ಅಬ್ಬಕ್ಕ ಉತ್ಸವಕ್ಕೆ ₹50 ಲಕ್ಷ ಮಂಜೂರು

7

ಅಬ್ಬಕ್ಕ ಉತ್ಸವಕ್ಕೆ ₹50 ಲಕ್ಷ ಮಂಜೂರು

Published:
Updated:

ಮಂಗಳೂರು: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಒಟ್ಟಾರೆ ಕಾರ್ಯಕ್ರಮಕ್ಕೆ ಸರ್ಕಾರದಿಂದ ₹50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಅಬ್ಬಕ್ಕ ಉತ್ಸವ ಸಮಿತಿ ಗೌರವಾಧ್ಯಕ್ಷರೂ ಆದ ಆಹಾರ ಸಚಿವ ಯು.ಟಿ. ಖಾದರ್‌ ಹೇಳಿದರು.

ಫೆಬ್ರುವರಿ 3 ಮತ್ತು 4 ರಂದು ಸೋಮೇಶ್ವರ ಕೊಲ್ಯದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಡಾ. ಸಾರಾ ಅಬೂಬಕ್ಕರ್‌ ಹಾಗೂ ವಿನಯಾ ಪ್ರಸಾದ್‌ ಅವರಿಗೆ ಪ್ರದಾನ ಮಾಡಲಾಗುವುದು. ಫೆಬ್ರುವರಿ 10 ಮತ್ತು 11 ರಂದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದರು.

ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ದಕ್ಷಿಣ ಕನ್ನಡ ಮತ್ತು ಕರಾವಳಿಯ ಸಂಸ್ಕೃತಿ ಹಾಗೂ ಜನಪದ ಕಲಾ ಪ್ರದರ್ಶನಗಳು ನಡೆಯಲಿವೆ. ಬ್ಯಾರಿ, ಕೊಂಕಣಿ, ತುಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿವೆ ಎಂದರು.

ಉತ್ಸವದ ಅಂಗವಾಗಿ ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸೋಮೇಶ್ವರದ ಕೊಲ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ₹30 ಲಕ್ಷ, ಮೈಸೂರಿನ ಉತ್ಸವಕ್ಕೆ ₹8 ಲಕ್ಷ ಹಾಗೂ ದೆಹಲಿಯ ಕಾರ್ಯಕ್ರಮಕ್ಕೆ ₹12 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಯಾತ್ರಿ ನಿವಾಸ್‌ ನಿರ್ಮಾಣ: ಉಳ್ಳಾಲದ ಸೈಯ್ಯದ್‌ ಮದನಿ ದರ್ಗಾ, ಸೇಂಟ್‌ ಸೆಬಾಸ್ಟಿನ್‌ ಚರ್ಚ್‌, ಸೋಮೇಶ್ವರ ದೇವಸ್ಥಾನ ಹಾಗೂ ಮಂಜನಾಡಿ ದರ್ಗಾದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

₹50 ಲಕ್ಷದಿಂದ ₹75 ಲಕ್ಷ ವೆಚ್ಚದಲ್ಲಿ ಈ ಯಾತ್ರಿ ನಿವಾಸ್‌ ನಿರ್ಮಾಣ ಆಗಲಿದ್ದು, ಮುಡಿಪುನಲ್ಲಿ ಈಗಾಗಲೇ ಯಾತ್ರಿ ನಿವಾಸ್‌ ಉದ್ಘಾಟನೆಗೊಂಡಿದೆ. ಹೊರ ರಾಜ್ಯ, ದೇಶಗಳಿಂದ ಬರುವ ಯಾತ್ರಿಕರಿಗೆ ಸ್ಥಳೀಯ ಪ್ರವಾಸಿ ತಾಣಗಳಲ್ಲಿ ವಾಸ್ತವ್ಯವಿರಲು ಈ ಯಾತ್ರಿ ನಿವಾಸಗಳು ಅನುಕೂಲ ಆಗಲಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಮುಹಮ್ಮದ್‌ ಕರಂಬಾರ್‌, ತುಳು ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ್‌ ರೈ ಬಿ., ಭಾಸ್ಕರ್‌ ರೈ ಕುಕ್ಕವಳ್ಳಿ ಇದ್ದರು.

ಇಲ್ಯಾಸ್‌ ಪತ್ನಿಯ ಹೇಳಿಕೆ ತಿಳಿದಿಲ್ಲ’

ಇಲ್ಯಾಸ್‌ ಕುಟುಂಬದವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಇಲ್ಯಾಸ್‌ನ ಪತ್ನಿ ನನ್ನ ಸಹೋದರಿಯ ಸ್ಥಾನದಲ್ಲಿದ್ದು, ಅವರ ದುಃಖ ಅರ್ಥವಾಗುತ್ತದೆ. ನೈಜ ಆರೋಪಿಗಳ ಬಂಧನ ಆದಾಗ ಅವರಿಗೂ ಸಮಾಧಾನ ಆಗಲಿದೆ ಎಂದು ಸಚಿವ ಖಾದರ್‌ ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಮನೆಗೆ ಬರುತ್ತಿದ್ದ ಸಚಿವ ಖಾದರ್‌ ಈಗೆಲ್ಲಿದ್ದಾರೆ ಎಂಬ ಇಲ್ಯಾಸ್‌ರ ಪತ್ನಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆ ಬಗ್ಗೆ ನನಗೆ ಏನೂ ತಿಳಿದಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾರ ಬಳಿ ಹೋಗಿದ್ದೇನೆ. ಯಾರ ಸಹಾಯ ಪಡೆದಿದ್ದೇನೆ ಎಂಬುದು ನನ್ನ ಕ್ಷೇತ್ರದ ಜನರಿಗೆ ತಿಳಿದಿದೆ ಎಂದರು.

ಇಲ್ಯಾಸ್‌ರ ಪತ್ನಿಯ ಬಗ್ಗೆ ಅನುಕಂಪವಿದೆ. ಆದರೆ, ಈ ಪ್ರಕರಣದಲ್ಲಿ ರಾಜಕೀಯ ತರುವುದು ಬೇಡ. ದೀಪಕ್‌ ರಾವ್ ಹತ್ಯೆಯ ಸಂದರ್ಭದಲ್ಲೂ ಇಲ್ಯಾಸ್‌ನ ಫೋಟೊಗಳನ್ನು ಇಟ್ಟುಕೊಂಡು ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಯಿತು. ಇದೀಗ ಇಲ್ಯಾಸ್‌ ಹತ್ಯೆಯಾಗಿದ್ದು, ನಿಜವಾದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry