ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಸಂಭ್ರಮದ ವಾತಾವರಣ

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಉಡುಪಿ: ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಮಠದ ಹಾಗೂ ಶ್ರೀಕೃಷ್ಣನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ  ಉಡುಪಿಗೆ ಬರುತ್ತಿದ್ದು, ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.

32ನೇ ಸುತ್ತಿನ ಪರ್ಯಾಯಕ್ಕೆ ಉಡುಪಿಯ ಕೃಷ್ಣ ಮಠವೂ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಅದ್ಧೂರಿ ಪರ್ಯಾಯ ಮೆರವಣಿಗೆ ಬುಧವಾರ (ಜ.17) ಮಧ್ಯರಾತ್ರಿ ನಡೆಯಲಿದೆ. ಡೋಲು, ನಾಸಿಕ್ ಬ್ಯಾಂಡ್, ಚೆಂಡೆ, ವೀರಗಾಸೆ, ಕೋಲಾಟ, ಮರ
ಗೋಲು ಮುಂತಾದ ಬರೋಬ್ಬರಿ 60 ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ನೂರಾರು ಕಲಾವಿದರು ಸಹ ಭಾಗವಹಿಸುವರು. ಸುಮಾರು 2 ಗಂಟೆಗಳ ಕಾಲ ಈ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ನಗರದ ಜೋಡುಕಟ್ಟೆಯಲ್ಲಿ ಈಗಾಗಲೇ ಭರ್ಜರಿ ಸಿದ್ಧತೆ ಮಾಡಲಾಗಿದೆ.

ಮೆರವಣಿಗೆಗೂ ಮೊದಲು ಕಾಪುವಿನ ದಂಡತೀರ್ಥದಲ್ಲಿ ಸ್ವಾಮೀಜಿ ಅವರು ಪವಿತ್ರ ಸ್ನಾನ ಮಾಡುವರು. ಆ ನಂತರ ಜೋಡುಕಟ್ಟೆಗೆ ಆಗಮಿಸಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುವರು. ಮೆರವಣಿಗೆಯಲ್ಲಿ ಸಾಗಿ ಬಂದು ಗುರುವಾರ ಬೆಳಿಗ್ಗೆ 6 ಗಂಟೆಗೆ ಸರ್ವಜ್ಞ ಪೀಠವನ್ನು ಏರುವ ಮೂಲಕ ಕೃಷ್ಣನ ಪೂಜೆ ಆರಂಭಿಸುವರು.

ಸಾವಿರಾರು ಜನರಿಗೆ ಪ್ರಸಾದ: ಈಗಾಗಲೇ ಸಾವಿರಾರು ಸಂಖ್ಯೆಯ ಜನರು ಪರ್ಯಾಯ ವೀಕ್ಷಣೆಗೆ ಬಂದಿದ್ದಾರೆ. ಆದ್ದರಿಂದ ಬುಧವಾರ ರಾತ್ರಿಯೂ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ 7ರಿಂದ 9 ಗಂಟೆಯ ವರೆಗೆ ಪ್ರಸಾದ ವಿತರಣೆ ನಡೆಯಲಿದೆ. ಗುರುವಾರ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಸುಮಾರು 50 ಸಾವಿರ ಜನರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ 40 ಸಾವಿರ ಲಾಡು, ಅಷ್ಟೇ ಪ್ರಮಾಣದಲ್ಲಿ ಮೈಸೂರುಪಾಕ್‌, ಅಕ್ಕಿ ವಡೆ ತಯಾರಿಸಲಾಗಿದೆ. 800 ಕೆ.ಜಿ.ತುಪ್ಪ ಬಳಸಲಾಗಿದೆ.

ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ತಡೆ ಇಲ್ಲದೆ ನಡೆಯುವ ಅಖಂಡ ಭಜನೋತ್ಸವಕ್ಕೆ ಸಹ ಚಾಲನೆ ನೀಡಲಾಗುತ್ತದೆ. ನಿರಂತರ ಜ್ಞಾನ ಯಜ್ಞ ಪ್ರವಚನ ಕಾರ್ಯಕ್ರಮವೂ ಉದ್ಘಾಟನೆಗೊಳ್ಳಲಿದೆ.

ಆನಂದತೀರ್ಥ ಮಂಟಪದಲ್ಲಿ ಗುರುವಾರ ನಸುಕಿನಲ್ಲಿ ನಡೆಯುವ ಪರ್ಯಾಯ ದರ್ಬಾರ್‌ ಕಾರ್ಯಕ್ರಮದಲ್ಲಿ ಅಷ್ಟ ಮಠಾಧೀಶರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT