ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಹನ್ನೆರಡನೆಯ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ನಡೆಸಿದ ಸಮಾಜೋ-ಧಾರ್ಮಿಕ ಚಳವಳಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ್ದನ್ನು ಭಾರತೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಣುತ್ತೇವೆ. ಜಾತಿ, ಮತ, ಪಂಥ ಮತ್ತು ಲಿಂಗಭೇದವಿಲ್ಲದೇ ಎಲ್ಲರೂ ಮುಕ್ತವಾಗಿ ಚಿಂತಿಸುವ, ತಮ್ಮ ಆಂತರಿಕ ಅಭಿಪ್ರಾಯಗಳನ್ನು ವ್ಯಕ್ತಮಾಡುವ ವ್ಯವಸ್ಥೆಯನ್ನು ಶಿವಶರಣರು ಅನುಭವ ಮಂಟಪದಲ್ಲಿ ಅನುಷ್ಠಾನಕ್ಕೆ ತಂದಿದ್ದರು.


ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಕಾರ್ಯ ಮಾಡದೆ ಸಾಮಾಜಿಕ ನ್ಯಾಯಕ್ಕಾಗಿ ಕೃತಸಂಕಲ್ಪರಾಗಬೇಕಾಗುತ್ತದೆ. ಯಾವುದೇ ಸಂಕೋಚ ಹೊಂದದೆ, ಕೀಳರಿಮೆ ತಾಳದೆ, ಪೂರ್ವಗ್ರಹಿಕೆಗಳ ಲೇಪವಿಲ್ಲದೆ ಆಂತರಿಕ ಭಾವನೆಗಳನ್ನು ವ್ಯಕ್ತಮಾಡಬೇಕಾಗುತ್ತದೆ. ಆಳಿಗೊಂಡಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ? ಎಂದು ಬಸವಣ್ಣನವರು ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿಗೆ ಮನಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.


ಬಸವಾದಿ ಶಿವಶರಣರು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂದರ್ಭದಲ್ಲಿ ಹಲವು ಸೂತ್ರಗಳನ್ನು ಹೇಳಿ ಕೊಟ್ಟಿದ್ದಾರೆ. ಬಸವಣ್ಣನವರ ದಿಟವ ನುಡಿವುದು, ನುಡಿದಂತೆ ನಡೆವುದು, ಹುಸಿಯ ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲ ಸಂಗಮದೇವ- ಎಂಬ ವಚನದ ಆಶಯದಂತೆ ಸತ್ಯವನ್ನೇ ನುಡಿಯುವುದು, ನುಡಿದಂತೆ ನಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಯಶಸ್ಸಿನ ಸೂತ್ರವಾಗಿದೆ. ಸ್ವಾರ್ಥಕ್ಕಾಗಿ ಹೇಳಲಾದ ಹುಸಿ ಮಾತುಗಳು ಮತ್ತು ಆತ್ಮಸಾಕ್ಷಿಗೆ ವಿರುದ್ಧವಾದ ಮಾತುಗಳು ಶರಣರ ದೃಷ್ಟಿಯಲ್ಲಿ ಸ್ವತಂತ್ರ ಅಭಿವ್ಯಕ್ತಿಗಳಾಗುವುದಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯದ ಸಂದರ್ಭದಲ್ಲಿ ನಮ್ಮ ನಡೆ-ನುಡಿಗಳಲ್ಲಿ ಸತ್ಯ ಹಾಗು ಸಮನ್ವಯತೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ. ನಾವು ನುಡಿದಂತೆ ನಡೆಯಬೇಕೆನ್ನುವುದೇನೋ ನಿಜ ಆದರೆ ಏನನ್ನು ನುಡಿಯಬೇಕು ಎನ್ನುವುದೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿಯೊಳಗೆ ನಡೆಯ ಪೂರೈಸುವೆ ಎಂಬಂತೆ ಮಂಗಳಕರವಾದ ನಮ್ಮ ಮಾತುಗಳು ನಮ್ಮ ನಡೆಯಲ್ಲಿ ಅನುಷ್ಠಾನಗೊಳ್ಳಬೇಕು. ಹಾಗೆಯೇ ನಮ್ಮ ಮಾತುಗಳು ಹೃದಯಾಂತರಾಳದಿಂದ ಹೊರಹೊಮ್ಮಬೇಕು. ಇದಲ್ಲದೆ ಆನು ಒಲಿದಂತೆ ಹಾಡುವೆ ಕೂಡಲ ಸಂಗಮದೇವಾ ನಿಮಗೆ ಕೇಡಿಲ್ಲವಾಗಿ ಎಂಬ ಬಸವಣ್ಣನವರ ಮಾತಿನತ್ತ ಗಮನ ಹರಿಸಬೇಕು. ಅಂದರೆ ನಾವು ಮಾತನಾಡುವ ಮಾತುಗಳಿಂದ ಯಾವುದೇ ವ್ಯಕ್ತಿ ಅಥವಾ ಸಮಾಜಕ್ಕೆ ಯಾವ ರೀತಿಯಿಂತಲೂ ಹಾನಿಯಾಗಬಾರದು ಎಂಬ ಎಚ್ಚರವಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT