ದ್ವಂದ್ವಾರ್ಥ– ಧ್ವನ್ಯಾರ್ಥದ ‘ಕಾಶೀ’ಯಾತ್ರೆಗೆ ತೆರೆ

7

ದ್ವಂದ್ವಾರ್ಥ– ಧ್ವನ್ಯಾರ್ಥದ ‘ಕಾಶೀ’ಯಾತ್ರೆಗೆ ತೆರೆ

Published:
Updated:
ದ್ವಂದ್ವಾರ್ಥ– ಧ್ವನ್ಯಾರ್ಥದ ‘ಕಾಶೀ’ಯಾತ್ರೆಗೆ ತೆರೆ

ಬೆಂಗಳೂರು: ಸಿನಿಮಾ ನಾಯಕನೊಬ್ಬ ಹೀಗೆಯೇ ಇರಬೇಕು ಎನ್ನುವ ಜನಪ್ರಿಯ ಸೂತ್ರಗಳನ್ನು ಮುರಿದು ಕನ್ನಡ ಚಿತ್ರರಸಿಕರ ಮನಸ್ಸು ಗೆದ್ದವರು ಇಬ್ಬರು: ನರಸಿಂಹರಾಜು ಮತ್ತು ಕಾಶೀನಾಥ್‍. ನರಸಿಂಹರಾಜು ಕನ್ನಡ ಚಿತ್ರರಂಗದ ಅಪ್ರತಿಮ ಹಾಸ್ಯಕಲಾವಿದರಾದರೆ, ಕಾಶೀನಾಥ್‍ (1951 - ಜ. 18, 2018) ಬಹುರೂಪಗಳಲ್ಲಿ ಮಿಂಚಿದ ಕಲಾವಿದ.

ನಿರಾಕರ್ಷಕ ರೂಪ, ನರಪೇತಲ ದೇಹ, ಸಾಧಾರಣ ಬಣ್ಣ – ಇವೆಲ್ಲ ಸಿನಿಮಾ ನಾಯಕನೊಬ್ಬ ಹೊಂದಿರಬಾರದ ಗುಣ-ಲಕ್ಷಣಗಳು. ನಾಯಕನ ಮಾತಿರಲಿ, ಸಹಕಲಾವಿದರಿಗೆ ಕೂಡ ಇವು ಬಹುದೊಡ್ಡ ಅನರ್ಹತೆಗಳು. ಈ ಮೈನಸ್‍ ಪಾಯಿಂಟ್‍ಗಳನ್ನೇ ತನ್ನ ವೈಶಿಷ್ಟ್ಯವಾಗಿಸಿಕೊಂಡು ಸಹೃದಯರ ಮೆಚ್ಚುಗೆ ಗಳಿಸಿದ್ದು ಕಾಶೀನಾಥ್‍ರ ಬಹುದೊಡ್ಡ ಸಾಧನೆ.

ಕಾಶೀನಾಥ್‍ ಎಂದಕೂಡಲೇ ಅವರ ಸಿನಿಮಾಗಳನ್ನು ನೋಡಿದವರ ತುಟಿಗಳಲ್ಲಿ ತುಂಟನಗೆಯೊಂದು ಮಿನುಗಿಹೋಗುತ್ತದೆ. ಅದಕ್ಕೆ ಕಾರಣ, ಅವರ ಜೊತೆಗೆ ತಳಕು ಹಾಕಿಕೊಂಡಿರುವ ಲೈಂಗಿಕತೆಯ ಇಮೇಜು! ಅವರು ಯಾವ ವಿಷಯ ಮಾತನಾಡಿದರೂ ಅದರಲ್ಲಿ ಚಿತ್ರರಸಿಕರು ದ್ವಂದ್ವಾರ್ಥ ಹುಡುಕುವಷ್ಟರ ಮಟ್ಟಿಗೆ ಗಾಢವಾದ ಇಮೇಜಿದು. ಈ ಬಗ್ಗೆ ಅವರಿಗೆ ವಿಷಾದವೇನೂ ಇರಲಿಲ್ಲ. ‘ನನ್ನ ಸಿನಿಮಾ­ಗಳು ಅಶ್ಲೀಲವಾಗಿವೆ ಎಂದು ಟೀಕಿಸಿ­ದವರೇ ಮರೆಯಲ್ಲಿ ಸಿನಿಮಾ ನೋಡಿ  ಖುಷಿಪಟ್ಟಿದ್ದಾರೆ. ಇದೇ ನನ್ನ ಯಶಸ್ಸಿನ ಗುಟ್ಟು’ ಎಂದವರು ನಂಬಿದ್ದರು.

ಕುಂದಾಪುರದ ಬಳಿಯ ಕೋಟೇಶ್ವರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಾಶೀನಾಥ್‍ ತಮ್ಮ ಬಾಲ್ಯದಲ್ಲಿ ಚಿತ್ರರಂಗದಲ್ಲಿ ತೊಡಗಿಕೊಳ್ಳುವ ಕನಸನ್ನೂ ಕಂಡವರಲ್ಲ. ‘ವಿಜ್ಞಾನಿಯಾಗಬೇಕು, ಅಮೆರಿಕಕ್ಕೆ ಹೋಗಬೇಕು’ ಎನ್ನುವ ಕನಸಿನೊಂದಿಗೆ ಬಿ.ಎಸ್ಸಿ.ಯನ್ನು ಆಯ್ದುಕೊಂಡಿದ್ದರು. ಪದವಿ ಕಾಲೇಜಿನ ಎರಡನೇ ವರ್ಷದ ವೇಳೆಗೆ ರಂಗಭೂಮಿಯಲ್ಲಿ ಆಸಕ್ತಿ ಚಿಗುರಿತ್ತು. ಮೂರನೇ ವರ್ಷದ ವೇಳೆಗೆ ವಿಜ್ಞಾನದ ಜಾಗದಲ್ಲಿ ರಂಗಭೂಮಿಯಿತ್ತು.

ಬಿ.ಎಸ್ಸಿ. ನಂತರ ‘ಮುಂದೇನು’ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೆ ಎದುರಾದ ಮಗನಿಗೆ, ಅಪ್ಪ-ಅಮ್ಮ ಸೂಚಿಸಿದ್ದು ಊರಿನ ಜನಪ್ರಿಯ ಕಸುಬುಗಳನ್ನು. ಅಂಗಡಿ, ಬ್ಯಾಂಕು, ಹೋಟೆಲು ಎಂದು ಕುಂದಾಪುರದ ಕಡೆಯ ಮಂದಿ ನೆಲೆ ಕಂಡುಕೊಳ್ಳುವುದು ರೂಢಿ. ಆದರೆ, ಕಾಶೀನಾಥ್‍ಗೆ ಸಿನಿಮಾ ಮಾಡಿದರೆ ಹೇಗೆ ಎನ್ನಿಸಿತು. ಮಗನ ಕನಸಿಗೆ ಅಪ್ಪ ಬೈಗುಳದ ಬಂಡವಾಳ ಹೂಡಿದರು. ಮಗನ ಮೇಲಿನ ಪ್ರೀತಿಯಿಂದ ಅಮ್ಮ ಒಂದಿಷ್ಟು ದುಡ್ಡು ಹೊಂದಿಸಿಕೊಟ್ಟು, ‘ಏನು ಮಾಡುವಿಯೋ ಮಾಡು’ ಎಂದು ಉತ್ತೇಜಿಸಿದರು.

ಕನಸಿನ ಕರ್ಮಭೂಮಿಯನ್ನು ಅಮೆರಿಕದಿಂದ ಗಾಂಧಿನಗರಕ್ಕೆ ಬದಲಿಸಿಕೊಂಡ ಹುಡುಗನಿಗೆ ದೃಶ್ಯಮಾಧ್ಯಮಕ್ಕೆ ಬಂದಾಗ ಇದ್ದುದು ಒಂದೇ ಕನಸು – ಏನನ್ನಾದರೂ ಹೊಸತನ್ನು ಸಾಧಿಸಬೇಕು! ಸಮಾನ ಮನಸ್ಕರ ಜೊತೆಗೆ ‘ಅಸೀಮಾ’ ಎನ್ನುವ ಗೆಳೆಯರ ಬಳಗ ಕಟ್ಟಿಕೊಂಡು ದೃಶ್ಯಕಲೆಯ ಪ್ರಾಥಮಿಕ ಪಾಠಗಳನ್ನು ಕಲಿತಿದ್ದಾಯಿತು. ನಂತರದ್ದು ‘ಅಪರೂಪದ ಅತಿಥಿಗಳು’ ಸಿನಿಮಾ ಸಾಹಸ.  ಹಾಲಿವುಡ್‍ನ ‘ಕ್ರೇಜಿ ಬಾಯ್ಸ್’ ಚಿತ್ರದಿಂದ ಉತ್ತೇಜಿತರಾಗಿ ಕಾಶೀನಾಥ್‍ ರೂಪಿಸಿದ್ದ ಈ ಚಿತ್ರ ಬಂಡವಾಳ ವಾಪಸ್ಸಾತಿಯ ಜೊತೆಗೆ ಸ್ವಲ್ಪ ಲಾಭವನ್ನೂ ಅಪರಿಮಿತ ಆತ್ಮವಿಶ್ವಾಸವನ್ನೂ ತಂದುಕೊಟ್ಟಿತು.

'ಅಪರಿಚಿತ'ನಿಂದ ಪ್ರಸಿದ್ಧಿಗೆ...: ನಿರ್ದೇಶಕನಾಗಿ ಕಾಶೀನಾಥ್‍ರ ರುಜು ಕಾಣಿಸಿದ ಮೊದಲ ಸಿನಿಮಾ ‘ಅಪರಿಚಿತ’ (1978), ನಂತರದ್ದು ‘ಅನುಭವ’ (1984). ಬಂದೂಕಿನ ಶಬ್ದ ಕೇಳಿ ಹೆಣ್ಣೊಬ್ಬಳು ಬೆಚ್ಚುತ್ತಾಳೆ ಎನ್ನುವ ಎಳೆಯ ಹಿನ್ನೆಲೆಯಲ್ಲಿ ರೂಪುಗೊಂಡ ಸಿನಿಮಾ ‘ಅಪರಿಚಿತ’. ಮೊದಲ ರಾತ್ರಿಯಲ್ಲೇ ವಧುವೊಬ್ಬಳು ಕೋಣೆಯಿಂದ ಓಡಿಬಂದಿದ್ದ ಕುರಿತು ಅಮ್ಮ ಹೇಳಿದ್ದ ಪ್ರಸಂಗವನ್ನು ಕಾಶೀನಾಥ್‍ ‘ಅನುಭವ’ ಚಿತ್ರವನ್ನಾಗಿ ರೂಪಿಸಿದ್ದರು. ಮೊದಲನೆಯದು ಸಸ್ಪೆನ್ಸ್ ಥ‍್ರಿಲ್ಲರ್‍. ಇನ್ನೊಂದು ಮಡಿವಂತಿಕೆಯ ಸಮಾಜಕ್ಕೆ ಕನ್ನಡಿಹಿಡಿಯುವ ಪ್ರಯತ್ನ. ಎರಡೂ ಚಿತ್ರಗಳ ಕೇಂದ್ರದಲ್ಲಿದ್ದುದು ಜನಸಾಮಾನ್ಯರ ಮನೋವ್ಯಾಪಾರ. ಇವೆರಡೂ ಚಿತ್ರಗಳನ್ನು ಕಾಶೀನಾಥ್‍ ಹಿಂದಿಯಲ್ಲೂ ರೂಪಿಸಿದರು.

ಹೆಣ್ಣಿನ ಅಂತರಂಗವನ್ನು ಅರಿಯುವ, ಅರ್ಥೈಸುವ ಪ್ರಯತ್ನಗಳು ಕಾಶೀನಾಥ್‍ ಚಿತ್ರಗಳಿಗೆ ಮೊದಲೂ ಕನ್ನಡ ಚಿತ್ರರಂಗದಲ್ಲಿ ನಡೆದಿದ್ದವು. ಆದರೆ, ಅದನ್ನೊಂದು ಸಿದ್ಧಾಂತದ ರೂಪದಲ್ಲಿ ಅಥವಾ ಗೋಳಿನ ನಿರೂಪಣೆಯಾಗಿ ಮಾಡದೆ ಜನಸಾಮಾನ್ಯರ ಅನುಭವವಾಗಿ ರೂಪಿಸಿದ್ದು ಕಾಶೀನಾಥ್‍ರ ಅಗ್ಗಳಿಕೆ. ಆ ಕಾರಣದಿಂದಲೇ ಅವರ ಚಿತ್ರದ ಪಾತ್ರಗಳೊಂದಿಗೆ ಜನಸಾಮಾನ್ಯರು ಗುರ್ತಿಸಿಕೊಳ್ಳಲು ಸಾಧ್ಯವಾದುದು.

‘ಅನುಭವ’ ಸುದ್ದಿ ಮಾಡಿದ್ದು ವಿವಾದಗಳ ಕಾರಣದಿಂದಾಗಿ. ’ಇಷ್ಟು ಕೊಳಕು-ಅಸಭ್ಯ ಚಿತ್ರವನ್ನು ನಾನು ನೋಡಿದ್ದು ಇದೇ ಮೊದಲು’ ಎಂದು ಸೆನ್ಸಾರ್‍ ಅಧಿಕಾರಿಯೊಬ್ಬರಿಂದ ಸರ್ಟಿಫಿಕೇಟ್‍ ಪಡೆದ ಚಿತ್ರ, ನಾಲ್ಕು ತಿಂಗಳ ಹಗ್ಗಜಗ್ಗಾಟದ ನಂತರ ಸಾಕಷ್ಟು ಕತ್ತರಿ ಪ್ರಯೋಗದೊಂದಿಗೆ ತೆರೆಕಂಡಿತು. ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅಭಿನಯಾ, ಚೊಚ್ಚಿಲ ಚಿತ್ರಕ್ಕೇ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಪಡೆದರು. ಅರವಿಂದ್‍ ಹಾಗೂ ಕಾಮಿನೀಧರನ್ ನಟನೆಗೆ ಕೂಡ ಪ್ರಶಸ್ತಿ ಪುರಸ್ಕಾರ ಸಂದಿತು. ಸಿನಿಮಾದ ಮತ್ತೊಂದು ಆಕರ್ಷಣೆಯಾಗಿದ್ದ ಎನ್‍.ಎಸ್‍. ರಾವ್‍ ಹಾಗೂ ಉಮಾಶ್ರೀ ಜೋಡಿ, ನಂತರದ ದಿನಗಳಲ್ಲೂ ಜನಪ್ರಿಯ ಜೋಡಿಯಾಗಿ ಮುಂದುವರೆಯಿತು.

ದ್ವಂದ್ವಾರ್ಥ-ಧ್ವನ್ಯಾರ್ಥ: ಕಾಶೀನಾಥ್‍ರ ಚಿತ್ರಗಳಲ್ಲಿನ ಮಾತಿನ ರೂಪದ ಲೈಂಗಿಕತೆ ಒಂದು ತಲೆಮಾರಿನ ಯುವಜನರ ಮೈ ಬೆಚ್ಚಗಾಗಿಸಿದ್ದು ನಿಜ. ಆದರೆ, ಇದೇ ಚಿತ್ರಗಳಲ್ಲಿ ಅವರು ಸಮಕಾಲೀನ ಸಮಾಜದ ಓರೆಕೋರೆಗಳ ವಿಮರ್ಶೆಯ ಪ್ರಯತ್ನಗಳನ್ನೂ ನಡೆಸಿದ್ದರು. ಆ ಅರೆಕೊರೆಗಳ ರೂಪದಲ್ಲಿ ತಮ್ಮನ್ನೇ ಚಿತ್ರಿಸಿಕೊಳ್ಳುತ್ತಿದ್ದರು; ನರಪೇತಲ, ಪ್ಯಾದೆ ಎಂದೆಲ್ಲ ಕರೆದುಕೊಳ್ಳುತ್ತಿದ್ದರು. ‘ಕ್ರೌರ್ಯ ನನಗಿಷ್ಟವಿಲ್ಲ. ಆ ಕಾರಣದಿಂದಾಗಿ ಹಾಸ್ಯಚಿತ್ರಗಳನ್ನು ಮಾಡುತ್ತೇನೆ’ ಎನ್ನುತ್ತಿದ್ದ ಕಾಶೀನಾಥ್‍, ವಿನೋದದ ಮೂಲಕ ಬದುಕಿನ ವಿಷಾದಗಳನ್ನು ಶೋಧಿಸಲು ಪ್ರಯತ್ನಿಸುತ್ತಿದ್ದರು. ಚಾರ್ಲಿ ಚಾಪ್ಲಿನ್‍ ಅವರಿಗೆ ಆದರ್ಶವಾಗಿದ್ದರು. ‘ಅವಳೇ ನನ್ನ ಹೆಂಡ್ತಿ’ ಸಿನಿಮಾ ಜನರನ್ನು ನಗಿಸಿದರೂ, ಅದರ ಕೇಂದ್ರದಲ್ಲಿದ್ದುದು ವರದಕ್ಷಿಣೆಯ ವಿರುದ್ಧದ ಪ್ರತಿಭಟನೆ. ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಹಾಡಿನ ಮೂಲಕ ತರುಣರ ಸ್ವಾಭಿಮಾನವನ್ನು ಕೆದಕಿದ್ದರು.

‘ಅನಂತನ ಅವಾಂತರ’, ‘ಅಜಗಜಾಂತರ’, ‘ಅನಾಮಿಕ’, ‘ಅಮರ ಮಧುರ ಪ್ರೇಮ, ‘ಲವ್ ಮಾಡಿ ನೋಡು’ ಸೇರಿದಂತೆ ಅವರ ಬಹುತೇಕ ಸಿನಿಮಾಗಳಲ್ಲಿ ರಂಜನೆಯ ಜೊತೆಗೆ ವಿಮರ್ಶೆಯೂ ಇದೆ. 2017ರ ಯಶಸ್ವಿ ಚಿತ್ರಗಳಲ್ಲೊಂದಾಗ ‘ಚೌಕ’ ಅವರ ಅಭಿನಯದ ಮತ್ತೊಂದು ಜನಪ್ರಿಯ ಸಿನಿಮಾ. ಕಾಮುಕರಿಗೆ ಬಲಿಯಾದ ಮಗಳೊಬ್ಬಳ ನತದೃಷ್ಟ ತಂದೆಯ ಪಾತ್ರದಲ್ಲವರು ಪ್ರೇಕ್ಷಕರಿಗೆ ಇಷ್ಟವಾಗಿದ್ದರು.

‘ಓಳ್‍ ಮುನ್ಸಾಮಿ’ ತೆರೆಕಾಣಬೇಕಿರುವ ಸಿನಿಮಾ.

ಚಿತ್ರಕಥೆಯೇ ಹೀರೊ!: ‘ಸಿನಿಮಾದಲ್ಲಿ ಚಿತ್ರ ಕಥೆಯೇ ಹೀರೊ’ ಎಂದು ನಂಬಿದ್ದ ಅವರಿಗೆ, ಪ್ರತಿಭಾವಂತರನ್ನು ಗುರ್ತಿಸುವ ಶಕ್ತಿಯಿತ್ತು. ಸುಂದರನಾಥ ಸುವರ್ಣ, ಸುನೀಲ್‍ಕುಮಾರ್‍ ದೇಸಾಯಿ, ವಿ. ಮನೋಹರ್, ಉಪೇಂದ್ರ – ಇವರೆಲ್ಲ ಸಿನಿಮಾ ವ್ಯಾಕರಣ ಕಲಿತಿದ್ದು ಕಾಶೀನಾಥ್‍ ಗರಡಿಯಲ್ಲೇ. ತರಗತಿಗಳಲ್ಲಿ ಸಿನಿಮಾ ವ್ಯಾಕರಣ ಕಲಿಯದ ಕಾಶೀನಾಥ್‍, ತಮ್ಮ ಮನೆಯನ್ನೇ ಸಿನಿಮಾಶಾಲೆಯನ್ನಾಗಿ ಬದಲಿಸಿದ್ದು. ಅದು ಅನೇಕ ಸಿನಿಮಾ ವಿದ್ಯಾರ್ಥಿಗಳ ಪಾಲಿಗೆ ಉಚಿತ ವಸತಿಶಾಲೆಯೂ ಆಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಹೊಸತಾಗಿ ಚಿತ್ರರಂಗಕ್ಕೆ ಬರುವವರಿಗೆ ತರಬೇತಿ ನೀಡುವ ಯೋಜನೆಯೊಂದನ್ನು ಅವರು ರೂಪಿಸಿದ್ದರು. ದರ್ಶನ-ಮಾರ್ಗದರ್ಶನ ಎನ್ನುವುದೆಲ್ಲ ಚಿತ್ರೋದ್ಯಮದಲ್ಲಿ ಹೆಚ್ಚು ಸಲ್ಲುವ ನಾಣ್ಯಗಳಲ್ಲವಾದ್ದರಿಂದ ಅವರ ಯೋಚನೆ ಯಶಸ್ವಿಯಾಗಲಿಲ್ಲ.

ಕ್ರಿಯಾಶೀಲ ವ್ಯಕ್ತಿಯೊಬ್ಬ ತನ್ನ ಕೊರತೆಗಳನ್ನೇ ಧನಾತ್ಮಕವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಕಾಶೀನಾಥ್‍ ಅತ್ಯುತ್ತಮ ಉದಾಹರಣೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರಯೋಗಶೀಲ ಪ್ರಯತ್ನಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದ ಸಮಯದಲ್ಲಿ ರೂಪುಗೊಂಡ ಕಾಶೀನಾಥ್‍ರ ಚಿತ್ರಗಳು ವ್ಯಾಪಾರಿ ನೆಲೆಗಟ್ಟಿನಲ್ಲಿ ರೂಪುಗೊಂಡ ಪ್ರಯೋಗಶೀಲ ಚಿತ್ರಗಳೇ ಆಗಿದ್ದವು. ಕನ್ನಡ ಚಿತ್ರರಂಗದ ಯುವ ಹಾಗೂ ತುಂಟ ಅಧ್ಯಾಯದ ನಿರೂಪಣೆಯಲ್ಲಿ ಅವರ ಹೆಸರನ್ನು ನೆನಪಿಸಿಕೊಳ್ಳಲೇಬೇಕು.

ತೆರೆಮರೆಗೆ ಕಾಶೀನಾಥ್

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಟ-ನಿರ್ದೇಶಕ ಕಾಶೀನಾಥ್‌ (67) ಗುರುವಾರ ಕೊನೆಯುಸಿರೆಳೆದರು. ಅನಾರೋಗ್ಯದಿಂದಾಗಿ ಅವರು ಎರಡು ದಿನಗಳಿಂದ ನಗರದ ಶಂಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಚಂದ್ರಪ್ರಭಾ, ಮಕ್ಕಳಾದ ಅಮೃತವರ್ಷಿಣಿ ಹಾಗೂ ಅಲೋಕ್‍ ಅವರನ್ನು ಅಗಲಿದ್ದಾರೆ. ಅಲೋಕ್‍ ನಟನಾಗಿ ಚಿತ್ರರಂಗದಲ್ಲಿ ಪರಿಚಿತರು.

ನಟ, ನಿರ್ದೇಶಕ, ನಿರ್ಮಾಪಕನಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಭಿನ್ನ ರೀತಿಯ ಕಥಾವಸ್ತುಗಳಿಂದ ಜನಪ್ರಿಯತೆ ಗಳಿಸಿದ್ದರು. ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ನಿರ್ದೇಶಕರಾಗಿ ತಮ್ಮದೇ ಆದ ಶೈಲಿಯೊಂದನ್ನು ರೂಪಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry