ಪುಟ್ಮಲ್ಲಿಯ ಪುಟ್ಟ ಮಾತು

7

ಪುಟ್ಮಲ್ಲಿಯ ಪುಟ್ಟ ಮಾತು

Published:
Updated:
ಪುಟ್ಮಲ್ಲಿಯ ಪುಟ್ಟ ಮಾತು

‘ರಾಧಾ ರಮಣ’ ಧಾರಾವಾಹಿಯಲ್ಲಿ ನಾಯಕ ರಮಣನ ಮುದ್ದಿನ ತಂಗಿ- ಸಿರಿವಂತರ ಮನೆಮಗಳು, ‘ಪುಟ್ಮಲ್ಲಿ’ ಧಾರಾವಾಹಿಯಲ್ಲಿ ಅನಾಥ, ಬಡಕುಟುಂಬದ ಮುಗ್ಧ ಹುಡುಗಿ, ಹೀಗೆ ನಟಿಸಿದ ಎರಡು ಧಾರಾವಾಹಿಗಳಲ್ಲೂ ಭಿನ್ನ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು ರಕ್ಷಾ ಗೌಡ.

ಮೈಸೂರು ಮೂಲದವರಾದರೂ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ತಾಯಿ ಕಿದ್ವಾಯಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಿನ್ನೂ ಪ್ರಥಮ ವರ್ಷದ ಬಿ.ಬಿ.ಎಂ. ಓದುತ್ತಿರುವ ರಕ್ಷಾಗೆ ನಟನೆ ಒಲಿದಿದ್ದು ಆಕಸ್ಮಿಕವಾಗಿಯೇ. ರಾಧಾ ರಮಣ ಧಾರಾವಾಹಿ ನಿರ್ದೇಶಕರು ಇವರ ಫೋಟೊ ನೋಡಿ ನಟನೆಗೆ ಅವಕಾಶ ನೀಡಿದ್ದರು. ಅಲ್ಲಿಂದ ಇವರ ನಟನೆಯ ಹಾದಿ ಸಾಗಿತ್ತು.

ಬಾಲ್ಯದಿಂದಲೂ ನೃತ್ಯದ ಮೇಲೆ ಒಲವು ಹೊಂದಿರುವ ಇವರು ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದು ರಾಧಾ ರಮಣ ಧಾರಾವಾಹಿಯಲ್ಲೇ. ಈ ಅನುಭವದ ಬಗ್ಗೆ ಹೇಳುತ್ತಾ ‘ನಾನು ಶೂಟಿಂಗ್ ಆರಂಭಿಸಿದ ಮೊದಲ ದಿನ ಬೆಳಿಗ್ಗೆ ಸ್ವಲ್ಪ ಭಯದಿಂದ ಇದ್ದೆ. ಮೊದಲ ಶಾಟ್‌ನಲ್ಲೇ ಅಳುವ ಸೀನ್ ಇತ್ತು. ನಾನು ನಟಿಸುವ ದೃಶ್ಯ ಸಂಜೆ ಇತ್ತು. ಅಷ್ಟರವರೆಗೆ ಉಳಿದ ನಟರೆಲ್ಲರ ಅಭಿನಯ ನೋಡುತ್ತಾ ಕುಳಿತಿದ್ದ ನನ್ನಲ್ಲಿ ಭಯ ಪೂರ್ತಿ ಮಾಯವಾಗಿತ್ತು. ಆದರೆ, ಜನರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ, ನನ್ನ ನಟನೆಯನ್ನು ಇಷ್ಟಪಡುತ್ತಾರೋ ಇಲ್ಲವೋ ಎನ್ನುವ ಆತಂಕ ಕಾಡಿತ್ತು’ ಎಂದು ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

ರಾಧಾ ರಮಣದಿಂದ ಅನ್ವಿತಾ (ರಕ್ಷಾ) ಕಾಣೆಯಾಗಿದ್ದಾರೆ ಅಂತೆಲ್ಲಾ ಗಾಸಿಪ್ ಹುಟ್ಟಿಕೊಂಡಿದೆ, ಇದೇನು ನಿಜನಾ? ಅಂತಾ ಕೇಳಿದ್ರೆ ‘ಇಲ್ಲ ಆ ಥರ ಏನೂ ಇಲ್ಲ. ಸ್ವಲ್ಪ ದಿನ ನನ್ನ ದೃಶ್ಯ ಇರಲಿಲ್ಲ. ಅದ್ಕೆ ಕಾಣೆ ಆದೆ ಅನ್ಕೊಂಡ್ ಬಿಡೋದಾ? ಇತ್ತೀಚಿನ ಸಂಚಿಕೆಗಳಲ್ಲಿ ಕಾಣಿಸಿಕೊಳ್ತಾ ಇದೀನಿ, ಕಾಣೆ ಆಗಿಲ್ಲಾರೀ’ ಎಂದು ಹುಸಿಕೋಪದಿಂದ ಹೇಳುತ್ತಾರೆ.

ರಾಧಾ ರಮಣದಲ್ಲಿ ನಟಿಸುತ್ತಿರುವಾಗಲೇ ‘ಪುಟ್ಮಲ್ಲಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು ಈ ಪುಟ್ಟ ಹುಡುಗಿ.

ಕಾಲೇಜು, ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗೋದು ನಿಮಗೆ ಕಷ್ಟ ಅನ್ನಿಸೊದಿಲ್ವಾ? ಎಂದು ಕೇಳಿದ್ರೆ ‘ಏನ್ ಮಾಡೋದು, ಎರಡನ್ನೂ ನಿಭಾಯಿಸಲೇ ಬೇಕಲ್ವಾ? ನಂಗೆ ಕಾಲೇಜಿನಲ್ಲಿ ತುಂಬಾ ಸಪೋರ್ಟ್ ಇದೆ. ಆ ಕಾರಣಕ್ಕೆ ಅಲ್ವಾ ನಾನು ನಟಿಸಲು ಸಾಧ್ಯವಾಗಿದ್ದು’ ಎಂದು ಕಾಲೇಜು ಸಿಬ್ಬಂದಿಯನ್ನು ನೆನೆಯಲು ಮರೆಯುವುದಿಲ್ಲ ರಕ್ಷಾ.

‘ನಾನು ಮೊದಲ ಬಾರಿ ನಟಿಸಿದ್ದು ತಂಗಿ ಪಾತ್ರದಲ್ಲಿ. ಆದರೆ, ಮೊದಲ ಧಾರಾವಾಹಿಯಲ್ಲೇ ತಂಗಿ ಪಾತ್ರದಲ್ಲಿ ನಟಿಸುವ ಹಾಗಾಯ್ತು ಅಂತೇನೂ ನಂಗೆ ಅನ್ನಿಸಿಲ್ಲ. ಹೇಗಿದ್ರೂ ನಾನು ನಟನೆ ಕಲಿಯೋ ಹಂತ ಇದು. ಒಂದು ಪೂರ್ಣ ಪ್ರಮಾಣದ ನಟಿಯಾಗಲು ಎಲ್ಲಾ ರೀತಿಯ ನಟನೆಯೂ ತಿಳಿದಿರಬೇಕು. ಹಾಗಾಗಿ ಆ ಪಾತ್ರದಲ್ಲಿ ನಟಿಸಲು ಖುಷಿಯಿಂದ ಒಪ್ಪಿಕೊಂಡಿದ್ದೆ. ಈಗ ನಾಯಕಿಯಾಗಿ ನಟಿಸುತ್ತಿದ್ದೇನೆ. ಖುಷಿ ಇದೆ’ ಎಂದು ನಟನೆಯಲ್ಲಿ ತಾವಿನ್ನೂ ಎಳೆಕೂಸು ಎಂಬಂತೆ ಹೇಳುತ್ತಾರೆ.

ರಾಧಾ ರಮಣದಲ್ಲಿ ಆಧುನಿಕ ಹುಡುಗಿ, ಪುಟ್ಮಲ್ಲಿಯಲ್ಲಿ ಹಳ್ಳಿ ಹುಡುಗಿ, ಹಾಗಾದ್ರೆ ರಕ್ಷಾ ನೈಜ ವ್ಯಕ್ತಿತ್ವಕ್ಕೆ ಯಾವುದು ಹೆಚ್ಚು ಸಾಮ್ಯತೆ ಇದೆ ಎಂದರೆ ಜೋರಾಗಿ ನಗುವ ಈ ಸುಂದರಿ, ‘ಅದನ್ನು ನಾನ್ ಹೇಗೆ ಹೇಳ್ಲಿ? ನೀವೇ ಒಂದ್ ಸಲ ಸೆಟ್‌ಗೆ ಬಂದು ನೋಡಿ’ ಎಂದು ಸುಮ್ಮನಾಗುತ್ತಾರೆ.

ಸಿನಿಮಾದಲ್ಲಿ ಅನೇಕ ಅವಕಾಶ ಬಂದಿದ್ದರೂ ಇನ್ನೂ ಸ್ವಲ್ಪ ದಿನ ಕಿರುತೆರೆಯಲ್ಲೇ ಪಯಣ ಮುಂದುವರಿಸುವ ಅಭಿಲಾಷೆ ಅವರದ್ದು.

‘ಎಲ್ಲರ ಫ್ಯಾಮಿಲಿಯಲ್ಲೂ ನಟನೆಯ ವಿಚಾರಕ್ಕೆ ಬಂದಾಗ ವಿರೋಧಿಸುತ್ತಾರೆ. ಆದರೆ, ಅದು ಅವರು ಮಾಡುವ ದೊಡ್ಡ ತಪ್ಪು. ನನ್ನೊಳಗೆ ಒಬ್ಬಳು ನಟಿ ಇದ್ದಾಳೆ ಎಂಬುದು ನಿಜಕ್ಕೂ ತಿಳಿದಿರಲಿಲ್ಲ. ಆದರೆ, ಅದನ್ನು ಗುರುತಿಸಿದ್ದು ನಮ್ಮ ತಾಯಿ. ನನ್ನಲ್ಲೂ ಪ್ರತಿಭೆ ಇದೆ ಎಂದು ತೋರಿಸಿದ್ದೇ ಅವರು. ಅವರ ಸಹಕಾರವಿಲ್ಲದಿದ್ದರೆ ನಾನು ಇಲ್ಲಿಯವರೆಗೆ ಮುಂದುವರಿಯಲು ಸಾಧ್ಯವಾಗುತ್ತಲೇ ಇರಲಿಲ್ಲ ಎಂದು ಅನ್ನಿಸುತ್ತಿದೆ’ ಎಂದು ತಾಯಿ ಬಗ್ಗೆ ತುಂಬು ಅಭಿಮಾನದಿಂದ ಮಾತನಾಡುತ್ತಾರೆ ರಕ್ಷಾ.

‌‌ಕಷ್ಟದಲ್ಲಿರುವವರು ಹೇಗಿರ್ತಾರೆ, ಅಂತಹವರಿಗೆ ಸುತ್ತಲಿನವರು ಹೇಗೆ ಕಷ್ಟ ಕೊಡುತ್ತಾರೆ ಎಂಬುದೆಲ್ಲಾ ನನಗೆ ‘ಪುಟ್ಮಲ್ಲಿ’ ಧಾರಾವಾಹಿಯಿಂದಲೇ ತಿಳಿದಿದ್ದು, ಆ ಪಾತ್ರವನ್ನು ವೈಯಕ್ತಿಕವಾಗಿ ನೋಡಿದಾಗ ನನಗೆ ತುಂಬಾ ಬೇಸರವಾಗುತ್ತದೆ. ಆದರೆ ಈ ರೀತಿಯ ಪಾತ್ರಗಳಿಂದ ಇನ್ನಷ್ಟು ನನ್ನನ್ನು ನಟನೆಗೆ ತೆರೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ.

‘ನನಗೆ ಯಾವುದೇ ಪಾತ್ರವಾಗಲಿ ಮಹಿಳಾ ಕೇಂದ್ರಿತ ಕಥೆಯಿದ್ದರೆ ಅಂತಹ ಧಾರಾವಾಹಿಗಳಲ್ಲಿ ನಟಿಸಲು ತುಂಬಾ ಇಷ್ಟ’ ಎನ್ನುವ ಅವರಿಗೆ ದೀಪಿಕಾ ಪಡುಕೋಣೆ ನೆಚ್ಚಿನ ನಟಿ.-ರಕ್ಷಾ ಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry