ನೆಮ್ಮದಿಯ ಆಸರೆ ‘ಸೋಕೇರ್‌’

7

ನೆಮ್ಮದಿಯ ಆಸರೆ ‘ಸೋಕೇರ್‌’

Published:
Updated:
ನೆಮ್ಮದಿಯ ಆಸರೆ ‘ಸೋಕೇರ್‌’

ಇದೊಂದು ಹಳೇ ಚರ್ಚೆ. ಒಬ್ಬ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಗಂಡ ಜೈಲು ಸೇರಿದರೆ ಹೆಂಡತಿ ಮಕ್ಕಳ ಗತಿ? ಹಾಗಾದರೆ ಶಿಕ್ಷೆ ನೀಡಿದ್ದು ಯಾರಿಗೆ? ಮಕ್ಕಳ ಭವಿಷ್ಯದ ಕಥೆ ಏನು? ಅವರ ಜೀವನ ಹೇಗೆ ಸಾಗಬೇಕು...? ಇಂಥ ಸಾವಿರಾರು ಪ್ರಶ್ನೆಗಳು ನಮ್ಮ ಮುಂದೆ ಅಪ್ಪಳಿಸುತ್ತವೆ. ಇಂಥ ಮಕ್ಕಳು ಉತ್ತಮ ಭವಿಷ್ಯ ಹುಡುಕಿಕೊಳ್ಳಲು ನೆರವಾಗಲೆಂದು ಹುಟ್ಟಿಕೊಂಡ ಸಂಸ್ಥೆಯೇ ‘ಸೋಕೇರ್‌’.

ಈ ಸಂಸ್ಥೆಯನ್ನು ಆರಂಭಿಸಿದ್ದು ವೆಂಕಟ ರಾಘವಾಚಾರಿ ಮಣಿ. ಅವರು ಒಮ್ಮೆ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಹಾದುಹೋಗುವ ಸಂದರ್ಭದಲ್ಲಿ ಒಂದು ಪುಟ್ಟ ಮಗು ಕಾರಾಗೃಹದ ಮುಂದೆ ಅಳುತ್ತಾ ಕೂತಿತ್ತು. ಆ ಮಗುವಿನ ಭವಿಷ್ಯ ಸುಂದರಗೊಳಿಸಲು ಏನಾದರೂ ಮಾಡಬೇಕು ಎಂದು ಅವರಿಗೆ ಅನಿಸಿತು. ತಮ್ಮ ಪತ್ನಿ ಸರೋಜಿ ಮಣಿ ಅವರೊಂದಿಗೆ ಈ ವಿಚಾರ ಹಂಚಿಕೊಂಡರು. ಅವರ ಸಹಕಾರದೊಂದಿಗೆ 1999ರಲ್ಲಿ ‘ಸೋಕೇರ್’ ಸಂಸ್ಥೆ ಆರಂಭಿಸಿದರು.

ವೆಂಕಟರಾಘವಾಚಾರಿ ಅವರು ನಿವೃತ್ತಿ ಸಂದರ್ಭ ಸಿಕ್ಕ ಹಣವನ್ನು ಸಂಸ್ಥೆಗಾಗಿಯೇ ವ್ಯಯಿಸಿದರು. ಮಕ್ಕಳ ವಾಸಕ್ಕೆ ತಮ್ಮ ಮನೆಯಲ್ಲಿಯೇ ವ್ಯವಸ್ಥೆ ಕಲ್ಪಿಸಿದರು. ಒಂದು ಮಗುವಿನಿಂದ ಆರಂಭವಾದ ಈ ಸಂಸ್ಥೆಯಲ್ಲಿ ಈಗ ಸುಮಾರು 150 ಮಕ್ಕಳಿದ್ದಾರೆ.

‘ಸಂಸ್ಥೆಗಾಗಿ ಮಣಿ ಅವರು ಹಲವರ ಬಳಿ ಸಾಲ ಮಾಡಿದ್ದರು. ಯಾರೋ ಹಳೆಯ ಬಟ್ಟೆ ಕೊಟ್ಟರು. ಕೆಲವರು ಹಳೆಯ ಸಾಮಾನುಗಳನ್ನು ಕೊಟ್ಟರು, ಯಾರೋ ಕೈಲಾದಷ್ಟು ಹಣ ಸಹಾಯ ಮಾಡಿದರು. ಹೀಗೆ ಈ ಸಂಸ್ಥೆ ಬೆಳೆಯುತ್ತಾ ಹೋಯಿತು’ ಎಂದು ಹೇಳುತ್ತಾರೆ ಸಂಸ್ಥೆಯ ಕಾರ್ಯದರ್ಶಿ ವೆಂಕಟನಾಥನ್.

‘ಒಮ್ಮೆ ಹೆಣ್ಣು ಮಕ್ಕಳ ವಸತಿಗೃಹ ಕಟ್ಟುವ ಸಂದರ್ಭದಲ್ಲಿ ಸಿಮೆಂಟ್‌ಗೆ ಸಮಸ್ಯೆಯಾಯಿತು. ಸಾಲವೂ ಹುಟ್ಟಲಿಲ್ಲ. ಆ ಸಂದರ್ಭದಲ್ಲಿ ಯಾರೋ ಒಬ್ಬರು ಶೃಂಗೇರಿ ಪೀಠವನ್ನು ಕೋರಿಕೊಳ್ಳಲು ಸೂಚಿಸಿದರು. ‘ಇದು ಒಳ್ಳೇ ಕೆಲಸ. ನಮ್ಮ ಸಹಕಾರ ಸದಾ ಇರುತ್ತದೆ’ ಎಂದು ಪೀಠವು ಮಣಿ ಅವರೊಂದಿಗೆ ಕೈಜೋಡಿಸಿತು. ಶೃಂಗೇರಿ ಪೀಠದ ವತಿಯಿಂದ ಈಗಲೂ ಪ್ರತಿತಿಂಗಳು ಧನಸಹಾಯ ದೊರೆಯುತ್ತಿದೆ’ ಎನ್ನುತ್ತಾರೆ ಅವರು.

ಸಂಸ್ಥೆಯು ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಸತಿಗೃಹಗಳನ್ನು ನಡೆಸುತ್ತಿದೆ. ರಾಜಾಜಿನಗರ, ಲಗ್ಗೆರೆ, ಪೀಣ್ಯ ಹಾಗೂ ಕಲಬುರ್ಗಿಗಳಲ್ಲಿ ಸಂಸ್ಥೆಯ ವಸತಿಗೃಹಗಳಿವೆ. ಆರು ವರ್ಷ ಮೀರದ ಮಕ್ಕಳನ್ನು ಸಂಸ್ಥೆಯು ಸೇರಿಸಿಕೊಳ್ಳುತ್ತದೆ. ಮಕ್ಕಳು ಇಷ್ಟಪಡುವಷ್ಟೂ ಓದಬೇಕು. ಕಾಲೇಜಿಗೆ ಹೋಗಲು ಆರಂಭಿಸಿದ ನಂತರ ಹೆತ್ತವರ ಬಳಿಗೆ ಹೋಗಬಹುದು. ಅವರು ತಮ್ಮ ಮನೆಗೆ ಮರಳಿದರೂ, ಬಡತನ ಬಾಧಿಸುತ್ತಿದ್ದರೆ ಶಿಕ್ಷಣ ಮುಂದುವರಿಸಲು ಸಂಸ್ಥೆಯು ನೆರವಾಗುತ್ತದೆ.

ಸಂಸ್ಥೆಯ ಸಹಾಯದಿಂದ ಉನ್ನತ ವಿದ್ಯಾಭ್ಯಾಸ ಪಡೆದ ಹಲವು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಓದಿದ ಬಹುತೇಕರು ಮೊದಲ ಶ್ರೇಣಿಯಲ್ಲಿಯೇ ತೇರ್ಗಡೆಯಾಗಿರುವುದು ವಿಶೇಷ. ಜೈಲುವಾಸ ಅನುಭವಿಸಿದವರನ್ನು ಸಮಾಜ ತಿರಸ್ಕಾರದಿಂದ ಕಾಣುತ್ತದೆ. ಅಂಥವರ ಮಕ್ಕಳನ್ನೂ ಸಮಾಜ ಸಮನಾಗಿ ಕಾಣುವುದಿಲ್ಲ. ಈ ಸಮಸ್ಯೆ ಪರಿಹರಿಸಲು ‘ಸೋಕೇರ್’ ಯತ್ನಿಸುತ್ತಿದೆ. ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಕನಸು ತುಂಬುವ ಮಹತ್ವದ ಕೆಲಸ ಮಾಡುತ್ತಿದೆ.

ಸಂಸ್ಥೆಯ ಸಿಬ್ಬಂದಿ ಕಾರಾಗೃಹಗಳಿಗೆ ಭೇಟಿ ನೀಡಿ ಜೈಲುವಾಸಿಗಳಿಂದ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಗೆ ಸೇರಲು ಇಚ್ಛಿಸುವವರು ಅರ್ಜಿಯೊಂದನ್ನು ತುಂಬ ಬೇಕಾಗುತ್ತದೆ. ಬಡತನದಿಂದ ಮಕ್ಕಳನ್ನು ಓದಿಸಲು ಸಾಧ್ಯವಾಗದ ಪೋಷಕರೂ ತಮ್ಮ ಮಕ್ಕಳನ್ನು ಸಂಸ್ಥೆಗೆ ಸೇರಿಸಬಹುದಾಗಿದೆ.

ವಿಳಾಸ: ನಂ 2642, 12ನೇ ಮುಖ್ಯರಸ್ತೆ, ‘ಇ’ ಬ್ಲಾಕ್, ರಾಜಾಜಿ ನಗರ 2ನೇ ಹಂತ. ದೂರವಾಣಿ: 080 2332 1864

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry