ದಶಮಾನೋತ್ಸವ ಸಮ್ಮೇಳನ

7

ದಶಮಾನೋತ್ಸವ ಸಮ್ಮೇಳನ

Published:
Updated:
ದಶಮಾನೋತ್ಸವ ಸಮ್ಮೇಳನ

ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದಶಮಾನೋತ್ಸವ ಸಮ್ಮೇಳನ ಜನವರಿ 18 ಮತ್ತು 19ರಂದು ನಡೆಯಲಿದೆ.

ಯಲಹಂಕದ ರೇವಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯಲಿರುವ ಸಮ್ಮೇಳನದ ಕೇಂದ್ರ ವಿಷಯ ‘ಮಾನವ ಕುಲದ ಭವಿಷ್ಯ ರೂಪಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ’. ರೇವಾ ವಿಶ್ವವಿದ್ಯಾಲಯದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಎರಡು ದಿನಗಳ ಸಮ್ಮೇಳನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಅನುರಾಗ್‌ ಕುಮಾರ್‌ ಉದ್ಘಾಟಿಸುವರು.

ವಿದ್ಯಾರ್ಥಿಗಳು, ಅಧ್ಯಾಪಕರು, ವಿಜ್ಞಾನ ಬರಹಗಾರರು ಮತ್ತು ಆಸಕ್ತ ಜನಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಹಾಗೂ ಅವುಗಳ ಅನ್ವಯಿಕಗಳು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ಸಮ್ಮೇಳನ ಉತ್ತಮ ವೇದಿಕೆ ಎನ್ನುತ್ತಾರೆ ಅಕಾಡೆಮಿಯ ಹಿರಿಯ ವೈಜ್ಞಾನಿಕಾಧಿಕಾರಿ ಡಾ.ಎ.ಎಂ.ರಮೇಶ್‌.

ಸಮ್ಮೇಳನದಲ್ಲಿ ಹೆಸರಾಂತ ವಿಜ್ಞಾನಿಗಳು ಮತ್ತು ಸಂಶೋಧಕರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಭೌತ ಮತ್ತು ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಅಂತರ್‌ಶಾಸ್ತ್ರೀಯ ವಿಜ್ಞಾನ ಹಾಗೂ ಎಂಜಿನಿಯರಿಂಗ್‌ ವಿಜ್ಞಾನಗಳಿಗೆ ಸಂಬಂಧಿಸಿದಂತೆ ಸಂಶೋಧಕರು ತಮ್ಮ ಪರಿಕಲ್ಪನೆಗಳು, ಸಂಶೋಧನಾ ಫಲಿತಾಂಶವನ್ನು ಪ್ರಾತ್ಯಕ್ಷಿಕೆಗಳ ರೂಪದಲ್ಲಿ ಪ್ರಸ್ತುತಪಡಿಸಲು ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗುವುದು. ತಜ್ಞರ ಸಮಿತಿ ಆಯ್ಕೆ ಮಾಡುವ ಉತ್ತಮ ಪ್ರಾತ್ಯಕ್ಷಿಕೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಬಹುಮಾನಗಳ ಮೊತ್ತ ಕ್ರಮವಾಗಿ ₹ 10,000, ₹ 7,500 ಮತ್ತು ₹ 5000 ಇರಲಿದೆ ಎಂದು ವಿವರಿಸುತ್ತಾರೆ ಅವರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಹಾಗೂ ಅವುಗಳ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿರುವ ರಾಜ್ಯದ ಶ್ರೇಷ್ಠ ವಿಜ್ಞಾನಿಯೊಬ್ಬರಿಗೆ ಪ್ರತಿ ಸಮ್ಮೇಳನದಲ್ಲಿ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಅಕಾಡೆಮಿಯ ಅಧ್ಯಕ್ಷ ಡಾ.ಎಸ್‌.ಕೆ. ಶಿವಕುಮಾರ್‌ ಅವರು ಈ ಬಾರಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

₹ 1ಲಕ್ಷ ನಗದು, ಚಿನ್ನದ ಪದಕ ಹಾಗೂ ಸನ್ಮಾನ ಪತ್ರ ನೀಡಿ ಶಿವಕುಮಾರ್‌ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುವುದು. ಜನಸಾಮಾನ್ಯರೂ ಸೇರಿದಂತೆ ಪ್ರತಿಷ್ಟಿತ ವೈಜ್ಞಾನಿಕ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದ್ದು, ವೀಕ್ಷಣೆಗೆ ಎಲ್ಲರಿಗೂ ಮುಕ್ತ ಅವಕಾಶವಿರಲಿದೆ ಎನ್ನುತ್ತಾರೆ ರಮೇಶ್‌.

ಅಕಾಡೆಮಿ ಕುರಿತು

ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿ ಅಕಾಡೆಮಿಯನ್ನು 2005ರ ಜುಲೈನಲ್ಲಿ ಸ್ಥಾಪಿಸಲಾಯಿತು. ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ.ಯು.ಆರ್.ರಾವ್ ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಪ್ರಸ್ತುತದಲ್ಲಿ ಭಾರತೀಯ ಬಾಹ್ಯಾಕಾಶ ಉಪಗ್ರಹ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಎಸ್.ಕೆ.ಶಿವಕುಮಾರ್‌ ಅಧ್ಯಕ್ಷರಾಗಿದ್ದಾರೆ. ಸರ್ಕಾರದ ಅಧಿಕಾರಿಗಳು, ಶ್ರೇಷ್ಠ ವಿಜ್ಞಾನಿಗಳು, ಶಿಕ್ಷಣ ತಜ್ಞರು ಸೇರಿದಂತೆ ಒಟ್ಟು 20 ಸದಸ್ಯರುಗಳನ್ನು ಅಕಾಡೆಮಿ ಹೊಂದಿದೆ.–ಪ್ರೊ.ಯು.ಆರ್‌.ರಾವ್‌, ಸಂಸ್ಥಾಪಕ ಅಧ್ಯಕ್ಷರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry