ನರೇಂದ್ರ ಮೋದಿ ಪ್ರತಿಬಿಂಬ ರಾಜ್ಯದಲ್ಲೂ ಮೂಡಲಿ

7

ನರೇಂದ್ರ ಮೋದಿ ಪ್ರತಿಬಿಂಬ ರಾಜ್ಯದಲ್ಲೂ ಮೂಡಲಿ

Published:
Updated:

ಮಂಡ್ಯ: ‘ಪಾರದರ್ಶಕ, ನಿಷ್ಕಳಂಕ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಬಿಂಬ ರಾಜ್ಯದಲ್ಲೂ ಮೂಡಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಹೇಳಿದರು.

ಮದ್ದೂರಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಅವರು ಮಾತನಾಡಿದರು. ‘2014ರಲ್ಲಿ ಇಡೀ ದೇಶ ಒಂದು ದೊಡ್ಡ ಪರಿವರ್ತನೆಯತ್ತ ಹೆಜ್ಜೆ ಹಾಕಿತು. ಆ ಬದಲಾವಣೆಗೆ ನರೇಂದ್ರ ಮೋದಿ ಕಾರಣೀಭೂತರಾದರು. ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಕಾಂಗ್ರೆಸ್‌ ಸರ್ಕಾರದ ಹಗರಣ, ಭ್ರಷ್ಟಾಚಾರದಿಂದ ಮುಕ್ತಿಗಾಗಿ ಜನರೇ ನರೇಂದ್ರ ಮೋದಿ ಅವರನ್ನು ಸೃಷ್ಟಿಸಿದರು. ಮೂರು ವರ್ಷಗಳಿಂದ ದೇಶ ಆರ್ಥಿಕ ಅಪರಾಧಗಳಿಂದ ಮುಕ್ತವಾಗಿದೆ. ವಿಶ್ವ ಸಮುದಾಯದಲ್ಲಿ ಪ್ರಧಾನಮಂತ್ರಿಗೆ ಸಿಕ್ಕಿರುವ ಅಗ್ರಮಾನ್ಯತೆಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು’ ಎಂದು ಹೇಳಿದರು.

‘19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷದ ಅಧ್ಯಕ್ಷ ಅಮಿತ್‌ ಷಾ ಹಾಗೂ ಪ್ರಧಾನಮಂತ್ರಿ ಎಲ್ಲ ರಾಜ್ಯಗಳಲ್ಲೂ ಬಹಳ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೆಲಸಗಳ ಪ್ರತಿಬಿಂಬ ರಾಜ್ಯಕ್ಕೂ ಬರಬೇಕಾದರೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವೂ ಆಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ವಿರುದ್ಧ ಕೃಷ್ಣ ವ್ಯಂಗ್ಯ: ಕಾರ್ಯಕ್ರಮಕ್ಕೂ ಮೊದಲು ಎಸ್‌.ಎಂ.ಕೃಷ್ಣ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸೋಮನಹಳ್ಳಿ ಬಳಿಯ ಕಾಫಿ ಡೇಯಲ್ಲಿ ತಿಂಡಿ ಕುಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಸ್‌.ಎಂ.ಕೃಷ್ಣ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಹುಡುಕಬೇಕಾಗಿದೆ. ಎಲ್ಲಿದೆ ಆಡಳಿತ? ರಾಜ್ಯ ಸರ್ಕಾರ ಏನು ಸಾಧನೆ ಮಾಡಿದೆ ಎಂಬ ಪ್ರಶ್ನೆಗೆ ಮೂರು ತಿಂಗಳಲ್ಲಿ ಜನರು ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ಪುತ್ರಿ ಶಾಂಭವಿ ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೃಷ್ಣ ‘ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತೇನೆ. ನಾನು ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಲು ಇದೂ ಒಂದು ಕಾರಣ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry