4

ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

Published:
Updated:
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು (ಮಾನ್ವಿ): ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜಾತ್ಯತೀತ ಹಾಗೂ ಸಮಾನ ಸಮಾಜ ಕಟ್ಟುವ ಕೆಲಸ ನಡೆಯುತ್ತಿದೆ ಎಂದು ಸಾಹಿತಿ ಎಲ್‌.ಹನುಮಂತಯ್ಯ ಹೇಳಿದರು.

ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪೋತ್ನಾಳದಲ್ಲಿ ಶುಕ್ರವಾರ ಸಮ್ಮೇಳನದ ಜಂಬಣ್ಣ ಅಮರಚಿಂತ ಮಂಟಪ ಹಾಗೂ ಚನ್ನಬಸವಪ್ಪ ಬೆಟ್ಟದೂರ ವೇದಿಕೆಯಲ್ಲಿ ಆಯೋಜಿಸಲಾದ ಎರಡು ದಿನಗಳ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯವು ಸದಾಕಾಲ ಪ್ರಗತಿ ಬಿತ್ತುವ ಕೆಲಸ ಮಾಡುತ್ತಿದ್ದು, ಇದರಿಂದಾ ಸಾಹಿತ್ಯವು ತನ್ನ ಸಾರ್ಥಕತೆ ಕಾಪಾಡಿಕೊಳ್ಳುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಒಳಗೊಂಡು ಅಭಿವೃಧ್ಧಿ ಮಾಡಿದರೆ ಮಾತ್ರ ಅದು ನಿಜವಾದ ಆಭಿವೃದ್ಧಿ . ಸಾಹಿತ್ಯವು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ’  ಎಂದರು.

‘ಸಾಹಿತ್ಯವು ತನ್ನಷ್ಟಕ್ಕೆ ತಾನೆ ಹೊರಬರುವುದಿಲ್ಲ. ಸಾಹಿತ್ಯ ನಿತ್ಯ ಬದುಕಿನ ಕೈಗನ್ನಡಿಯಾಗಿದೆ. ಪ್ರಾಚೀನ ಕಾಲದಿಂದಲೂ ಇದೇ ನಡೆದುಕೊಂಡು ಬರುತ್ತಿದೆ. ಆದರೆ ಕೆಲವರು ಸಾಹಿತಿಗಳ ಮೇಲೆ ಮತ್ತು ಸಾಹಿತ್ಯಾಸಕ್ತರ ಬಗ್ಗೆ ಮಾಧ್ಯಮಗಳ ಮುಖಾಂತರ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಬುದ್ಧಿಜೀವಿಗಳನ್ನು ಹೀಯಾಳಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಮನಸ್ಸುಗಳಿಗೆ ಸಾಹಿತ್ಯದ ಅಭಿರುಚಿ ಗೊತ್ತಿರುವುದಿಲ್ಲ’ ಎಂದು ಹೇಳಿದರು.

ಶರಣರ, ಸಂತರ ನೆಲೆಯಾದ ಕರ್ನಾಟಕದ ಬಗ್ಗೆ ಪರಿಪಕ್ವ ಜ್ಞಾನ ಇಲ್ಲದವರು ಮಾತ್ರ ಏನೆನೋ ಹೇಳುವುದಕ್ಕೆ ಸಾಧ್ಯ. ಜಾತ್ಯತೀತತೆ ಪರಾಕಾಷ್ಠೆ ತಲುಪಿದ ಈ ಭಾಗದಲ್ಲಿ ಜಾತ್ಯತೀತತೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಜಾತಿಯು ಯಾವ ಮನುಷ್ಯನನ್ನು ಬೆಳೆಸುವುದಿಲ್ಲ; ಆದಷ್ಟು ಕುಬ್ಜಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ವ ಧರ್ಮಗಳು ಒಂದಾಗಿರುವ ಭಾರತವು ಒಂದು ವಿಶಿಷ್ಟ ದೇಶ. ಈ ಬಹುತ್ವವನ್ನು ಎಲ್ಲರೂ ಒಪ್ಪಿ ಕೊಳ್ಳಬೇಕು. ಶ್ರೀಮಂತರನ್ನು ಪೂಜಿಸು; ಬಡವರನ್ನು ತಿರಸ್ಕರಿಸು ಎಂದು ಎಲ್ಲಿಯೂ ಹೇಳುವುದಿಲ್ಲ. ಇದು ಭಾರತದ ನಿಜವಾದ ಮೌಲ್ಯ ಎಂದರು.

ಸಾಹಿತಿ ಡಾ.ಎಂ.ಎಸ್‌.ಆಶಾದೇವಿ ಮಾತನಾಡಿ, ಕವಿ ಮತ್ತು ರಾಜ ಕೂಡಿಕೊಂಡು ತೋರಿಸುವ ಮಾರ್ಗವೇ ನಿಜವಾದ ಅಭಿವೃದ್ಧಿ ಮಾರ್ಗ. ಕನ್ನಡದ ಪ್ರಥಮ ಕಾವ್ಯದ ಹೆಸರಿನಲ್ಲಿಯೆ ಅದು ಕಂಡು ಬಂದಿದೆ. ಕಥೆಗಾರ ರಾಜಶೇಖರ ನೀರಮಾನ್ವಿ ಅವರು ತಮ್ಮ ಕಥೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಸಂವೇದನೆಯೊಂದನ್ನು ಪರಿಚಿಯಿಸಿದ್ದಾರೆ ಎಂದು ತಿಳಿಸಿದರು.

ಸಮಾಜದ ಮೇಲೆ ಇಂದು ಮೂಲಭೂತವಾದವು ದಾಳಿ ನಡೆಸುತ್ತಿದೆ. ಇದನ್ನು ಎಲ್ಲರೂ ಗಟ್ಟಿಯಾಗಿ ನಿಂತು ಎದುರಿಸಬೇಕು. ಸಮ್ಮೇಳನಗಳಿಗೆ ಹೆಚ್ಚು ಜನರು ಬರುವುದು ಬರೀ ಕನ್ನಡದ ಮೇಲಿನ ಪ್ರೀತಿಯಿಂದ ಮಾತ್ರವಲ್ಲ; ನಾಡಿನ ಸಮುದಾಯ ಗಟ್ಟಿಯಾಗಿರಲಿ ಎನ್ನುವ ಸದುದ್ದೇಶವೂ ಇರುತ್ತದೆ. ಮನುಷ್ಯತ್ವ ಮರೆತವರು ಮಾತ್ರ ಸಾಹಿತ್ಯದ ದ್ವೇಷಿ ಆಗುವುದಕ್ಕೆ ಸಾಧ್ಯ. ಮನುಷ್ಯತ್ವ ಉಳಿಸಿಕೊಳ್ಳುವ ಜವಾಬ್ದಾರಿಸಾಹಿತ್ಯ ನಿಭಾಯಿಸಬೇಕಾಗುತ್ತದೆ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಸ್ವಾಮಿರಾವ್‌ ಕುಲಕರ್ಣಿ ಮಾತನಾಡಿ, ಹೃದಯವಂತಿಕೆ ಇಲ್ಲದ ಬುದ್ಧಿವಂತಿಕೆಗೆ ಬೆಲೆಯಿಲ್ಲ. ಹೃದಯವಂತಿಕೆಯು ಸಾಹಿತ್ಯದಲ್ಲಿದೆ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷ ಕಥೆಗಾರ ರಾಜಶೇಖರ ಮಾನ್ವಿ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್‌.ಎಸ್‌.ಬೋಸರಾಜು ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು  ಮಾತನಾಡಿದರು. ಶಾಸಕ ಹಂಪಯ್ಯ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌,

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಮ್‌ ಜಿ.ಶಂಕರ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಮುದಿಗೌಡ್ರು ಹಾಗೂ ಸಮ್ಮೇಳನದ ವಿವಿಧ ಸಮಿತಿಯ ಪದಾಧಿಕಾರಿಗಳು ಇದ್ದರು. ಶಿಕ್ಷಕ ರಾಮಲಿಂಗಪ್ಪ ನಿರೂಪಿಸಿದರು. ಮೂಕಪ್ಪ ಕಟ್ಟಿಮನಿ ವಂದಿಸಿದರು.

ಆಸಕ್ತಿಯಿಂದ ಆಲಿಸಿದರು

ಸಮ್ಮೇಳನದಲ್ಲಿ ನಿರೀಕ್ಷೆ ಮೀರಿ ಜನರು ಸೇರಿದ್ದರು. ವೇದಿಕೆಯಲ್ಲಿದ್ದ ಕುರ್ಚಿಗಳೆಲ್ಲ ಭರ್ತಿಯಾಗಿದ್ದವು. ವಿಶಾಲ ಮೈದಾನದಲ್ಲಿ ಜನರು ಹೊರಗಡೆ ನಿಂತುಕೊಂಡು ಭಾಷಣ ಆಲಿಸಿದ್ದು ವಿಶೇಷವಾಗಿತ್ತು. ಉದ್ಘಾಟಕರು ಭಾಷಣ ಆರಂಭಿಸುವಾಗಲೇ ಊಟದ ಸಮಯವಾಗಿತ್ತು. ಆದರೆ, ಜನರು ಆಸಕ್ತಿಯಿಂದ ಭಾಷಣ ಆಲಿಸಿದರು.

‘ಬೆಂಗಳೂರಿನಲ್ಲಿ ಆಯೋಜಿಸುವ ಸಾಹಿತ್ಯ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ಮಾಲ್‌ಗಳಲ್ಲಿ ಮಾತ್ರ ಹೆಚ್ಚು ಜನರು ಕಾಣಲು ಸಿಗುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಆಸಕ್ತಿ ವಹಿಸಿ ಜನರು ಸೇರಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಕನ್ನಡ ಉಳಿವು ಜನಸಾಮಾನ್ಯರಿಂದಲೆ ಸಾಧ್ಯ ಎಂಬುದು ಸತ್ಯ’ ಎಂದು ಸಾಹಿತಿ ಎಲ್‌. ಹನುಮಂತಯ್ಯ ಮೆಚ್ಚುಗೆ ಹೇಳಿದರು.

ತದನಂತರ ಸಾಹಿತಿ ಡಾ.ಆಶಾದೇವಿ ಅವರು ತರಾತುರಿ ಭಾಷಣ ಮಾಡಿ ಮುಗಿಸುವ ಯೋಜನೆಯಲ್ಲಿದ್ದರು. ಆದರೆ ಜನರು ಯಾವುದೇ ಬೇಸರವಿಲ್ಲದೆ ಆಲಿಸಿದ್ದರಿಂದ ನಿರಾಳವಾಗಿ ಮಾತನಾಡಿದರು. ಉದ್ಘಾಟನೆ ಸಮಾರಂಭದ ಕೊನೆಯಲ್ಲಿ ಸಮ್ಮೇಳನದ ಅಧ್ಯಕ್ಷ ಕಥೆಗಾರ ರಾಜಶೇಖರ ನೀರಮಾನ್ವಿ ಅವರು ಮಾತನಾಡಿದರು.

* * 

ಹೆಣ್ಣನ್ನು ಬರೀ ದೇಹವಾಗಿ ಮಾತ್ರ ನೋಡುತ್ತಿದ್ದಾರೆ. ಅದರಾಚೆಗೂ ಹೆಣ್ಣು ಮಕ್ಕಳನ್ನು ನೋಡುವ ಮನೋ ವಿನ್ಯಾಸವನ್ನು ಬೆಳೆಸಿಕೊಳ್ಳಬೇಕು.

ಡಾ.ಎಂ.ಎಸ್‌.ಆಶಾದೇವಿ ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry