ಕಪ್ಪಿನಲ್ಲುಂಟು ಚೆಲುವು

7

ಕಪ್ಪಿನಲ್ಲುಂಟು ಚೆಲುವು

Published:
Updated:
ಕಪ್ಪಿನಲ್ಲುಂಟು ಚೆಲುವು

ಕ್ಯಾಲೆಂಡರ್‌ಗಳಲ್ಲಿ ಬೆಳ್ಳಗೆ ಕಾಣಿಸಿಕೊಳ್ಳುತ್ತಿದ್ದ ದೇವರುಗಳನ್ನು ಕಪ್ಪುಬಣ್ಣದಲ್ಲಿ ತೋರಿಸುವ ಮೂಲಕ ‘ಕಪ್ಪು ಸುಂದರವಲ್ಲ’ ಎಂಬ ಆಕ್ಷೇಪಕ್ಕೆ ಉತ್ತರ ಕಂಡುಕೊಳ್ಳುವ ಸೃಜನಶೀಲ ಪ್ರಯತ್ನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಚೆನ್ನೈ ಮೂಲದ ಸಿನಿಮಾ ನಿರ್ಮಾಪಕರಾದ ನರೇಶ್‌ ನೀಲ್‌ ಹಾಗೂ ಭಾರದ್ವಾಜ್‌ ಸುಂದರ್‌ ಕಪ್ಪುಬಣ್ಣದ ಸೌಂದರ್ಯವನ್ನು ಎತ್ತಿ ತೋರಲು ವಿಶೇಷ ಪ್ರಯತ್ನವೊಂದನ್ನು ಮಾಡಿದ್ದಾರೆ. ತಮ್ಮ ಭಾವನೆಗಳಿಗೆ ಮೂರ್ತ ರೂಪ ನೀಡುವ ಮೂಲಕ ‘ಆತ್ಮತೃಪ್ತಿಗಾಗಿ ಇದನ್ನು ಮಾಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ತಲೆತಲಾಂತರದಿಂದ ಬಿಳಿಬಣ್ಣದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ದೇವಾನುದೇವತೆಗಳನ್ನು ಇವರು ಕಪ್ಪು ಬಣ್ಣದಲ್ಲಿ ರೂಪಿಸಿದ್ದಾರೆ. ಇದಕ್ಕೆ ‘ಡಾರ್ಕ್‌ ಈಸ್‌ ಡಿವೈನ್‌’ ಎಂಬ ಹೆಸರನ್ನೂ ನೀಡಿದ್ದಾರೆ. ಚಿತ್ರದಲ್ಲಿ ಪುರುಷರು, ಮಹಿಳೆಯರು ಮಕ್ಕಳನ್ನು ಕಪ್ಪು ಬಣ್ಣದಲ್ಲಿ ಕಾಣಿಸಲಾಗಿದೆ. ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ಫೋಟೊಶೂಟ್‌ ಮಾಡಿದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ ಕೆಲ ಸಮಯದಲ್ಲೇ 5 ಸಾವಿರ ಮಂದಿ ಚಿತ್ರವನ್ನು ಶೇರ್‌ ಮಾಡಿರುವರಲ್ಲದೆ, ಸಾವಿರಾರು ಮಂದಿ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ಈ ಪ್ರಯತ್ನವನ್ನು ಕ್ರಾಂತಿಕಾರಿ ನಡೆ ಎಂದರೆ ಈ ಜೋಡಿ ಸುತಾರಾಂ ಒಪ್ಪುವುದಿಲ್ಲ.

‘ಇಷ್ಟೂ ವರ್ಷಗಳ ಕಾಲ ಚಿತ್ರದಲ್ಲಿ, ವಿಡಿಯೊಗಳಲ್ಲಿ ನಾವು ನೋಡುತ್ತಿರುವ ದೇವಾನುದೇವತೆಗಳ ಚಿತ್ರ ವಾಸ್ತವಕ್ಕಿಂತ ಸಾಕಷ್ಟು ದೂರದಲ್ಲಿತ್ತು. ದೇವರನ್ನು ಇದುವರೆಗೆ ಯಾರೂ ನೋಡಿಲ್ಲ. ಆದರೆ ನಮ್ಮ ಪುರಾಣಗಳಲ್ಲಿ ವರ್ಣಿಸಿರುವ ಪ್ರಕಾರ ಸಾಕಷ್ಟು ದೇವತೆಗಳ ಮೈಬಣ್ಣ ಕಪ್ಪು. ಹೀಗಾಗಿ ಈ ಪ್ರಯತ್ನ ಮಾಡಿದೆವು. ಜನರಲ್ಲಿ ಬಿಳಿಯ ಚರ್ಮದ ಕುರಿತಾಗಿ ಇರುವ ಭ್ರಾಂತಿಯನ್ನು ಹೋಗಲಾಡಿಸುವ ಪ್ರಯತ್ನವೂ ಇದರಲ್ಲಿದೆ’ ಎಂದು ಹೇಳಿಕೊಂಡಿದ್ದಾರೆ ನರೇಶ್‌ ಹಾಗೂ ಭಾರದ್ವಾಜ್‌.

ಕಾಲೇಜು ದಿನಗಳಿಂದಲೇ ಇವರು ಸ್ನೇಹಿತರು. ಇವರಿಬ್ಬರೂ ಸೇರಿ 2012ರಲ್ಲಿ ಸ್ಟಾರ್ಟ್‌ಅಪ್‌ ಸಂಸ್ಥೆಯೊಂದನ್ನು ಕಟ್ಟಿಕೊಂಡು ಸಿನಿಮಾ, ಜಾಹೀರಾತು ನಿರ್ಮಾಣ, ಫ್ಯಾಷನ್‌ ಫೋಟೊಗ್ರಫಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸ್ಥೆಯ ಈ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರೊಟ್ಟಿಗೆ ಮನಸ್ಸಿಗೆ ಖುಷಿ ಕೊಡುವ ವಿವಿಧ ಯೋಜನೆಗಳನ್ನು ನಿರ್ವಹಿಸುತ್ತಲೇ ಬಂದಿದೆ ಈ ಜೋಡಿ. ಅಂಥವುಗಳಲ್ಲಿ ಡಾರ್ಕ್‌ ಈಸ್‌ ಡಿವೈನ್‌ ಪರಿಕಲ್ಪನೆಯೂ ಒಂದಾಗಿದೆ. ಚಿತ್ರ ನೋಡಲು: http://bit.ly/2D3ak2z

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry