ನಗರೋತ್ಥಾನ ಟೆಂಡರ್‌ ರದ್ದು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆ

7

ನಗರೋತ್ಥಾನ ಟೆಂಡರ್‌ ರದ್ದು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆ

Published:
Updated:
ನಗರೋತ್ಥಾನ ಟೆಂಡರ್‌ ರದ್ದು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆ

ಸಾಗರ: ನಗರೋತ್ಥಾನ ಯೋಜನೆಯಡಿ ₹ 25 ಕೋಟಿ ಮೊತ್ತದ ಟೆಂಡರ್‌ ರದ್ದಾಗಿರುವುದು ನಗರವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದರಿಂದ ತೀವ್ರ ಹಿನ್ನಡೆ ಉಂಟಾಗಿದೆ. ಒಳಚರಂಡಿ ಕಾಮಗಾರಿಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರೋತ್ಥಾನ ಯೋಜನೆ ಹಣದಿಂದ ಶೀಘ್ರವಾಗಿ ಕಾಮಗಾರಿ ಆರಂಭಗೊಂಡು ಹೊಸದಾಗಿ ರಸ್ತೆಯಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದವರಿಗೆ ನಿರಾಸೆ ಹುಟ್ಟಿಸುವ ಸುದ್ದಿ ಎದುರಾಗಿದೆ.

ರಾಜ್ಯ ಸರ್ಕಾರ ಕಳೆದ ವರ್ಷವೇ ನಗರವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಲ್ಲಿನ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ₹ 25 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಈ ಹಣದಿಂದ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಕೂಡ ಕರೆಯಲಾಗಿತ್ತು. ಟೆಂಡರ್‌ದಾರರ ಪಟ್ಟಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪಟ್ಟಿಯನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿಕೊಟ್ಟಿತ್ತು.

ಟೆಂಡರ್‌ನಲ್ಲಿ ಭಾಗವಹಿಸಿದ ಯಾವುದೇ ಗುತ್ತಿಗೆದಾರರಿಗೆ ತಾಂತ್ರಿಕ ಅರ್ಹತೆಯೇ ಇಲ್ಲ ಎನ್ನುವ ಕಾರಣಕ್ಕೆ ಪೌರಾಡಳಿತ ನಿರ್ದೇಶಕರ ಕಚೇರಿ ಟೆಂಡರ್‌ನ್ನು ರದ್ದುಗೊಳಿಸಿ ಈ ಬಗ್ಗೆ ಇಲ್ಲಿನ ನಗರಸಭೆ ಕಚೇರಿಗೆ ಪತ್ರ ಬರೆದಿದೆ. ಈ ಕಾರಣ ಮತ್ತೆ ಹೊಸದಾಗಿ ಟೆಂಡರ್‌ ಕರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಒಳಚರಂಡಿ ಕಾಮಗಾರಿಯಿಂದಾಗಿ ಹಾಳಾಗಿರುವ ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಮಾಡುವುದಾಗಿ ಅನೇಕ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ಜನರಿಗೆ ಭರವಸೆ ನೀಡಿದ್ದರು. ಆದರೆ ಈಗ ನಗರೋತ್ಥಾನ ಯೋಜನೆಯ ಟೆಂಡರ್‌ ರದ್ದಾಗಿರುವುದರಿಂದ ಹಲವು ಸದಸ್ಯರಿಗೆ ಜನರಿಗೆ ಉತ್ತರ ಕೊಡುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಹೊಸದಾಗಿ ಟೆಂಡರ್‌ ಪ್ರಕ್ರಿಯೆ ನಡೆದು ಮತ್ತು ಕಾಮಗಾರಿ ಆರಂಭವಾಗುವಷ್ಟರಲ್ಲಿ ರಾಜ್ಯದ ವಿಧಾನಸಭೆಗೆ ಚುನಾವಣೆ ಘೋಷಣೆ ಆದರೆ ಹೊಸದಾಗಿ ಕಾಮಗಾರಿ ನಡೆಸಬಾರದು ಎನ್ನುವ ನಿಯಮ ಅನ್ವಯವಾಗುವ ಅಪಾಯವಿದೆ. ನಂತರ ಮಳೆಗಾಲ ಆರಂಭವಾದರೆ ಹಣವಿದ್ದರೂ ಕಾಮಗಾರಿ ನಡೆಸುವುದು ಕಷ್ಟವಾಗುವ ಸಾಧ್ಯತೆಯೂ ಇದೆ. ಇಂತಹ ಒಂದು ಬಿಕ್ಕಟ್ಟಿನ ಸ್ಥಿತಿ ನಗರಸಭೆ ಆಡಳಿತಕ್ಕೆ ಎದುರಾಗಿದೆ.

ತಾಲ್ಲೂಕಿನಲ್ಲಿ ದೊಡ್ಡ ಮೊತ್ತದ ಕಾಮಗಾರಿ ನಡೆಸಿದ ಅನೇಕ ಗುತ್ತಿಗೆದಾರರು ಹಾಗೂ ಗುತ್ತಿಗೆ ಕಂಪೆನಿಗಳು ಇದ್ದರೂ ₹ 25 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಅರ್ಹ ಗುತ್ತಿಗೆದಾರರು ಯಾಕೆ ಭಾಗವಹಿಸಲಿಲ್ಲ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಇಂತಹದ್ದೆ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಗುತ್ತಿಗೆದಾರರ ನಡುವಿನ ‘ಮ್ಯಾಚ್‌ ಫಿಕ್ಸಿಂಗ್‌’ನಿಂದ ಊರಿಗೆ ಆಗಲೇಬೇಕಾದ ಕಾಮಗಾರಿ ವಿಳಂಬವಾಗುವಂತಾಗಿದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಅರ್ಹ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ ಎನ್ನುವುದನ್ನು ಆರಂಭಿಕ ಹಂತದಲ್ಲೇ ಗುರುತಿಸಿದ್ದರೆ ಇಂತಹ ಲೋಪ ಆಗುತ್ತಿರಲಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಈಗ ಈ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ವತಿಯಿಂದ ಕಿರು ಅವಧಿಯ ಟೆಂಡರ್‌ ಪ್ರಕ್ರಿಯೆ ನಡೆಸಿ ಸಾಧ್ಯವಾದಷ್ಟು ಶೀಘ್ರವಾಗಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗುತ್ತಿದೆ.

ಒಳಚರಂಡಿ ಕಾಮಗಾರಿಯಿಂದ ಈಗಾಗಲೇ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಜನರ ಈ ಅಸಮಾಧಾನ ಆಕ್ರೋಶವಾಗಿ ಪರಿವರ್ತನೆಗೊಳ್ಳುವ ಮುನ್ನ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ತ್ವರಿತಗತಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆರಂಭಿಸಬೇಕು ಎಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ.

ಎಂ.ರಾಘವೇಂದ್ರ.

* * 

ನಗರೋತ್ಥಾನ ಯೋಜನೆ ಕಾಮಗಾರಿಯ ಟೆಂಡರ್‌ ರದ್ದಾಗಲು ನಗರಸಭೆ ಆಡಳಿತದ ಲೋಪವೇ ಕಾರಣ. ಆರಂಭದಲ್ಲೆ ದೊಡ್ಡ ಮೊತ್ತದ ಗುತ್ತಿಗೆ ಕಾಮಗಾರಿ ನಡೆಸುವವರನ್ನು ಕರೆಯಿಸಿ ಮಾತುಕತೆ ನಡೆಸಿ ತಾಂತ್ರಿಕ ಕಾರಣಕ್ಕೆ ಟೆಂಡರ್‌ ರದ್ದಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಡಳಿತ ನಿರ್ವಹಿಸಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ಸಂತೋಷ್‌ ಆರ್‌.ಶೇಟ್‌.

ನಗರಸಭೆ ವಿಪಕ್ಷ ಸದಸ್ಯರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry