ಸಾಹಿತ್ಯ ಸಮ್ಮೇಳನಕ್ಕೆ ಭಿತ್ತಿಚಿತ್ರಗಳ ಸ್ವಾಗತ

7

ಸಾಹಿತ್ಯ ಸಮ್ಮೇಳನಕ್ಕೆ ಭಿತ್ತಿಚಿತ್ರಗಳ ಸ್ವಾಗತ

Published:
Updated:
ಸಾಹಿತ್ಯ ಸಮ್ಮೇಳನಕ್ಕೆ ಭಿತ್ತಿಚಿತ್ರಗಳ ಸ್ವಾಗತ

ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಜನವರಿ 19, 20ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನ ನಡೆಯುವ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದ ಸ್ವಚ್ಛತೆ, ವೇದಿಕೆ ನಿರ್ಮಾಣ ಮತ್ತಿತರ ಕಾರ್ಯಗಳು ಆರಂಭಗೊಂಡಿದ್ದು, ವಿಶೇಷವಾಗಿ ಶಾಲೆಯ ಅಂದ ಚೆಂದ ಹೆಚ್ಚಿಸುವ ಕೆಲಸ ಸಹ ನಡೆಯುತ್ತಿದೆ. ಶಾಲೆಯ ಕೊಠಡಿಗಳ ಗೋಡೆಗಳು, ಕಾಂಪೌಂಡ್‌ ಗೋಡೆಯ ಒಳ ಹಾಗೂ ಹೊರಮೈ ಭಾಗದಲ್ಲಿ ಭಿತ್ತಿಚಿತ್ರಗಳನ್ನು ಬರೆಯಲಾಗುತ್ತಿದೆ.

ಶಾಲೆಯ ಚಿತ್ರಕಲಾ ಶಿಕ್ಷಕ ಅಮರೇಶ ಮತ್ತು ಅವರ ಸ್ನೇಹಿತರು ಸ್ವಯಂ ಆಸಕ್ತಿ ವಹಿಸಿ ಮೂರು ದಿನಗಳಿಂದ ಭಿತ್ತಿಚಿತ್ರಗಳನ್ನು ಬರೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಕಲೆಗಳು, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ಮತ್ತು ಸಾಹಿತ್ಯಾಸಕ್ತರನ್ನು ಸಮ್ಮೇಳನಕ್ಕೆ ಸ್ವಾಗತಿಸುವ ನುಡಿಮುತ್ತುಗಳು, ಗಾದೆಮಾತುಗಳನ್ನು ಎಲ್ಲೆಡೆ ಬರೆಯಲಾಗುತ್ತಿದೆ.

ಈ ಕುರಿತು ಮಾತನಾಡಿದ ಚಿತ್ರಕಲಾ ಶಿಕ್ಷಕ ಅಮರೇಶ, ‘ ಗ್ರಾಮೀಣ ಸಂಸ್ಕೃತಿ, ಜನಜೀವನ ಪದ್ಧತಿಯನ್ನು ಜನಪದ ಶೈಲಿಯ ಕಲಾ ಪ್ರಕಾರದ ಮೂಲಕ ಪ್ರತಿಬಿಂಬಿಸುವ ಉದ್ದೇಶದಿಂದ ಭಿತ್ತಿಚಿತ್ರಗಳನ್ನು ಬರೆಯಲಾಗುತ್ತಿದೆ’ ಎಂದು ತಿಳಿಸಿದರು. ಆಕರ್ಷಣೀಯವಾದ ಭಿತ್ತಿಚಿತ್ರಗಳನ್ನು ಬರೆಯುತ್ತಿರುವ ಕಲಾವಿದರ ಆಸಕ್ತಿ ಮತ್ತು ಕಲಾ ನೈಪುಣ್ಯತೆ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry