ಕೊಹ್ಲಿಗೆ ಐಸಿಸಿ ಪ್ರಶಸ್ತಿ ಗೌರವ

7

ಕೊಹ್ಲಿಗೆ ಐಸಿಸಿ ಪ್ರಶಸ್ತಿ ಗೌರವ

Published:
Updated:
ಕೊಹ್ಲಿಗೆ ಐಸಿಸಿ ಪ್ರಶಸ್ತಿ ಗೌರವ

ನವದೆಹಲಿ (ಎಎಫ್‌ಪಿ): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ವರ್ಷದ ಶ್ರೇಷ್ಠ ಕ್ರಿಕೆಟಿಗನಿಗೆ ನೀಡುವ ಪ್ರತಿಷ್ಠಿತ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ವರ್ಷದ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ಏಕದಿನ ಕ್ರಿಕೆಟಿಗ ಪುರಸ್ಕಾರಗಳಿಗೂ ವಿರಾಟ್‌ ಪಾತ್ರರಾಗಿದ್ದಾರೆ.

2016ರ ಸೆಪ್ಟೆಂಬರ್‌ 21ರಿಂದ 2017ರ ಡಿಸೆಂಬರ್‌ 31ರ ಅವಧಿಯಲ್ಲಿ ಅವರ ಸಾಧನೆಯ ಆಧಾರದಲ್ಲಿ  ಕೊಹ್ಲಿ ಅವರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.

ವಿರಾಟ್‌, ಗ್ಯಾರಿಫೀಲ್ಡ್‌ ಸೋಬರ್ಸ್‌ ಟ್ರೋಫಿ ಜಯಿಸಿದ ಭಾರತದ ನಾಲ್ಕನೇ ಆಟಗಾರ. ರಾಹುಲ್‌ ದ್ರಾವಿಡ್‌ (2004), ಸಚಿನ್‌ ತೆಂಡೂಲ್ಕರ್‌ (2010) ಮತ್ತು ರವಿಚಂದ್ರನ್‌ ಅಶ್ವಿನ್‌ (2016) ಮೊದಲು ಈ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌, ವರ್ಷದ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಯಜುವೇಂದ್ರ ಚಾಹಲ್‌ಗೆ ‘ವರ್ಷದ ಶ್ರೇಷ್ಠ ಟ್ವೆಂಟಿ–20 ಪ್ರದರ್ಶನ’ ಪ್ರಶಸ್ತಿ ಸಿಕ್ಕಿದೆ. ಹೋದ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಚಾಹಲ್‌ 25ರನ್‌ ನೀಡಿ 6 ವಿಕೆಟ್‌ ಪಡೆದಿದ್ದರು.

‘ಇದು ಬಹುದೊಡ್ಡ ಗೌರವ. ಹೋದ ವರ್ಷ ಅಶ್ವಿನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿ ನನಗೆ ಸಿಕ್ಕಿದೆ. ಸತತ ಎರಡು ವರ್ಷ ಭಾರತದವರೇ ಟ್ರೋಫಿ ಜಯಿಸಿದ್ದು ಹೆಮ್ಮೆಯ ವಿಷಯ. ಈ ಗೌರವ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವ ಐಸಿಸಿಗೆ ಆಭಾರಿಯಾಗಿದ್ದೇನೆ. ಇತರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರಿಗೂ ಅಭಿನಂದನೆ ಹೇಳುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

900 ಪಾಯಿಂಟ್ಸ್‌ ಸಂಗ್ರಹಿಸಿದ ಕೊಹ್ಲಿ

ದುಬೈ:
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಗುರುವಾರ ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್‌ ಒಟ್ಟು ರೇಟಿಂಗ್‌ ಪಾಯಿಂಟ್ಸ್‌ ಅನ್ನು 900ಕ್ಕೆ ಹೆಚ್ಚಿಸಿಕೊಂಡು ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಸುನಿಲ್‌ ಗಾವಸ್ಕರ್‌, ಮೊದಲು ಈ ಸಾಧನೆ ಮಾಡಿದ್ದರು.1979ರಲ್ಲಿ ಓವಲ್‌ ಅಂಗಳದಲ್ಲಿ 50ನೇ ಟೆಸ್ಟ್‌ ಪಂದ್ಯ ಆಡಿದ್ದ ಗಾವಸ್ಕರ್‌ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 13 ಮತ್ತು 221 ರನ್‌ ಗಳಿಸಿದ್ದರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 887ರಿಂದ 916ಕ್ಕೆ ಹೆಚ್ಚಿಸಿಕೊಂಡಿದ್ದರು.

ಸೆಂಚೂರಿಯನ್‌ನಲ್ಲಿ 65ನೇ ಟೆಸ್ಟ್‌ ಆಡಿದ್ದ ಕೊಹ್ಲಿ, 153 ರನ್ ಗಳಿಸಿ 20 ಅಂಕ ಕಲೆಹಾಕಿದ್ದರು. ಪಂದ್ಯಕ್ಕೂ ಮುನ್ನ ಅವರ ಖಾತೆಯಲ್ಲಿ 880 ಪಾಯಿಂಟ್ಸ್‌ ಇದ್ದವು.

ವಿರಾಟ್‌, ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 900 ಪಾಯಿಂಟ್ಸ್‌ ಗಳಿಸಿದ ಒಟ್ಟಾರೆ 31ನೇ ಆಟಗಾರ. ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ (961) ಮತ್ತು ಸ್ಟೀವ್‌ ಸ್ಮಿತ್‌ (947) ಈ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry