‘ಬಯಲು ಶೌಚ ಮುಕ್ತ’ ಗ್ರಾಮದಲ್ಲಿ ನೀರಿನದ್ದೇ ಸಮಸ್ಯೆ

7

‘ಬಯಲು ಶೌಚ ಮುಕ್ತ’ ಗ್ರಾಮದಲ್ಲಿ ನೀರಿನದ್ದೇ ಸಮಸ್ಯೆ

Published:
Updated:
‘ಬಯಲು ಶೌಚ ಮುಕ್ತ’ ಗ್ರಾಮದಲ್ಲಿ ನೀರಿನದ್ದೇ ಸಮಸ್ಯೆ

ಕವಿತಾಳ: ಮಸ್ಕಿ ವಿಧಾನಸಭೆ ಕ್ಷೇತ್ರದ ತೋರಣದಿನ್ನಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗಾಳಿ ದುರಗಮ್ಮ ಕ್ಯಾಂಪ್‌ ರಾಯಚೂರು ಜಿಲ್ಲೆಯಲ್ಲಿ ‘ಬಯಲು ಶೌಚ ಮುಕ್ತ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಈ ಘೋಷಣೆ ಮಾಡಿದ ಜಿಲ್ಲಾಡಳಿತ ಹಲವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಆಂಧ್ರಪ್ರದೇಶದ 60 ಹಾಗೂ ರಾಜ್ಯದ 40 ಬಡ ಕೂಲಿಕಾರ ಕುಟುಂಬಗಳು ಇಲ್ಲಿ ವಾಸವಾಗಿವೆ. ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ದೂಳು ವಿಪರೀತವಾಗಿದೆ. ಶುದ್ಧ ಕುಡಿಯುವ ನೀರು ಒದಗಿಸಲು ನಿರ್ಮಾಣ ಮಾಡಲಾಗಿರುವ ಶುದ್ಧೀಕರಣ ಘಟಕದ ಯಂತ್ರ ಹಾಳಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ಹಣ ವೆಚ್ಚ ಮಾಡಿ ಸ್ಥಾಪಿಸಿದ ಶುದ್ಧೀಕರಣ ಘಟಕ ನಿರುಪಯುಕ್ತವಾಗಿದೆ. ದುರಸ್ತಿ ವಿಳಂಬವಾದ ಕಾರಣ ಬಹುತೇಕ ಆಂಧ್ರ ಕುಟುಂಬಗಳು ಮನೆಗೊಂದು ಕುಡಿಯುವ ನೀರಿನ ಫಿಲ್ಟರ್‌ ಅಳವಡಿಸಿಕೊಂಡಿದ್ದು, ಬಡ ಕೂಲಿಕಾರರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಬಸಾಪುರ ಕೆರೆಯಿಂದ ತುಂಗಭದ್ರ ಕಾಲುವೆಯ ನೀರು ಸರಬರಾಜು ಮಾಡಲಾಗಿತ್ತು ಆದರೆ ಕಳೆದ ಒಂದು ವರ್ಷದಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದು, ತೋರಣದಿನ್ನಿಯ ಕೊಳವೆಭಾವಿಯಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಆದರೆ ಪೈಪ್‌ಲೈನ್‌ ಅವ್ಯವಸ್ಥೆಯಿಂದ ಹೆಚ್ಚಿನ ಪ್ರಮಾಣದ ನೀರು ಚರಂಡಿಗೆ ಸೇರುತ್ತಿದೆ. ಈಗಲೂ ನೀರಿನ ತೊಂದರೆ ತಪ್ಪಿಲ್ಲ ಎಂದು ಕ್ಯಾಂಪ್‌ ನಿವಾಸಿಗಳು ಆರೋಪಿಸುತ್ತಾರೆ.

ಹಿರೇದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಅಂದಾಜು ₹1 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ಪಕ್ಕದಲ್ಲಿಯೇ ನೀರಿನ ಪೈಪ್‌ಲೈನ್‌ ಅಳವಡಿಸಿರುವುದರಿಂದ ಪೈಪ್‌ ಹೊಡೆದು ಕಲುಷಿತ ನೀರು ಸರಬರಾಜು ಆಗುತ್ತಿದೆ’ ಎನ್ನುವುದು ಸಾರ್ವಜನಿಕರ ಆರೋಪ.

‘ಬಯಲು ಶೌಚ ಮುಕ್ತ’ ಘೋಷಣೆಯಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕೂಲಿಕಾರರು ವಾಸಿಸುವಲ್ಲಿ ಚರಂಡಿ ಮತ್ತು ರಸ್ತೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ವೆಂಕಟೇಶ ಶಂಕ್ರಿ ಒತ್ತಾಯಿಸಿದ್ದಾರೆ.

* *

ನೀರಿನ ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದುರಸ್ತಿಗೆ ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

ರತ್ನಮ್ಮ ವೆಂಕೋಬ ಅರಕೇರಿ ಜಿಲ್ಲಾ ಪಂಚಾಯಿತಿ ಸದಸ್ಯೆ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry