ಹೈಕೋರ್ಟ್‌ ಪೀಠಗಳು ಇನ್ನು ‘ಇ– ಕೋರ್ಟ್‌’

7

ಹೈಕೋರ್ಟ್‌ ಪೀಠಗಳು ಇನ್ನು ‘ಇ– ಕೋರ್ಟ್‌’

Published:
Updated:

ಬೆಂಗಳೂರು: ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿರುವ ಹೈಕೋರ್ಟ್‌ ಪೀಠಗಳನ್ನು ಇ–ಕೋರ್ಟ್‌ಗಳಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

2020ರ ವೇಳೆಗೆ ಕಾಗದ ರಹಿತ ಇ– ಕೋರ್ಟ್‌ಗಳಾಗಿ ಪರಿವರ್ತಿಸಲಾಗುವುದು. ₹ 43. 50 ಕೋಟಿ ಮೊತ್ತದ ‘ಸಮಗ್ರ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ’ಗೆ (ಐಸಿಎಂಎಸ್) ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

‘ಈ ವ್ಯವಸ್ಥೆ ಅಳವಡಿಸುವುದರಿಂದ ಕಕ್ಷಿದಾರರು ಯಾವುದೇ ಪ್ರದೇಶದಿಂದ ವಕೀಲರನ್ನು ನೇಮಿಸಿ ವಿಡಿಯೋ ಸಂವಾದದ ಮೂಲಕ ವಾದ ಮಂಡನೆಗೆ ಅವಕಾಶ ಸಿಗಲಿದೆ’ ಎಂದು ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಅನಿಮೇಷನ್‌ ವಿಷ್ಯುವಲ್‌ ಎಫೆಕ್ಟ್‌, ಗೇಮಿಂಗ್‌ ಅಂಡ್‌ ಕಾಮಿಕ್ಸ್‌ ವಲಯದಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರವನ್ನು ಬೆಂಗಳೂರಿನಲ್ಲಿ  ₹ 48.85 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಬೆ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 89,108 ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕ ಮತ್ತು ಉಚಿತ ಸ್ಟೌ ನೀಡಲು ಜಿಲ್ಲಾ ಮಿನರಲ್‌ ನಿಧಿಯಿಂದ ₹ 336 ಕೋಟಿ ವೆಚ್ಚ ಮಾಡಲು ಕೂಡಾ ಒಪ್ಪಿಗೆ ನೀಡಲಾಗಿದೆ ಎಂದರು.

ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿ ಒಟ್ಟು 109 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

ಇತರ ನಿರ್ಣಯಗಳು:

* ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ (ಧಾರವಾಡ) ಮತ್ತು  ಖಾಜಾ ಬಂದೆನವಾಜ ವಿಶ್ವವಿದ್ಯಾಲಯ (ಕಲಬುರ್ಗಿ) ಮಸೂದೆಗೆ ಅನುಮೋದನೆ

* ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಂಡ್–ಟು–ಎಂಡ್ ಆಟೋಮೇಷನ್‌ನ್ನು ಅಳವಡಿಸಲು ಕೇರಳ ಸ್ಟೇಟ್ ಎಲೆಕ್ಟ್ರಾನಿಕ್ಸ್‌ ಡೆವೆಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪೆನಿಯಿಂದ ಸಿಸ್ಟಮ್ ಇಂಟಿಗ್ರೇಷನ್‌ನ್ನು ₹ 51.34 ಕೋಟಿ ಮೊತ್ತದಲ್ಲಿ ಖರೀದಿಸಲು ಒಪ್ಪಿಗೆ

* ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಬಿ.ಆರ್‌. ಶೆಟ್ಟಿ ಸಂಸ್ಥೆಯ ಜೊತೆ ಒಪ್ಪಂದಕ್ಕೆ ಅನುಮೋದನೆ

* ಮೈಸೂರು ನಗರ ಪೊಲೀಸ್ ಆಯುಕ್ತರ ಹೊಸ ಕಚೇರಿ ಕಟ್ಟಡ ಹೆಚ್ಚುವರಿ ನಿರ್ಮಾಣ ಕಾಮಗಾರಿಯನ್ನು ₹ 4.10 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

* ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಕ್ಕೆ ₹ 146.51 ಕೋಟಿ ಹಾಗೂ ಹಳಿಯಾಳ ಪಟ್ಟಣಕ್ಕೆ  ₹ 76.20 ಕೋಟಿಗಳ ಅಂದಾಜು ಮೊತ್ತದಲ್ಲಿ ಒಳಚರಂಡಿ ಕಾಮಗಾರಿನ ಕೈಗೆತ್ತಿಕೊಳ್ಳಲು ಅನುಮೋದನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry