ ಸ್ವಯಂ ಘೋಷಿತ ಮಠಾಧೀಶರು ಬಸವಣ್ಣನನ್ನು ಗುತ್ತಿಗೆ ಪಡೆದವರಂತೆ ಇಡೀ ವ್ಯವಸ್ಥೆಯನ್ನೇ ಕೆಡಿಸುತ್ತಿದ್ದಾರೆ’ ಎಂದು ರಂಭಾಪುರಿ ಮಠದ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಸುತ್ತೂರು ಕ್ಷೇತ್ರದ ಜಾತ್ರೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಕೆಲ ಮಠಾಧೀಶರು, ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ಪವಿತ್ರ ಧರ್ಮದೊಳಗೆ ರಾಜಕೀಯ ನುಸುಳಿದೆ. ರಾಜಕೀಯ ಧುರೀಣರು ಜಾತಿ ಹೆಸರಿನಲ್ಲಿ ಧರ್ಮ ಒಡೆಯುತ್ತಿದ್ದಾರೆ. ಧರ್ಮದ ಗೌರವ ಕುಂದಿಸುವ, ಸಂಸ್ಕೃತಿ ನಾಶಪಡಿಸುವ ಕೆಲಸ ನಡೆಯುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ’ ಎಂದು ವಿಷಾದಿಸಿದರು.

‘ಹೊರಗಿನ ವೈರಿಗಳಿಗಿಂತ ಒಳಗಿನ ವೈರಿಗಳಿಂದ ವೀರಶೈವ ಧರ್ಮಕ್ಕೆ ಸಂಕಟ ಎದುರಾಗಿದೆ. ಕೆಲ ಮಠಾಧೀಶರು ಅಗೌರವದಿಂದ ವರ್ತಿಸುತ್ತಿರುವುದರಿಂದ ಧರ್ಮದಲ್ಲಿ ಸಂಘರ್ಷ ಏರ್ಪಟ್ಟಿದೆ. ಆದರೆ, ಧರ್ಮಕ್ಕೆ ಒಂದು ದಾರಿ, ಅನ್ಯಾಯಕ್ಕೆ ಹಲವು ದಾರಿ’ ಎಂದು ನುಡಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಪ್ರಾಮಾಣಿಕವಾಗಿ, ನಿರ್ವಂಚನೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ, ಧರ್ಮದಲ್ಲಿ ಹಿಂದೆಂದೂ ಕಾಣದ ಆಂತರಿಕ ಸಂಘರ್ಷ ನಡೆದು ಮನಸ್ಸುಗಳು ಛಿದ್ರವಾಗುತ್ತಿವೆ. ಸಮಾಜದಲ್ಲಿ ಅಶಾಂತಿ ನೆಲೆಸಿದೆ’ ಎಂದು ಕುಟುಕಿದರು.

‘ಧರ್ಮ ರಕ್ಷಣೆ ಹೇಗೆ ಎಂಬುದು ನಮಗೆ ಗೊತ್ತಿದೆ. ರಾಜಕಾರಣಿಗಳು ತಮ್ಮ ಕೆಲಸ ಮಾಡಲಿ. ಧರ್ಮದೊಳಗೆ ರಾಜಕೀಯ ಬೆರೆಸಿ ಕಲುಷಿತಗೊಳಿಸಬೇಡಿ’ ಎಂದು ಎಚ್ಚರಿಕೆ ನೀಡಿದರು.

‘ದೇಶ ಹಾಗೂ ಧರ್ಮ ಎರಡು ಕಣ್ಣುಗಳು ಇದ್ದಂತೆ. ವೀರಶೈವ ಧರ್ಮ ಮಾನವೀಯತೆ ಎತ್ತಿ ಹಿಡಿದಿದೆ. ಎಲ್ಲರನ್ನು ಒಂದುಗೂಡಿಸುತ್ತಿದೆ. ಇಂಥ ಧರ್ಮಕ್ಕೆ ಈಗ ಆಪತ್ತು ಬಂದಿದೆ. ನಮ್ಮ ಸ್ಥಾನಮಾನವನ್ನು ಬದಿಗಿರಿಸಿ ಹೋರಾಟ ನಡೆಸಬೇಕಿದೆ. ಸಮಾಜದ ವಿಷಮ ವಾತಾವರಣ ಹೋಗಲಾಡಿಸಲು ಎಲ್ಲ ಮಠಗಳು ಒಂದುಗೂಡಬೇಕಿದೆ. ಅಖಿಲ ಭಾರತ ವೀರಶೈವ ಮಹಾಸಭೆ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಸುತ್ತೂರು ಮಠಕ್ಕೂ ರಂಭಾಪುರಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮೈಸೂರು ಭಾಗದಲ್ಲಿ ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ಭಾವನೆ ಇದೆ ಎಂದರು.

ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇದ್ದರು.

ವೀರಶೈವ ಮಹಾಸಭಾ ಬಹಿಷ್ಕರಿಸಲು ನಿರ್ಣಯ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಲಿಂಗಾಯತರು ಬಹಿಷ್ಕರಿಸಬೇಕು. ಅದರ ಸದಸ್ಯತ್ವ ತೊರೆದು ಹೊರಬರಬೇಕು ಹಾಗೂ ರಾಜ್ಯ ಸರ್ಕಾರವು, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮಾರ್ಚ್‌ 1ರ ಒಳಗಾಗಿ ಶಿಫಾರಸು ಸಲ್ಲಿಸಬೇಕು’ ಎಂಬುದು ಸೇರಿದಂತೆ ಆರು ಪ್ರಮುಖ ನಿರ್ಣಯಗಳನ್ನು,  ಕೂಡಲಸಂಗಮದ 31ನೇ ಶರಣಮೇಳದಲ್ಲಿ ಕೈಗೊಳ್ಳಲಾಗಿದೆ.

ಶರಣ ಮೇಳದ ಕೊನೆಯ ದಿನವಾದ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ, ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಿರ್ಣಯ ಮಂಡಿಸಿದರು. ಉಪಸ್ಥಿತರಿದ್ದ ಭಕ್ತರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು.

ಇತರ ನಿರ್ಣಯಗಳು:
1 ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಶಿಫಾರಸು ಮಾಡುವ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಿದ್ದು ಅಭಿನಂದನೀಯ. ಆದರೆ, ಸಮಿತಿಯು ಒಂದು ತಿಂಗಳ ಒಳಗಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಮಾ.1ರೊಳಗಾಗಿ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು.

2 ತಜ್ಞರ ಸಮಿತಿ ತಿಂಗಳೊಳಗಾಗಿ ವರದಿ ನೀಡದಿದ್ದರೆ, ಮುಖ್ಯಮಂತ್ರಿ ತಾವೇ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

3 ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಆದಷ್ಟು ಬೇಗ ‘ಬಸವೇಶ್ವರರ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಬೇಕು.

4 ಲಿಂಗಾಯತ ಹೋರಾಟಗಾರರು ಸ್ಥಾಪಿಸುತ್ತಿರುವ ವಿಶ್ವಲಿಂಗಾಯತ ಪರಿಷತ್ತಿಗೆ ರಾಷ್ಟ್ರೀಯ ಬಸವ ದಳ ಹಾಗೂ ಬಸವ ಧರ್ಮ ಪೀಠದ ಸಂಪೂರ್ಣ ಬೆಂಬಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT