20 ಎಎಪಿ ಶಾಸಕರು ಅನರ್ಹ?

7

20 ಎಎಪಿ ಶಾಸಕರು ಅನರ್ಹ?

Published:
Updated:
20 ಎಎಪಿ ಶಾಸಕರು ಅನರ್ಹ?

ನವದೆಹಲಿ: ದೆಹಲಿಯ ಆಡಳಿತಾರೂಢ ಎಎಪಿಯ 20 ಶಾಸಕರನ್ನು ಲಾಭದಾಯಕ ಹುದ್ದೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಶಾಸಕತ್ವದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗವು ರಾಷ್ಟ್ರಪತಿಗೆ ಶುಕ್ರವಾರ ಶಿಫಾರಸು ಮಾಡಿದೆ. ನಿಯಮದ ಪ್ರಕಾರ, ಆಯೋಗದ ಶಿಫಾರಸನ್ನು ರಾಷ್ಟ್ರಪತಿ ಅಂಗೀಕರಿಸಲೇಬೇಕು. ಹಾಗಾಗಿ ದೆಹಲಿ ವಿಧಾನಸಭೆಗೆ ‘ಮಿನಿ’ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.

ಅನರ್ಹತೆಗೆ ಶಿಫಾರಸಾದ 20 ಶಾಸಕರಲ್ಲಿ ಒಬ್ಬ ಸಚಿವರೂ ಸೇರಿದ್ದಾರೆ.

ಆಯೋಗದ ಈ ಶಿಫಾರಸಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಭಾರಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಯಾಕೆಂದರೆ, ಆಯೋಗ ಸಲ್ಲಿಸಿದಪಟ್ಟಿಯಲ್ಲಿ ಅವರ ಸಂಪುಟದ ಸಚಿವ ಕೈಲಾಶ್‌ ಗಹ್ಲೋಟ್‌, ಕೇಜ್ರಿವಾಲ್‌ ಆಪ್ತರಾದ ಆದರ್ಶ ಶಾಸ್ತ್ರಿ (ಇವರು ಲಾಲ್‌ ಬಹದ್ದೂರ್ ಶಾಸ್ತ್ರಿ ಮೊಮ್ಮಗ) ಮತ್ತು ಅಲ್ಕಾ ಲಾಂಬಾ ಅವರ ಹೆಸರಿದೆ.

‘ಮೋದಿ ಸಾಲ ತೀರಿಸಿದ ಜೋತಿ’

ಚುನಾವಣಾ ಆಯೋಗದ ಕ್ರಮಕ್ಕೆ ಎಎಪಿ ಉಗ್ರವಾಗಿ ಪ್ರತಿಕ್ರಿಯೆ ನೀಡಿದೆ. ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾಲವನ್ನು ಜೋತಿ ತೀರಿಸಿದ್ದಾರೆ ಎಂದು ಎಎಪಿ ಹೇಳಿದೆ.

ಆಯೋಗವು ಇಷ್ಟೊಂದು ಕೆಳ ಮಟ್ಟಕ್ಕೆ ಯಾವತ್ತೂ ಇಳಿದಿಲ್ಲ ಎಂದೂ ಎಎಪಿ ಆಕ್ರೋಶ ವ್ಯಕ್ತಪಡಿಸಿದೆ. ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿರುವವರಿಗೆ ಯಾವುದೇ ಆರ್ಥಿಕ ಪ್ರಯೋಜನ ಇಲ್ಲ. ಹಾಗಾಗಿ ಈ ಹುದ್ದೆ ಲಾಭದಾಯಕ ಹುದ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದು ಎಎಪಿಯ ವಾದ.

ನಿವೃತ್ತಿಗೆ ನಾಲ್ಕು ದಿನ ಮೊದಲು ಶಿಫಾರಸು

ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ನಿವೃತ್ತರಾಗುವುದಕ್ಕೆ ನಾಲ್ಕು ದಿನ ಮೊದಲು ಈ ಶಿಫಾರಸನ್ನು ರಾಷ್ಟ್ರಪತಿಗೆ ಕಳುಹಿಸಲಾಗಿದೆ ಎಂದು ಆಯೋಗದ ಮೂಲಗಳು ಹೇಳಿವೆ (ಇದೇ 23ರಂದು ಜೋತಿ ನಿವೃತ್ತರಾಗಲಿದ್ದಾರೆ). ಎಎಪಿ ಶಾಸಕರ ಅನರ್ಹತೆ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ರಾಷ್ಟ್ರಪತಿಗೆ ಕಳುಹಿಸಿದ ಶಿಫಾರಸಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಯೋಗ ತಿಳಿಸಿದೆ.

ನ್ಯಾಯಾಲಯದ ಮೊರೆ: ಅನರ್ಹತೆ ಶಿಫಾರಸಿನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಎಎಪಿ ಶಾಸಕರು ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಆದರೆ ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ತಮ್ಮ ಅರ್ಜಿ ನ್ಯಾಯಾಲಯದಲ್ಲಿದೆ ಎಂದು ಆಯೋಗದ ಕ್ರಮದಿಂದ ರಕ್ಷಣೆ ಪಡೆಯಲು ಯತ್ನಿಸಿದ ಶಾಸಕರ ಕ್ರಮವನ್ನೇ ಹೈಕೋರ್ಟ್‌ ಪ್ರಶ್ನಿಸಿದೆ.

ಸರ್ಕಾರಕ್ಕೆ ಭೀತಿ ಇಲ್ಲ: 20 ಶಾಸಕರು ಅನರ್ಹಗೊಂಡರೂ ದೆಹಲಿ ಸರ್ಕಾರದ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. 70 ಸದಸ್ಯರ ವಿಧಾನಸಭೆಯಲ್ಲಿ ಬಂಡಾಯ ಎದ್ದಿರುವ ಶಾಸಕ ಕಪಿಲ್‌ ಮಿಶ್ರಾ ಸೇರಿ ಎಎಪಿಯ 66 ಶಾಸಕರಿದ್ದಾರೆ. 20 ಮಂದಿ ಅನರ್ಹಗೊಂಡರೂ 45 ಶಾಸಕರು ಮತ್ತೆಯೂ ಉಳಿಯುತ್ತಾರೆ. ಆದರೆ, ಈ 20 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಎಎಪಿ ಎಷ್ಟು ಕ್ಷೇತ್ರಗಳನ್ನು ಗೆಲ್ಲಬಹುದು ಎಂಬುದೇ ಇಲ್ಲಿ ಮುಖ್ಯವಾಗಿದೆ. ಕಾಂಗ್ರೆಸ್‌ಗೆ ದೆಹಲಿಯಲ್ಲಿ ಒಬ್ಬ ಶಾಸಕನೂ ಇಲ್ಲ; ಬಿಜೆಪಿಯ ನಾಲ್ವರು ಸದಸ್ಯರಿದ್ದಾರೆ. ಎರಡೂ ಪಕ್ಷಗಳು ತಮ್ಮ ಸ್ಥಿತಿ ಉತ್ತಮಪಡಿಸಿಕೊಳ್ಳಲು ಅವಕಾಶ ಸೃಷ್ಟಿಯಾಗಿದೆ.

ಹಿನ್ನೆಲೆ:

2015ರ ಮಾರ್ಚ್‌ 13ರಂದು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಕೇಜ್ರಿವಾಲ್‌ ನೇಮಕ ಮಾಡಿದ್ದರು. ಈ ನೇಮಕದ ಬಳಿಕ ‘ದೆಹಲಿ ವಿಧಾನಸಭೆ ಸದಸ್ಯರ (ಅನರ್ಹತೆ ತಡೆ) ಕಾಯ್ದೆ 1997’ಕ್ಕೆ ತಿದ್ದುಪಡಿ ತರಲು ಯತ್ನಿಸಲಾಗಿತ್ತು. ಕೇಂದ್ರ ಸರ್ಕಾರದ ಅನುಮತಿ ಇಲ್ಲದೆಯೇ ಸಂಸದೀಯ  ಕಾರ್ಯದರ್ಶಿಗಳನ್ನು ನೇಮಿಸಲಾಗಿತ್ತು. ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲು ಆಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನಿರಾಕರಿಸಿದ್ದರು.

ರಾಷ್ಟ್ರ ರಾಜಧಾನಿ ಪ್ರದೇಶ ಕಾಯ್ದೆಯ ಪ್ರಕಾರ ಮುಖ್ಯಮಂತ್ರಿ ಸಚಿವಾಲಯಕ್ಕೆ ಒಬ್ಬ ಸಂಸದೀಯ ಕಾರ್ಯದರ್ಶಿಯನ್ನು ನೇಮಿಸಲು ಮಾತ್ರ ಅವಕಾಶ ಇದೆ. ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದನ್ನು ದೆಹಲಿ ಹೈಕೋರ್ಟ್‌ ಬಳಿಕ ರದ್ದು ಮಾಡಿತ್ತು. ವಕೀಲ ಪ್ರಶಾಂತ್‌ ಪಟೇಲ್‌ ಎಂಬವರು ಸಂಸದೀಯ ಕಾರ್ಯದರ್ಶಿಗಳ ನೇಮಕದ ವಿರುದ್ಧ ದೂರು ನೀಡಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷ ಕೂಡ ದೂರು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry