ಪಿಎನ್‌ಜಿ ಸಂಪರ್ಕ: ಮನೆಗೆ ಉಚಿತ ಸ್ಮಾರ್ಟ್‌ ಮೀಟರ್‌

7

ಪಿಎನ್‌ಜಿ ಸಂಪರ್ಕ: ಮನೆಗೆ ಉಚಿತ ಸ್ಮಾರ್ಟ್‌ ಮೀಟರ್‌

Published:
Updated:
ಪಿಎನ್‌ಜಿ ಸಂಪರ್ಕ: ಮನೆಗೆ ಉಚಿತ ಸ್ಮಾರ್ಟ್‌ ಮೀಟರ್‌

ಬೆಂಗಳೂರು: ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕ ಪಡೆಯುವ ಮನೆಗಳಿಗೆ ಉಚಿತವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಭಾರತೀಯ ಅನಿಲ ಪ್ರಾಧಿಕಾರವು (ಗೇಲ್‌) ಮುಂದಾಗಿದೆ.

ಗೇಲ್‌ ಕೈಗೊಂಡಿರುವ ಯೋಜನೆಗಳ ಪ್ರಗತಿಯನ್ನು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ರಾಜ್ಯ ಸಚಿವ ವಿಜಯ್‌ ಗೋಯಲ್‌ ಗುರುವಾರ ಪರಿಶೀಲಿಸಿದರು.

ಪ್ರತಿ ಸ್ಮಾರ್ಟ್‌ ಮೀಟರ್‌ಗೆ ₹4,600 ವೆಚ್ಚವಾಗುತ್ತದೆ. ಬಳಸಿದ ಇಂಧನದ ಪ್ರಮಾಣ, ಶುಲ್ಕ, ಅನಿಲ ಸೋರಿಕೆಯ ಮಾಹಿತಿ ಇದರಲ್ಲಿ ದಾಖಲಾಗುತ್ತದೆ. ಇದನ್ನು ಮೊಬೈಲ್‌ ಆ್ಯಪ್‌ಗೆ ಸಂಪರ್ಕಿಸಬಹುದು ಎಂದು ಗೇಲ್‌ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಾನಾ ಮಾಹಿತಿ ನೀಡಿದರು.

ಪಿಎನ್‌ಜಿ ಬಳಕೆಯಲ್ಲಿ ಏಕಾಏಕಿ ಏರಿಕೆ ಕಂಡು ಬಂದರೆ ಅದರ ಮಾಹಿತಿಯು ಮೀಟರ್‌ನಲ್ಲಿ ದಾಖಲಾಗುತ್ತದೆ. ಸ್ವಯಂಚಾಲಿತವಾಗಿ ಈ ಮಾಹಿತಿ ಸಂಸ್ಥೆ ಕಚೇರಿಗೆ ರವಾನೆಯಾಗುತ್ತದೆ. ಅನಿಲ ಸೋರಿಕೆ ಸಂದರ್ಭದಲ್ಲಿ ಈ ರೀತಿ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಇಂತಹ ಮಾಹಿತಿ ಬಂದ ತಕ್ಷಣ ಸಂಸ್ಥೆ ಅಧಿಕಾರಿಗಳು ಆ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ ಎಂದು ವಿವರಿಸಿದರು.

ಎಚ್‌ಎಸ್‌ಆರ್‌ ಬಡಾವಣೆ, ಸಿಂಗಸಂದ್ರ, ಮಂಗಮ್ಮನಪಾಳ್ಯ, ಬೆಳ್ಳಂದೂರು, ಮಾರತ್ತಹಳ್ಳಿ, ವೈಟ್‌ಫೀಲ್ಡ್‌, ಡಾಲರ್ಸ್‌ ಕಾಲೊನಿ, ಬಿಇಎಲ್‌ ಕಾಲೊನಿ, ಎಚ್‌ಬಿಆರ್‌ ಬಡಾವಣೆ ಹಾಗೂ ಯಶವಂತಪುರದಲ್ಲಿ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ. 17 ಕೈಗಾರಿಕೆಗಳು ಹಾಗೂ 34 ವಾಣಿಜ್ಯ ಕಟ್ಟಡಗಳಿಗೆ ಅನಿಲ ಪೂರೈಕೆ ಆಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ ಹಾಗೂ ಆನೇಕಲ್‌ ಪ್ರದೇಶಗಳಲ್ಲೂ ಮನೆಗಳಿಗೆ ಅನಿಲ ಪೂರೈಸಲು ಕೊಳವೆ ಅಳವಡಿಸಲಾಗುತ್ತದೆ.

ನಗರದಲ್ಲಿ ಪೀಣ್ಯ, ಹೆಣ್ಣೂರು, ಲಗ್ಗೆರೆ, ಸುಮನಹಳ್ಳಿಯಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ವರ್ಷದಲ್ಲಿ ಇನ್ನೂ 14 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಪಾರ್ಥ ತಿಳಿಸಿದರು.

ಪೈಪ್‌ಲೈನ್‌ ಅಳವಡಿಕೆಗೆ ಅನುಮತಿ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಪಿಎನ್‌ಜಿ ಪೈಪ್‌ಲೈನ್‌ ಅಳವಡಿಕೆಗೆ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಬಳಿ ಸಿಎನ್‌ಜಿ ಕೇಂದ್ರ ಸ್ಥಾಪಿಸಲು ಜಾಗ ಸಿಗುತ್ತಿಲ್ಲ ಎಂದು ಗೇಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಐಎಎಲ್‌ ಬಳಿ 12 ಸಾವಿರ ಚದರ ಅಡಿ ಜಾಗ ಅಗತ್ಯವಿದೆ.  ಕೆಐಎಎಲ್‌ ಪ್ರತಿ

ನಿಧಿಗಳು ಹಾಗೂ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಗೋಯಲ್‌ ತಿಳಿಸಿದರು.

ಅಂಕಿ–ಅಂಶ

57,000

ನಗರದಲ್ಲಿ ಪಿಎನ್‌ಜಿ ಸಂಪರ್ಕ ಹೊಂದಿರುವ ಮನೆಗಳು

4,600

ಈಗಾಗಲೇ ಪಿಎನ್‌ಜಿ ಬಳಸುತ್ತಿರುವ ಮನೆಗಳು

1.32 ಲಕ್ಷ

ಎರಡು ವರ್ಷಗಳಲ್ಲಿ ಪಿಎನ್‌ಜಿ ಸಂಪರ್ಕ ಕಲ್ಪಿಸುವ ಗುರಿ

₹5,800

ಪಿಎನ್‌ಜಿ ಸಂಪರ್ಕದ ಶುಲ್ಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry