ಮರಳು ನೀತಿಗೆ ಮತ್ತೆ ಅಸಮಾಧಾನ

7

ಮರಳು ನೀತಿಗೆ ಮತ್ತೆ ಅಸಮಾಧಾನ

Published:
Updated:

ಬೆಂಗಳೂರು: ‘ಜಗತ್ತಿನ ಯಾವ ದೇಶದಲ್ಲೂ ನಿಮ್ಮಂತಹ ಮರಳು ನೀತಿ ಇರಲು ಸಾಧ್ಯವೇ ಇಲ್ಲ’ ಎಂದು ಮರಳು ಹರಾಜು ನೀತಿಯ ಬಗ್ಗೆ ಹೈಕೋರ್ಟ್‌ ಮತ್ತೊಮ್ಮೆ ಕೆಂಡ ಕಾರಿದೆ.

‘ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಮರಳು ಖರೀದಿಗೆ ಹೆಚ್ಚಿನ ಮೊತ್ತದ ಬಿಡ್ ಸಲ್ಲಿಸಿದವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತಿರುವ ನಿಮ್ಮದು ಯಾವ ರೀತಿಯ ನೀತಿ’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ.

ವಿಚಾರಣೆ ವೇಳೆ ಎಚ್.ಜಿ. ರಮೇಶ್, ‘ಅನಾಗರಿಕ ಸರ್ಕಾರದಿಂದ ಮಾತ್ರವೇ ಇಂತಹ ನೀತಿ ರೂಪಿಸಲು ಸಾಧ್ಯ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅತ್ಯಂತ ನಿಷ್ಪ್ರಯೋಜಕ ಇಲಾಖೆಯಾಗಿದೆ. ಇಂತಹ ಕೆಟ್ಟ ಇಲಾಖೆಯನ್ನು ನಾವು ಎಂದೂ ನೋಡಿಯೇ ಇರಲಿಲ್ಲ’ ಎಂದು ತೀವ್ರ ಅತೃಪ್ತಿ ಹೊರಹಾಕಿದರು.

ನ್ಯಾಯಮೂರ್ತಿಗಳ ಅತೃಪ್ತಿ ಶಮನಕ್ಕೆ ಪ್ರಯತ್ನಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ರಾಜ್ಯ ಸರ್ಕಾರ ಸದುದ್ದೇಶದಿಂದಲೇ ಮರಳು ನೀತಿ ರೂಪಿಸಿದೆ. ಅನುಷ್ಠಾನದಲ್ಲಿ ಕೆಲವೊಂದು ಲೋಪಗಳಾಗಿವೆ. ಅದನ್ನು ಸರಿಪಡಿಸಲು ಸರ್ಕಾರವು ಸಿದ್ಧವಿದೆ ಎಂದರು.

ಇದನ್ನು ಒಪ್ಪದ ರಮೇಶ್, ‘ಲೋಪದೋಷ ಸರಿಪಡಿಸಿ ಮುಂದಿನ ವಿಚಾಣೆ ವೇಳೆಗೆ ವರದಿ ಸಲ್ಲಿಸಿ’ ಎಂದು ಸೂಚಿಸಿ ಜಿಲ್ಲಾಡಳಿತ ನಡೆಸಿರುವ ಹರಾಜು ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದರು.

‘ಗದಗ ಜಿಲ್ಲೆಯಲ್ಲಿನ ತುಂಗಭದ್ರಾ ನದಿ ತೀರ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಡೆಸಲು 15ಕ್ಕೂ ಹೆಚ್ಚು ಘಟಕಗಳಿಗೆ ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಸಿದ್ದೆವು. ಇ–ಹರಾಜು ಮೂಲಕ ಈ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ನಮಗೆ ನೀಡಲಾಗಿದ್ದ ಪರವಾನಗಿ ರದ್ದುಪಡಿಸಲಾಗಿದೆ ಮತ್ತು ನಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ’ ಎಂದು ಆಕ್ಷೇಪಿಸಿ ಹೇಮಗಿರೀಶ್‌ ಗುರುಪಾದಪ್ಪ ಹಾವಿನಹಾಳ್‌ ಸಲ್ಲಿಸಿರುವ ಅರ್ಜಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry