ಅದಿರು ಅಕ್ರಮ ಸಾಗಣೆ: ಎಸ್‌ಐಟಿಗೆ

7

ಅದಿರು ಅಕ್ರಮ ಸಾಗಣೆ: ಎಸ್‌ಐಟಿಗೆ

Published:
Updated:
ಅದಿರು ಅಕ್ರಮ ಸಾಗಣೆ: ಎಸ್‌ಐಟಿಗೆ

ಬೆಂಗಳೂರು: ರಾಜ್ಯದ ನವ ಮಂಗಳೂರು, ಬೇಲೆಕೇರಿ, ಗೋವಾದ ಮರ್ಮಗೋವಾ ಮತ್ತು ಪಣಜಿ ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಒಪ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಅನುಮತಿ ನೀಡಿದೆ.

ಅದಿರು ಅಕ್ರಮ ಸಾಗಣೆಯಿಂದ ಉಂಟಾಗಿರುವ ನಷ್ಟವನ್ನು ಆರೋಪ ಹೊತ್ತಿರುವ ರಫ್ತುದಾರರು, ಸಾಗಣೆದಾರರು, ದಾಸ್ತಾನುದಾರರು, ವ್ಯಾಪಾರಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಭರಿಸಿಕೊಳ್ಳಲು ಕೂಡಾ ಸಭೆ ಒಪ್ಪಿಗೆ ನೀಡಿದೆ.

‘ಅಗತ್ಯ ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಈ ಪ್ರಕರಣಗಳನ್ನು ಪ್ರಾಥಮಿಕ ತನಿಖಾ ಹಂತದಲ್ಲೇ ಸಿಬಿಐ ಮುಕ್ತಾಯಗೊಳಿಸಿತ್ತು. ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಕುರಿತ ಪರಿಶೀಲನೆಗೆ ರಚಿಸಲಾಗಿದ್ದ ಸಂಪುಟ ಉಪ ಸಮಿತಿ ಈ ಪ್ರಕರಣಗಳನ್ನು ಎಸ್‌ಐಟಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು’ ಎಂದು ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

‘ತಮಿಳುನಾಡಿನ ಚೆನ್ನೈ ಹಾಗೂ ಎನ್ನೋರ್ ಬಂದರಿನಿಂದ ಅಕ್ರಮ ಅದಿರು ಸಾಗಣೆಯಾದ ಬಗ್ಗೆ ಚೆನ್ನೈ ಸಿಬಿಐ ಕಚೇರಿ 22 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಆಂಧ್ರ ಪ್ರದೇಶದ ಕೃಷ್ಣಪಟ್ಟಣಂ, ಕಾಕಿನಾಡ ಮತ್ತು ವಿಶಾಖ ಪಟ್ಟಣ ಬಂದರುಗಳ ಮೂಲಕ ನಡೆದ ಅಕ್ರಮ ಸಾಗಣೆಯ ತನಿಖೆ ಮುಂದುವರಿದಿದೆ. ಆದರೆ, ತಮಿಳುನಾಡಿನ ಬಂದರುಗಳ ಮೂಲಕ ನಡೆದ ಅಕ್ರಮ ಸಾಗಣೆಯ ತನಿಖೆಗೆ ಅಲ್ಲಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ) ಅನುಮತಿ ನೀಡಿಲ್ಲ ಎಂಬ ಕಾರಣವನ್ನು ಸಿಬಿಐ ನೀಡಿದೆ’ ಎಂದು ಜಯಚಂದ್ರ ತಿಳಿಸಿದರು.

‘ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಸಾವಿರಾರು ಪುಟಗಳ ದಾಖಲೆಗಳನ್ನು ಸಂತೋಷ್ ಹೆಗ್ಡೆ ತಮ್ಮ ಎರಡು ವರದಿಗಳ ಜತೆ ನೀಡಿದ್ದರು. ಪ್ರಾಥಮಿಕ ತನಿಖೆಗೆ ನಾಲ್ಕೂವರೆ ವರ್ಷ ತೆಗೆದುಕೊಂಡಿದ್ದ ಸಿಬಿಐ, ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಕೈಬಿಟ್ಟಿರುವುದು ಆಶ್ಚರ್ಯದ ಸಂಗತಿ. ಉದ್ದೇಶಪೂರ್ವಕವಾಗಿಯೇ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು’ ಎಂದೂ ಜಯಚಂದ್ರ ತಿಳಿಸಿದರು.

ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೀಡಿದ ವರದಿ ಆಧರಿಸಿ ಅನೇಕ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಈ ವರದಿಯಲ್ಲಿ ನವ ಮಂಗಳೂರು ಮತ್ತು ಬೇಲೇಕೇರಿ ಬಂದರುಗಳ ಮೂಲಕ 77 ಕಂಪೆನಿಗಳು ಅಕ್ರಮವಾಗಿ ₹ 12 ಸಾವಿರ ಕೋಟಿ ಮೌಲದ 77,80, 119 ಮೆಟ್ರಿಕ್‌ ಟನ್‌ ಅದಿರು ಅಕ್ರಮವಾಗಿ ಸಾಗಿಸಿದ ಉಲ್ಲೇಖವಿದೆ. ಈ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿದ್ದ ಸಿಬಿಐ, ರಾಜ್ಯ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪತ್ರ ಬರೆದಿತ್ತು.

ಸುವರ್ಣಸೌಧದ ಕಾಮಗಾರಿಗೆ ₹ 438 ಕೋಟಿ ವೆಚ್ಚ!

ಬೆಳಗಾವಿ ಸುವರ್ಣಸೌಧದ ಕಾಮಗಾರಿಗೆ ತಗುಲಿರುವ ₹ 438 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ.

‘2009ರಲ್ಲಿ ₹ 230 ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಲಾಗಿತ್ತು. 2014ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟು ಮೊತ್ತದ ಹೆಚ್ಚಿದ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ ನೇತೃತ್ವದ ಸಮಿತಿ ನೀಡಿದ ವರದಿಗೆ ಅನುಮೋದನೆ ನೀಡಲಾಗಿದೆ. ಸಣ್ಣ ಪುಟ್ಟ ಲೋಪಗಳನ್ನು ಹೊರತುಪಡಿಸಿದರೆ ದೊಡ್ಡ ಲೋಪಗಳು ಆಗಿಲ್ಲ ಎಂದು ಈ ವರದಿಯಲ್ಲಿದೆ’ ಎಂದೂ ಜಯಚಂದ್ರ ಹೇಳಿದರು.

* ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿದ ಪ್ರಕರಣಗಳನ್ನು ಈ ರೀತಿ ಮುಚ್ಚಿ ಹೋಗಲು ಬಿಡುವುದು ಸರಿಯಲ್ಲ

–ಟಿ.ಬಿ. ಜಯಚಂದ್ರ, ಕಾನೂನು ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry