ಯುವ ವೇಗಿಗಳಿಗೆ ಶರಣಾದ ಕೊಹ್ಲಿ ಬಳಗ

7

ಯುವ ವೇಗಿಗಳಿಗೆ ಶರಣಾದ ಕೊಹ್ಲಿ ಬಳಗ

Published:
Updated:
ಯುವ ವೇಗಿಗಳಿಗೆ ಶರಣಾದ ಕೊಹ್ಲಿ ಬಳಗ

ಸೆಂಚೂರಿಯನ್‌: ಯುವ ವೇಗಿಗಳಾದ ಲುಂಗಿ ಗಿಡಿ ಮತ್ತು ಕಗಿಸೊ ರಬಾಡ ಮಿಂಚಿನ ದಾಳಿ ನಡೆಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ಟೆಸ್ಟ್‌ನಲ್ಲಿ 135 ರನ್‌ಗಳ ಜಯದ ಕಾಣಿಕೆ ನೀಡಿದರು.

ಇಲ್ಲಿನ ಸೂಪರ್ ಸ್ಪೋರ್ಟ್‌ ಪಾರ್ಕ್‌ನಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 287 ರನ್‌ಗಳ ಜಯದ ಗುರಿ ಬೆನ್ನತ್ತಿದ ಭಾರತ 151 ರನ್‌ಗಳಿಗೆ ಪತನವಾಯಿತು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 72 ರನ್‌ಗಳಿಂದ ಗೆದ್ದಿತ್ತು.

ಗಾಯಗೊಂಡ ಡೇಲ್‌ ಸ್ಟೇನ್ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ ಲುಂಗಿ ಗಿಡಿ 39 ರನ್‌ಗಳಿಗೆ ಆರು ವಿಕೆಟ್ ಕಬಳಿಸಿ ಭಾರತದ ಕುಸಿತಕ್ಕೆ ಪ್ರಮುಖ ಕಾರಣರಾದರು. ಕಗಿಸೊ ರಬಾಡ ಮೂರು ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾದ ಜಯವನ್ನು ಸುಲಭಗೊಳಿಸಿದರು. ಮಾರ್ನ್ ಮಾರ್ಕೆಲ್ ಮತ್ತು ಎಬಿ ಡಿವಿಲಿಯರ್ಸ್ ಪಡೆದ ಮನಮೋಹಕ ಕ್ಯಾಚ್‌ಗಳು ಕೂಡ ವಿರಾಟ್ ಕೊಹ್ಲಿ ಬಳಗದ ಆಟಕ್ಕೆ ತಡೆಯೊಡ್ಡಿದವು.

ಈ ಕ್ರೀಡಾಂಗಣದಲ್ಲಿ 249 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದು ಈ ಹಿಂದಿನ ದಾಖಲೆಯಾಗಿತ್ತು. ಹೀಗಾಗಿ ಭಾರತ ಈ ಪಂದ್ಯದಲ್ಲಿ ಗೆದ್ದರೆ ಹೊಸ ದಾಖಲೆ ಬರೆಯುವ ಅವಕಾಶವಿತ್ತು. ಆದರೆ ನಾಲ್ಕನೇ ದಿನವಾದ ಮಂಗಳವಾರ 35 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೂ ಚೇತೇಶ್ವರ ಪೂಜಾರ ಮತ್ತು ಪಾರ್ಥಿವ್ ಪಟೇಲ್‌ ಕ್ರೀಸ್‌ನಲ್ಲಿದ್ದುದರಿಂದ ನಿರೀಕ್ಷೆ ಮೂಡಿಸಿತ್ತು.

ಬುಧವಾರ ಬೆಳಿಗ್ಗೆ ಪೂಜಾರ ರನ್‌ ಔಟ್‌ ಆದಾಗ ತಂಡದ ಮೊತ್ತ ಕೇವಲ 49 ಆಗಿತ್ತು.

ಪಟೇಲ್‌ ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಶ್ರಮಿಸಿದರು. ಆದರೆ ಅಷ್ಟರ‌ಲ್ಲಿ ಬಿರುಗಾಳಿಯಾದ ಗಿಡಿ ಮತ್ತು ರಬಾಡ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ತಳವೂರದಂತೆ ಮಾಡಿದರು. 19 ರನ್ ಗಳಿಸಿದ ಪಟೇಲ್‌ ಅವರನ್ನು ರಬಾಡ ವಾಪಸ್ ಕಳುಹಿಸಿದರೆ ಹಾರ್ದಿಕ್ ಪಾಂಡ್ಯ ಮತ್ತು ಅಶ್ವಿನ್‌ಗೆ ಗಿಡಿ ಪೆವಿಲಿಯನ್ ಹಾದಿ ತೋರಿಸಿದರು.

17 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ತಂಡ ಭರವಸೆಯನ್ನು ಕೈಚೆಲ್ಲಿತು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಮತ್ತು ಮಹಮ್ಮದ್ ಶಮಿ 54 ರನ್‌ ಸೇರಿಸಿದರು. ರೋಹಿತ್ ಶರ್ಮಾ ವಿಕೆಟ್ ಪಡೆಯುವುದರೊಂದಿಗೆ ರಬಾಡ ಇನಿಂಗ್ಸ್‌ಗೆ ತಿರುವು ನೀಡಿದರು. 10 ರನ್ ಗಳಿಸುವಷ್ಟರಲ್ಲಿ ಕೊನೆಯ ಎರಡು ವಿಕೆಟ್ ಉರುಳಿಸಿ ಗಿಡಿ ಕೇಕೆ ಹಾಕಿದರು.

ಮಾರ್ಕೆಲ್‌ ಮನಮೋಹಕ ಕ್ಯಾಚ್‌

ರಬಾಡ ಹಾಕಿದ 30ನೇ ಓವರ್‌ನ ಐದನೇ ಎಸೆತವನ್ನು ಪಾರ್ಥಿವ್ ಪಟೇಲ್‌ ಹುಕ್‌ ಮಾಡಿದರು. ಲಾಂಗ್‌ಲೆಗ್‌ನಲ್ಲಿದ್ದ ಮಾರ್ನೆ ಮಾರ್ಕೆಲ್‌ ಓಡಿ ಬಂದು ಡೈವ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆದ ನೋಟ ಮನಮೋಹಕವಾಗಿತ್ತು.

48ನೇ ಓವರ್‌ನಲ್ಲಿ ಡಿವಿಲಿಯರ್ಸ್ ಕೂಡ ಆಕರ್ಷಕ ಕ್ಯಾಚ್ ಪಡೆದು ಮಿಂಚಿದರು. ರಬಾಡ ಅವರ ಎಸೆತವನ್ನು ಹುಕ್ ಮಾಡಿ ಬೌಂಡರಿ ದಾಟಿಸಲು ಯತ್ನಿಸಿದ ರೋಹಿತ್‌ ಶರ್ಮಾ ಎಡವಿದರು. ಬೌಂಡರಿ ಗೆರೆಯ ಬಳಿ ಇದ್ದ ಡಿವಿಲಿಯರ್ಸ್ ಓಡಿ ಬಂದು ಮುಂದಕ್ಕೆ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದರು.

ರನ್‌ ಔಟ್‌: ಪೂಜಾರ ‘ವಿಶೇಷ’

ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ರನ್‌ ಔಟ್‌ ಆಗುವ ಮೂಲಕ ಚೇತೇಶ್ವರ ಪೂಜಾರ ಗಮನ ಸೆಳೆದರು.  ತಾವು ರನ್‌ ಔಟ್ ಆಗುವುದರ ಜೊತೆ ಇತರರನ್ನೂ ಔಟ್ ಮಾಡುವುದು ‘ಪೂಜಾರ ಸ್ಪೆಷಲ್‌’ ಎಂದು ಕ್ರಿಕ್ ಇನ್ಫೊ ವೆಬ್‌ಸೈಟ್‌ ವರದಿ ಮಾಡಿದೆ.

ಬುಧವಾರ 47 ಎಸೆತಗಳನ್ನು ಎದುರಿಸಿದ ಪೂಜಾರ 19 ರನ್‌ ಗಳಿಸಿದ್ದಾಗ ಔಟ್ ಆದರು. ಪಾರ್ಥಿವ್ ಪಟೇಲ್‌ ಥರ್ಡ್‌ಮ್ಯಾನ್ ಕಡೆಗೆ ಬಾರಿಸಿದ ಚೆಂಡನ್ನು ಲುಂಗಿ ಗಿಡಿ ಚಾಣಾಕ್ಷತನದಿಂದ ತಡೆದು ಡಿವಿಲಿಯರ್ಸ್ ಕಡೆಗೆ ಎಸೆದರು. ಅಷ್ಟರಲ್ಲಿ ಮೂರನೇ ರನ್‌ಗಾಗಿ ಓಡಿದ ಪೂಜಾರ ಕ್ರೀಸ್ ತಲುಪುವ ಮುನ್ನ ಚೆಂಡು ವಿಕೆಟ್‌ ಕೀಪರ್‌ ಕ್ವಿಂಟನ್ ಡಿ ಕಾಕ್‌ಗೆ ಸಿಕ್ಕಿತು. ಅವರು ಬೇಲ್ಸ್ ಎಗರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಶೂನ್ಯಕ್ಕೆ ರನ್‌ ಔಟ್ ಆಗಿದ್ದರು.

ಕಳೆದ ವರ್ಷ ಕೊಲಂಬೋದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ರನ್ ಔಟ್‌ ಆಗುವುದಕ್ಕೂ ಪೂಜಾರ ಕಾರಣರಾಗಿದ್ದರು. ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಪೂಜಾರ ಶೂನ್ಯಕ್ಕೆ ರನ್‌ ಔಟ್ ಆಗಿದ್ದರು.

2016ರಲ್ಲಿ ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮುರಳಿ ವಿಜಯ್‌ ವಿಕೆಟ್ ಕಳೆದುಕೊಳ್ಳುವುದಕ್ಕೂ ಪೂಜಾರ ಕಾರಣರಾಗಿದ್ದರು. ಅದೇ ವರ್ಷ ಕಿಂಗ್ಸ್‌ಟನ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 46 ರನ್‌ ಗಳಿಸಿ ರನ್‌ ಔಟ್‌ ಆಗಿದ್ದರು.

ಸಿದ್ಧತೆ ಕೊರತೆ: ಬಿಷನ್ ಸಿಂಗ್

ನವದೆಹಲಿ: ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳದೇ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಂಡದ್ದೇ ಭಾರತದ ನಿರಂತರ ಸೋಲಿಗೆ ಕಾರಣ ಎಂದು ಹಿರಿಯ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ದೂರಿದರು.

‘ಶ್ರೀಲಂಕಾ ವಿರುದ್ಧ ಸರಣಿಗಳನ್ನು ಆಡಿ ಭಾರತ ತಂಡದವರು ಸಮಯ ಪೋಲು ಮಾಡಿದ್ದರು. ದುರ್ಬಲ ತಂಡವೊಂದರ ವಿರುದ್ಧ ಒಂದೂವರೆ ತಿಂಗಳು ಆಡುವ ಅಗತ್ಯ ಇರಲಿಲ್ಲ. ಇದರ ಬದಲು ಬಲಿಷ್ಠ ತಂಡದ ವಿರುದ್ಧದ ಸರಣಿಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು’ ಎಂದು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಬೇಡಿ ಹೇಳಿದರು.

* ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣ. ಪಿಚ್‌ ನಾವಂದುಕೊಂಡದ್ದಕ್ಕಿಂತ ಭಿನ್ನವಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಹೆಚ್ಚು ರನ್‌ ಗಳಿಸದಂತೆ ತಡೆದಿದ್ದರೆ ನಾವು ಗೆಲ್ಲಬಹುದಿತ್ತು.

– ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

* ಪದಾರ್ಪಣೆ ಪಂದ್ಯದಲ್ಲಿ ಅಮೋಘ ಸಾಧನೆ ಮಾಡಿದ ವೇಗಿ ಲಂಗಿ ಗಿಡಿ ಅಭಿನಂದನಾರ್ಹ. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಅವರು ತಂಡಕ್ಕೆ ದೊಡ್ಡ ಆಸ್ತಿ

–ಫಾಫ್ ಡುಪ್ಲೆಸಿ, ದಕ್ಷಿಣ ಆಫ್ರಿಕಾ ತಂಡದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry