ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ವಂಶಸ್ಥರಿಂದ ಕಡುಬಿನ ಕಾಳಗ!

Last Updated 16 ಜನವರಿ 2018, 9:06 IST
ಅಕ್ಷರ ಗಾತ್ರ

ಹೊಳಲ್ಕೆರೆ: ಬಡಿಗೆ, ಕೋಲು, ಕಲ್ಲು, ಟೊಮೆಟೊ, ಕೋಳಿಮೊಟ್ಟೆಯಲ್ಲಿ ಹೊಡೆದಾಡುವ ಆಚರಣೆಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಸಂಕ್ರಾಂತಿಯ ಅಂಗವಾಗಿ ರಾಗಿಮುದ್ದೆಯಲ್ಲಿ ಬಡಿದಾಡುವ ವಿಶಿಷ್ಟ ಆಚರಣೆ ನಡೆಯುತ್ತದೆ! ತಾಲ್ಲೂಕಿನ ನಂದನಹೊಸೂರು ಹಾಗೂ ಮತಿಘಟ್ಟ ಗ್ರಾಮದ ಗೌಡರ ಮನೆಯ ವಂಶಸ್ಥರು ಹೊರಕೆರೆ ದೇವರಪುರದ ಲಕ್ಷ್ಮೀ ನರಸಿಂಹಸ್ವಾಮಿಯ ಸನ್ನಿಧಿಯಲ್ಲಿ ಈ ಆಚರಣೆ ಮಾಡುತ್ತಾರೆ.

ಗ್ರಾಮದ ಹೊರವಲಯದಲ್ಲಿರುವ ಕಲ್ಯಾಣಿ ಸಮೀಪದ ನಾಗರಕಟ್ಟೆ ಮುಂಭಾಗ ಈ ಆಚರಣೆ ನಡೆಯುತ್ತದೆ. ಸಂಕ್ರಾಂತಿಯಂದು ಈ ವಿಶಿಷ್ಟ ಆಚರಣೆ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸೋಮವಾರ ರಾತ್ರಿ ಎಚ್.ಡಿ.ಪುರದಲ್ಲಿ ಕಡುಬಿನ ಕಾಳಗ ನಡೆಯಿತು. ನಂದನಹೊಸೂರು ಮತ್ತು ಮತಿಘಟ್ಟ ಗ್ರಾಮಗಳ ಗೌಡರ ವಠಾರದವರು ರಾಗಿ ಮುದ್ದೆಯೊಂದಿಗೆ ಈ ಸ್ಥಳಕ್ಕೆ ಬರುತ್ತಾರೆ. ಪೂಜಾ ವಿಧಿವಿಧಾನಗಳು ಮುಗಿದ ನಂತರ ಎರಡೂ ಕಡೆಯವರು ಒಬ್ಬರ ಮೇಲೆ, ಒಬ್ಬರು ಮುದ್ದೆ ಎಸೆಯುತ್ತಾರೆ. ಹತ್ತಾರು ಮುದ್ದೆಗಳನ್ನು ಎಸೆದ ನಂತರ ಕಡುಬಿನ ಕಾಳಗಕ್ಕೆ ತೆರೆ ಬೀಳುತ್ತದೆ.

ಹೆಚ್ಚು ಮುದ್ದೆ ಎಸೆದವರು ಗೆದ್ದಂತೆ: ‘ನಂದನಹೊಸೂರು ಮತ್ತು ಮತಿಘಟ್ಟ ಗ್ರಾಮದ ಗೌಡರ ಮನೆತನದವರು ಎಚ್.ಡಿ.ಪುರದ ಹೊಂಡದಕಟ್ಟೆ ಸಮೀಪ ಬಂದು ಸೇರುತ್ತಾರೆ. ಎರಡೂ ಕಡೆಯವರು ಮುದ್ದೆ ಎಸೆಯುವ ಮೂಲಕ ಕಡುಬಿನ ಕಾಳಗ ನಡೆಸುತ್ತಾರೆ. ಹೆಚ್ಚು ಮುದ್ದೆ ಎಸೆದವರು ವಿಜೇತರಾದಂತೆ’ ಎನ್ನುತ್ತಾರೆ ನಂದನ ಹೊಸೂರು ಗ್ರಾಮದ ಮಂಜುನಾಥ. ಕಡುಬಿನ ಕಾಳಗ ಮುಗಿದ ನಂತರ ಬೇಯಿಸಿದ ಅವರೆ ಕಾಯಿಗಳನ್ನು ಹಂಚಲಾಗುತ್ತದೆ.

ಮೊಲ ಬಿಡುವ ಆಚರಣೆ: ಸಂಕ್ರಾಂತಿ ಹಬ್ಬದಂದು ಎಚ್.ಡಿ.ಪುರದಲ್ಲಿ ಮೊಲವೊಂದನ್ನು ಕಾಡಿಗೆ ಬಿಡಲಾಗುತ್ತದೆ. ಕಣಿವೆಜೋಗಿಹಳ್ಳಿಯ ಭಕ್ತರು ಮೊಲ ತಂದು ಕೊಡುತ್ತಾರೆ. ಮೊಲಕ್ಕೆ ಪೂಜೆ ಸಲ್ಲಿಸಿ ಕಾಡಿಗೆ ಬಿಡಲಾಗುತ್ತದೆ. ಹಿಂದೆ ಮೊಲದ ಕಿವಿಗೆ ಬಂಗಾರದ ಮುರ (ಕಿವಿಗೆ ಧರಿಸುವ ಆಭರಣ) ಚುಚ್ಚಿ ಬಿಡುತ್ತಿದ್ದರು. ಈಗ ಸಾಂಕೇತಿಕವಾಗಿ ಪೂಜೆ ಮಾಡಿ ಕಾಡಿಗೆ ಬಿಡಲಾಗುತ್ತದೆ ಎನ್ನುತ್ತಾರೆ ಎಚ್.ಡಿ.ಪುರ ಗ್ರಾಮದ ಮಹಂತೇಶ್.

ಸೌಹಾರ್ದದ ಸಂಕೇತ!

‘ನಮ್ಮ ಊರಿನಲ್ಲಿ ಸಂಕ್ರಾಂತಿ ಹಬ್ಬದಂದು ನಡೆಯುವ ಕಡುಬಿನ ಕಾಳಗ ವಿಶೇಷ ಆಚರಣೆ. ಹಿಂದೆ ಅಕ್ಕಪಕ್ಕದ ಗ್ರಾಮಗಳಲ್ಲಿ ಜಗಳ ನಡೆದಾಗ ನಮ್ಮ ಊರಿನ ಹಿರಿಯರು ಪಂಚಾಯ್ತಿ ನಡೆಸಿ ರಾಜಿ ಮಾಡಿಸುತ್ತಿದ್ದರಂತೆ. ನಮ್ಮೂರಿನ ಲಕ್ಷ್ಮೀ ನರಸಿಂಹಸ್ವಾಮಿ ಕೂಡ ಪವಾಡ ಪುರುಷನಾಗಿದ್ದು, ಎಲ್ಲರನ್ನು ಒಗ್ಗೂಡಿಸುತ್ತಿದ್ದನಂತೆ. ಇದರ ಸಂಕೇತವಾವಾಗಿ ಪಕ್ಕದ ನಂದನಹೊಸೂರು, ಮತಿಘಟ್ಟ ಗ್ರಾಮಸ್ಥರು ಕಡುಬಿನ ಕಾಳಗ ಎಂಬ ಆಚರಣೆ ನಡೆಸುತ್ತಾರೆ’ ಎನ್ನುತ್ತಾರೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಎಚ್.ಎನ್.ರಂಗಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT