ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

7
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ: ಸಂಸದರಿಗೆ ಅಂಕಿಸಂಖ್ಯೆ ಒಪ್ಪಿಸಿದ ಅಧಿಕಾರಿಗಳು

ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

Published:
Updated:
ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

ಯಾದಗಿರಿ: ಕೇಂದ್ರ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಅಧ್ಯಕ್ಷರಿಗೆ, ಸಂಸದರಿಗೆ ಅಂಕಿಅಂಶ ಒಪ್ಪಿಸುವುದರೊಂದಿಗೆ ಆರ್ಥಿಕ ವರ್ಷಾಂತ್ಯದ ಸಭೆ ಸಮಾಪ್ತಿಯಾಯಿತು.

ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ. ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳ ಅನುದಾನ ಎಷ್ಟು? ಯಾವ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಅನುದಾನ ಒದಗಿಸಿಲ್ಲ? ನರೇಗಾ, ಸ್ವಚ್ಛ ಭಾರತ ಯೋಜನೆಗಳು ಜಿಲ್ಲೆಯಲ್ಲಿ ಸಾಫಲ್ಯ ಕಂಡಿವೆಯೇ? ಇಲ್ಲದಿದ್ದರೆ ಸಮಸ್ಯೆ– ಸವಾಲುಗಳೇನು? ಯಾವ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸಬೇಕಿತ್ತು. ಎಷ್ಟು ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ? ಎಂಬುದರ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯಲಿಲ್ಲ.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ದೀರ್ಘ ಸಮಯ ಕುಳಿತು ಅಧಿಕಾರಿಗಳಿಂದ ಒಂದಷ್ಟು ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಆದರೆ, ಸಂಸದ ಬಿ.ವಿ.ನಾಯಕ ಸಭೆಯಲ್ಲಿ ಕೆಲ ಸಮಯ ಕುಳಿತಿದ್ದು ಬಿಟ್ಟರೆ ಸಭೆಯಿಂದ ಎದ್ದುಹೋಗಿ ಹೊರಗಡೆ ಸಮಯ ಕಳೆದರು. ಸಂಸದರ ನಿಧಿ ಅನುದಾನ ಬಳಕೆ ಕುರಿತಂತೆ ಸಭೆಯಲ್ಲಿ ಅವರು ಒಂದೂ ಪ್ರಶ್ನೆ ಎತ್ತಲಿಲ್ಲ.

ಮೊದ ಮೊದಲಿಗೆ ಅಂಕಿಅಂಶ ಒಪ್ಪಿಸಿದ ಅಧಿಕಾರಿಗಳು ಹಿಂದಿನ ಬಾಗಿಲಿನಲ್ಲಿ ಎದ್ದು ಹೋಗುತ್ತಿದ್ದದ್ದು ಕಂಡುಬಂತು. ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲೂ ಅಧಿಕಾರಿಗಳು ಇದೇ ಚಾಳಿ ಇರುತ್ತದೆ. ಸಭೆಯಲ್ಲಿ ಕುಳಿತಿದ್ದ ಅಧಿಕಾರಿಗಳು ಇಲಾಖೆಯ ಸರದಿ ಯಾವಾಗ ಬರುತ್ತದೆ? ಅಂಕಿಅಂಶ ಒಪ್ಪಿಸಿ ಯಾವಾಗ ಜಾಗ ಖಾಲಿ ಮಾಡೋಣ ಎಂಬಂತೆ ಹವಣಿಸುತ್ತಿದ್ದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ ವೈಫಲ್ಯ ಕಂಡಿದ್ದರೂ, ಸಭೆಯಲ್ಲಿ ಯೋಜನೆ ಕುರಿತಂತೆ ವೈಫಲ್ಯ ಕುರಿತು ಯಾವುದೇ ಚರ್ಚೆಗಳು ನಡೆಯಲಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಅಧಿಕಾರಿಗಳು ಕೊಟ್ಟ ಮಾಹಿತಿ ಸಂಸದರಿಗೆ ಬಿಟ್ಟರೆ ಯಾರಿಗೂ ಕೇಳಿಸಲಿಲ್ಲ. ಜಿಲ್ಲೆಗೆ ಕೇಂದ್ರ ಜಾರಿಗೊಳಿಸಿರುವ ಒಟ್ಟು ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಎಂಟು ವರ್ಷಗಳಿಂದ ಪೂರ್ಣಗೊಂಡಿಲ್ಲ. ಒಂದೂ ಶುದ್ಧ ಕುಡಿಯುವ ನೀರಿನ ಘಟಕಗಳು ಜನರಿಗೆ ಹನಿನೀರು ಒದಗಿಸುತ್ತಿಲ್ಲ. ಆದರೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಯೋಜನೆಗಳ ವೈಫಲ್ಯ ಕುರಿತು ಪರಾಮರ್ಶೆ ನಡೆಯಲಿಲ್ಲ.

ಕಾರ್ಮಿಕ ಅಧಿಕಾರಿಗೆ ಮಾಹಿತಿಯೇ ಗೊತ್ತಿಲ್ಲ: ಜಿಲ್ಲೆಯಲ್ಲಿ ನರೇಗಾ ವಿಫಲಗೊಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲೆಯಲ್ಲಿನ ಒಟ್ಟು ಕಾರ್ಮಿಕರ ಸಂಖ್ಯೆ ಎಷ್ಟು? ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಪ್ರಶ್ನಿಸಿದರು.

ಎಷ್ಟು ಕಾರ್ಮಿಕರ ನೋಂದಣಿ ಆಗಿದೆ. ಕೇಂದ್ರ ಒದಗಿಸಿರುವ ಅನುದಾನ ಎಷ್ಟು? ಖರ್ಗೆ ಪ್ರಶ್ನೆಗಳನ್ನು ಎಸೆದರೂ ಅಧಿಕಾರಿ ಗೊತ್ತಿಲ್ಲ ಎಂದು ಉತ್ತರಿಸಿದರು. ಅಸಮಾಧಾನಗೊಂಡ ಖರ್ಗೆ ಅವರು ಮುಂದಿನ ಸಲ ಇಲಾ ಖೆಯ ಪರಿಪೂರ್ಣ ಮಾಹಿತಿ ತೆಗೆದು ಕೊಂಡು ಬರುವಂತೆ ಸೂಚಿಸಿದರು.

ಕೆಲ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ವಿಫಲರಾಗುತ್ತಿದ್ದಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ ಅಧಿಕಾರಿಗಳ ಪರವಾಗಿ ಸಂಸದರಿಗೆ ಪೂರಕ ಮಾಹಿತಿ ಒದಗಿಸುವ ಕೆಲಸ ಮಾಡಿದರು.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರಡ್ಡಿ ಮಾಲಿಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾ ಪಂಚಾಯಿತಿ ಸಿಇಒ ಅವಿನಾಶ್ ರಾಜೇಂದ್ರನ್‌ ಮೆನನ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

***

ರಸ್ತೆ ಅಭಿವೃದ್ಧಿಗೆ ಬಿಡಿಗಾಸಿಲ್ಲ!

ಜಿಲ್ಲೆಯಲ್ಲಿನ ರಾಜ್ಯ, ಜಿಲ್ಲೆ ಹಾಗೂ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 3,320 ಕಿಲೋ ಮೀಟರ್ ಉದ್ದ ಗ್ರಾಮೀಣ ರಸ್ತೆಗಳಿವೆ. ಅವುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಪ್ರಧಾನ ಮಂತ್ರಿ ಗ್ರಾಮ್‌ ಸಡಕ್‌ ಯೋಜನೆಯಡಿ ಬಿಡಿಗಾಸು ಅನುದಾನ ಒದಗಿಸಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಖರ್ಗೆ ಅವರ ಗಮನ ಸೆಳೆದರು.

***

ಪತ್ರಕರ್ತರ ಗ್ಯಾಲರಿಯಲ್ಲಿ ತುಂಬಿದ ಅಧಿಕಾರಿಗಳು

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿನ ಪತ್ರಕರ್ತರ ಗ್ಯಾಲರಿಯಲ್ಲಿ ಅಧಿಕಾರಿಗಳೇ ತುಂಬಿದ್ದರು. ಇದರಿಂದ ಪತ್ರಕರ್ತರು–ಅಧಿಕಾರಿಗಳು ಕಿರಿಕಿರಿ ಅನುಭವಿಸುವಂತಾಗಿತ್ತು.

‘ಸಭಾಂಗಣದಲ್ಲಿ ಸಾಕಷ್ಟು ಕುರ್ಚಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳು ಪತ್ರಕರ್ತರ ಗ್ಯಾಲರಿ ನುಗ್ಗುವುದು ಸಾಮಾನ್ಯವಾಗಿದೆ. ಈ ಕುರಿತು ಪತ್ರಕರ್ತರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಅಲ್ಲದೇ ಗ್ಯಾಲರಿಯನ್ನು ಸಭಾಂಗಣದ ಹಿಂಬದಿಯ ಮೂಲೆಯಲ್ಲಿ ನಿರ್ಮಿಸಿರುವುದರಿಂದ ಸಭೆಯ ಸಮರ್ಪಕ ಮಾಹಿತಿ ಸಿಗುತ್ತಿಲ್ಲ’ ಎಂಬುದಾಗಿ ಪತ್ರಕರ್ತರು ದೂರಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry