ಲಘು ಮಾತಿಗೂ ಮುನ್ನ ತಾಕತ್ತು ತೋರಿಸಿ

7
ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿಕೆಗೆ ನೀರಾವರಿ ಹೋರಾಟಗಾರರ ಆಕ್ರೋಶ

ಲಘು ಮಾತಿಗೂ ಮುನ್ನ ತಾಕತ್ತು ತೋರಿಸಿ

Published:
Updated:

ಚಿಕ್ಕಬಳ್ಳಾಪುರ: ‘ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರು ನೀರಾವರಿ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುವ ಮುನ್ನ ಸಂಸ್ಕರಿಸಿದ ತಾಜ್ಯ ನೀರಿನ ಶುದ್ಧತೆಯ ಬಗ್ಗೆ ತಜ್ಞರಿಂದ ವರದಿ ಕೊಡಿಸುವಲ್ಲಿ ತಮ್ಮ ತಾಕತ್ತು ತೋರಿಸಲಿ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಸಚಿವರಾಗುವ ಮುನ್ನ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ರಮೇಶ್‌ ಕುಮಾರ್‌ ಅವರು ಇದೀಗ ಈ ಭಾಗದ ನೀರಾವರಿ ಹೋರಾಟಗಾರರ ಕುರಿತು ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಬಯಲುಸೀಮೆ ಭಾಗದ ರೈತರು ಶಾಶ್ವತ ನೀರಾವರಿಗೆ ಆಗ್ರಹಿಸಿ ಬೆಂಗಳೂರಿಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ, ಪೊಲೀಸರಿಂದ ಲಾಠಿ ಏಟು ತಿನ್ನುವಾಗ ರಮೇಶ್‌ಕುಮಾರ್‌ ಎಲ್ಲಿದ್ದರು’ ಎಂದು ಖಾರವಾಗಿ ಪ್ರಶ್ನಿಸಿದರು.

‘ಟ್ರಾಕ್ಟರ್‌ ರ‍್ಯಾಲಿ ನಡೆಸಿ ಸಂದರ್ಭದಲ್ಲಿ ಹೋರಾಟಗಾರರ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರು ತಿಂಗಳ ಒಳಗೆ ಬಯಲು ಸೀಮೆಯ ನೀರಿನ ಬವಣೆ ನೀಗಿಸುವ ಮತ್ತು ಕೆರೆಗಳನ್ನು ತುಂಬಿಸುವ ಭರವಸೆ ನೀಡಿದ್ದರು. ಜಲಮೂಲಗಳ ಅಧ್ಯಯನ ಮಾಡಿಸಿ, 6 ತಿಂಗಳ ಒಳಗೆ ಸಮಗ್ರ ನೀರಾವರಿ ಯೋಜನೆಯ ನೀಲನಕ್ಷೆ ನಿಮ್ಮ ಮುಂದೆ ಇಡುತ್ತೇವೆ. ಚಳವಳಿ ಹಿಂದಕ್ಕೆ ಪಡೆಯಿರಿ ಎಂದಿದ್ದರು. ಅದಾಗಿ ಎರಡು ವರ್ಷ ಸಮೀಪಿಸಿದರೂ ಈವರೆಗೆ ಆ ಭರವಸೆ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಮಾತ್ರ ಶುದ್ಧೀಕರಿಸಿ ಕೆರೆಗಳಿಗೆ ಹರಿಸಿದರೆ ಅದರಿಂದ ಜೀವವೈವಿಧ್ಯಕ್ಕೆ ಧಕ್ಕೆಯಾಗಿ, ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ ವಿಜ್ಞಾನಿಗಳ ವಿರುದ್ಧ ರಮೇಶ್‌ ಕುಮಾರ್‌ ಅವರು ಏಕವಚನದಿಂದ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಸಮಸ್ಯೆ ಇಲ್ಲ ಎಂದು ಹೇಳುವ ರಮೇಶ್‌ ಕುಮಾರ್ ಅವರು ಎರಡು ವರ್ಷಗಳಿಂದ ಅಂತಹದೊಂದು ವರದಿ ಯನ್ನು ವಿಜ್ಞಾನಿಗಳಿಂದ ಕೊಡಿಸಲು ಏಕೆ ಮುಂದಾಗಲಿಲ್ಲ. ಹೋರಾಟಗಾರರು ಹೊಟ್ಟೆಗೆ ತಾವೇ ಬೆಳೆದ ಅನ್ನ ತಿನ್ನುತ್ತಿದ್ದಾರೆ. ಹೋರಾಟಗಾರರು ನಿಮ್ಮ ಸಾಚಾತನ ಬಹಿರಂಗಗೊಳಿಸುವ ಮುನ್ನ ನೀವೇ ಸತ್ಯಾಂಶ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲವಾದರೆ ಜನರೇ ನಿಮಗೆ ಬುದ್ಧಿ ಕಲಿಸುವ ಕಾಲ ದೂರವಿಲ್ಲ’ ಎಂದರು.

‘ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಆ ಯೋಜನೆಯಿಂದ ಯಾವ ಜಿಲ್ಲೆಗೂ ಬೊಗಸೆ ನೀರು ಬರುವುದಿಲ್ಲ. ಈ ವಿಚಾರದಲ್ಲಿ ಹೋರಾಟಗಾರರಗಿಂತ ಆರೋಗ್ಯ ಸಚಿವರಿಗೇ ಹೆಚ್ಚು ಗೊತ್ತಿದೆ. ಆದರೆ ಸಚಿವ ಸ್ಥಾನ ಅವರ ಬಾಯಿ ಕಟ್ಟಿ ಹಾಕಿದೆ. ಹೀಗಾಗಿಯೇ ಅವರು ಇವತ್ತು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರಿಗೆ ವಿಷಯುಕ್ತ ನೀರು ಕೊಡಲು ಮುಂದಾಗಿದ್ದಾರೆ’ ಎಂದು ದೂರಿದರು.

‘ಬೆಂಗಳೂರಿನ ತ್ಯಾಜ್ಯ ನೀರು ಒಂದು ದಿನ ಪರೀಕ್ಷಿಸಿದರೆ ಸಾಲದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಶೀಘ್ರದಲ್ಲೇ ತಜ್ಞರ ತಂಡ ಮೂರು ಜಿಲ್ಲೆಗಳಿಗೆ ಆಗಮಿಸಿ ಒಂದು ವಾರ ಕೆರೆಗಳ ಪಕ್ಕದಲ್ಲಿಯೇ ಮೊಕ್ಕಾಂ ಹೂಡಿ ಅಧ್ಯಯನ ನಡೆಸಿ, ವಾಸ್ತವ ಸ್ಥಿತಿ ಬಗ್ಗೆ ವರದಿ ನೀಡಲಿದೆ. ಆ ಬಳಿಕ ನೀರಾವರಿ ವಿಚಾರದಲ್ಲಿ ಗೋಮುಖ ವ್ಯಾಘ್ರತನ ಪ್ರದರ್ಶಿಸುತ್ತಿರುವ ಜನ ಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಮುಖಂಡರಾದ ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry