ಯಡಿಯೂರಪ್ಪ ಮನಗೆದ್ದ ಯುವಕ ಯಾರು?

7

ಯಡಿಯೂರಪ್ಪ ಮನಗೆದ್ದ ಯುವಕ ಯಾರು?

Published:
Updated:
ಯಡಿಯೂರಪ್ಪ ಮನಗೆದ್ದ ಯುವಕ ಯಾರು?

ಶಿಡ್ಲಘಟ್ಟ: ‘ಈ ಬಾರಿ ನಿಮಗೆ ಪರಿಚಿತ ಯುವಕನಿಗೆ ಟಿಕೆಟ್ ಕೊಡುತ್ತೇನೆ, ಗೆಲ್ಲಿಸಿ ಕಳುಹಿಸಿ’ ಎಂದು ನಗರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಆಡಿದ ಮಾತು ಇದೀಗ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಬಿಜೆಪಿ ವಲಯದಲ್ಲಿಯೂ ಇದು ಬಹು ಕುತೂಹಲದ ವಿಷಯವಾಗಿ ಮಾರ್ಪಟ್ಟಿದ್ದು, ಯಡಿಯೂರಪ್ಪ ಅವರ ಮನಸ್ಸಿನಲ್ಲಿರುವ ಆ ಯುವಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನೇಕ ಮುಖಂಡರು, ಕಾರ್ಯಕರ್ತರು ಗಮನ ಹರಿಸಿದ್ದಾರೆ.

ಈವರೆಗೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ ಸಿಗಬಹುದು ಎನ್ನುವ ಲೆಕ್ಕಾಚಾರ ಮಾಡುತ್ತಿದ್ದವರೆಲ್ಲ ಪರಿವರ್ತನಾ ಯಾತ್ರೆ ಬಳಿಕ ಹೊಸದೇ ಲೆಕ್ಕ ಶುರುವಿಟ್ಟುಕೊಂಡಿದ್ದಾರೆ. ಇನ್ನು ಕೆಲವರು ಹೊರಗಿನಿಂದ ಹೊಸಬರನ್ನೇನಾದರೂ ಪಕ್ಷಕ್ಕೆ ಕರೆತಂದು ಟಿಕೆಟ್‌ ನೀಡಬಹುದೆ ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈವರೆಗೆ ಹಿರಿಯ ಮುಖಂಡರತ್ತ ನೆಟ್ಟಿದ್ದ ದೃಷ್ಟಿಗಳೆಲ್ಲ ಇದೀಗ ಯುವ ಮುಖಂಡರ ಮುಖ ಹುಡುಕುವಂತಾಗಿದೆ.

ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೋದಾಗ ಅವರನ್ನು ಹಿಂಬಾಲಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಡಿ.ಆರ್.ಶಿವಕುಮಾರಗೌಡ ಸದ್ಯ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ತಮ್ಮ ನಾಯಕನ ಮೂಲಕ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ.

ಅವರಂತೆಯೇ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಮುಖಂಡ ಎಚ್‌.ಆರ್‌.ಸುರೇಶ್‌, ಬಿಜೆಪಿ ತಾಲ್ಲೂಕು ಮಂಡಲದ ಅಧ್ಯಕ್ಷ ಬಿ.ಸಿ.ನಂದೀಶ್‌ ಕೂಡ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಮೂರು ಜನರಲ್ಲಿ ಯಡಿಯೂರಪ್ಪನವರಿಗೆ ಯಾರು ಹಿತವರು ಎಂಬ ಪ್ರಶ್ನೆ ಕಮಲ ಪಡೆಯ ಕಾರ್ಯಕರ್ತರ ತಲೆಯಲ್ಲಿ ಹುಳು ಬಿಟ್ಟಂತಾಗಿದೆ ಎಂಬುದು ಹಿರಿಯ ಮುಖಂಡರೊಬ್ಬರ ಅನಿಸಿಕೆ.

‘ನಗರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಏರ್ಪಡಿಸಿದ್ದ ಎರಡೂ ಕಾರ್ಯಕ್ರಮಗಳಲ್ಲಿ ಸಮಬಲ ಎನ್ನುವಷ್ಟು ಕಾರ್ಯಕರ್ತರು ನೆರೆದಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಸಾಮರ್ಥ್ಯ ಕಡೆಗಣಿಸುವಂತಿಲ್ಲ. ಆದರೆ ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತದೆ ಎನ್ನುವುದರ ಮೇಲೆ ಮತ ಗಳಿಕೆಯ ಲೆಕ್ಕಾಚಾರಗಳು ಶುರುವಾಗುತ್ತವೆ’ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲ ಹಿರಿಯರು.

‘ಈಗಾಗಲೇ ಬಿಜೆಪಿ ಹೈಕಮಾಂಡ್‌ನಿಂದ ಪ್ರತಿ ಕ್ಷೇತ್ರದಲ್ಲಿ ಆಂತರಿಕ ಸಮೀಕ್ಷೆ ನಡೆದಿದೆ. ಕ್ಷೇತ್ರದಲ್ಲಿ ಯಾರ ವರ್ಚಸ್ಸು ಹೆಚ್ಚಿದೆ? ಯಾರಿಗೆ ‘ಬಿ ಫಾರಂ’ ನೀಡಿದರೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರಗಳು ವರಿಷ್ಠರ ಮಟ್ಟದಲ್ಲಿ ನಡೆದಿವೆ. ಪಕ್ಷ ಸಂಘಟನೆಗೆ ದುಡಿದ ಸ್ಥಳೀಯ ಮುಖಂಡರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಬಹುದು, ಇಲ್ಲವೇ ಗೆಲ್ಲುವ ಅಭ್ಯರ್ಥಿಯನ್ನು ಹೈಕಮಾಂಡ್‌ ತನ್ನದೇ ತಂತ್ರಗಾರಿಕೆ ಮುಂದಿಟ್ಟು ಹೊಸ ಮುಖವನ್ನು ಇಲ್ಲಿ ಪರಿಚಯಿಸಬಹುದು. ಒಟ್ಟಿನಲ್ಲಿ ಸದ್ಯ ತುಂಬಾ ಗೊಂದಲದಲ್ಲಿದ್ದೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಯಡಿಯೂರಪ್ಪ ಅವರ ಮಾತಿನ ದಾಟಿ ಗಮನಿಸಿದರೆ ಕಡೆಯ ಕ್ಷಣಗಳಲ್ಲಿ ಬೇರೆ ಪಕ್ಷದ ಯುವ ಮುಖಂಡರೊಬ್ಬರನ್ನು ಸೆಳೆದು ಇಲ್ಲಿ ತಂದು ನೆಲೆಗೊಳಿಸುವ ಸೂಚನೆಗಳು ಕಾಣುತ್ತಿವೆ. ಹಾಗಿದ್ದರೆ ಅವರು ಯಾರು? ಅಥವಾ ನಮ್ಮಲ್ಲೇ ಇರುವವರಲ್ಲೇ ಒಬ್ಬರಿಗೆ ಟಿಕೆಟ್‌ ನೀಡುತ್ತಾರಾ? ಎಲ್ಲವೂ ನಿಗೂಢವಾಗಿದೆ. ಅಂತಿಮ ನಿರ್ಧಾರಕ್ಕಾಗಿ ಇನ್ನೂ ಕೆಲ ದಿನ ಕಾಯಬೇಕಿದೆ’ ಎಂದೂ ಹೇಳುವರು.

* * 

ಪಕ್ಷದ ವರಿಷ್ಠರು ಯಾರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಹೊರಗಿನವರಿಗೇ ಟಿಕೆಟ್‌ ಕೊಟ್ಟರೂ ದುಡಿಯುತ್ತೇವೆ. ನಮ್ಮಲ್ಲಿ ಭಿನ್ನಮತವಿಲ್ಲ

ವಿ. ಜಯಕುಮಾರ್ ಬಿಜೆಪಿ ಕಾರ್ಯಕರ್ತ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry