770 ಖ್ಯಾತನಾಮರ ಸೇರಿಸಲು ನಿರ್ಣಯ

7

770 ಖ್ಯಾತನಾಮರ ಸೇರಿಸಲು ನಿರ್ಣಯ

Published:
Updated:
770 ಖ್ಯಾತನಾಮರ ಸೇರಿಸಲು ನಿರ್ಣಯ

ಬೀದರ್‌: ಶರಣರ ವಚನಗಳಲ್ಲಿ ಪ್ರಸ್ತಾಪವಾಗಿರುವ 770 ಅಮರಗಣಂಗಳ ಸಂಕೇತವಾಗಿ ಮಠಾಧೀಶರು, ಶರಣರು, ಚಿಂತಕರು, ಬುದ್ಧಿಜೀವಿಗಳು, ಸಾಹಿತಿಗಳನ್ನು ಒಳಗೊಂಡು 770 ಖ್ಯಾತನಾಮರನ್ನು ಬಸವ ಉತ್ಸವದಲ್ಲಿ ಸೇರಿಸಲು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅಧ್ಯಕ್ಷತೆಯಲ್ಲಿ ನಡೆದ ಬಸವ ಉತ್ಸವ-2018 ಪೂರ್ವಭಾವಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

‘ಬಸವಾದಿ ಶರಣರ ವಿಚಾರಗಳತ್ತ ವಿಶ್ವದ ಗಮನ ಸೆಳೆಯಬೇಕು ಎನ್ನುವುದು ಈ ನಿರ್ಣಯದ ಹಿಂದಿನ ಆಶಯವಾಗಿದೆ. ಶರಣರು ಕೊಟ್ಟ ಪಥ ಈಗಿನ ಸಮಸ್ಯೆಗಳಿಗೆ ಹೇಗೆ ಉತ್ತರವಾಗುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಲಿದೆ. ಬಸವ ಉತ್ಸವದಲ್ಲಿ ವಿವಿಧ ಕ್ಷೇತ್ರಗಳ 770 ಖ್ಯಾತನಾಮರನ್ನು ಸೇರುವುದು ಅನುಭವ ಮಂಟಪದ ಮರುರೂಪಕ ಎನಿಸಲಿದೆ’ ಎಂದು ತಿಳಿಸಿದರು.

‘ನಿಜವಾದ ಬಸವಾದಿ ಶರಣರ ಅನುಯಾಯಿ, ಅನುಭಾವಿಗಳನ್ನು ಗುರುತಿಸುವುದು, ಎಲ್ಲರೂ ಒಂದೇ ಕಡೆಗೆ ಸೇರುವಂತೆ ಮಾಡುವುದು ಕಷ್ಟದ ಕೆಲಸ. ಉತ್ಸವದಲ್ಲಿ ವಿವಾದಾತ್ಮಕ ವಿಷಯಗಳಿಗೆ ಅವಕಾಶ ನೀಡುವುದಿಲ್ಲ. ಶರಣರ ತತ್ವಗಳು, ನಾಡಿನ ಜ್ವಲಂತ ಸಮಸ್ಯೆಗಳ ಬಗೆಗೆ ಚಿಂತನ-ಮಂಥನ ನಡೆಯಲಿದೆ’ ಎಂದು ಹೇಳಿದರು.

‘ಬಸವತತ್ವ ನಿಷ್ಠರು ಎಂದು ಹೇಳಿಕೊಳ್ಳುವವರನ್ನು ಬಿಟ್ಟು ನಿಜವಾದ ಬಸವತತ್ವ ನಿಷ್ಠರನ್ನು ಗುರುತಿಸುವ ಕೆಲಸವಾಗಬೇಕು’ ಎಂದು ಭಾರತೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ವಾಲಿ ತಿಳಿಸಿದರು.

‘ಶರಣರಲ್ಲಿ ಪ್ರಜ್ಞಾಪೂರ್ವಕವಾಗಿ ಪರಿಸರದ ಪ್ರಜ್ಞೆ ಇತ್ತು. ಉತ್ಸವದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ಇರಬೇಕು’ ಎಂದು ನೃತ್ಯ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಎಸ್.ವಿ.ಕಲ್ಮಠ ಸಲಹೆ ನೀಡಿದರು.

‘ಸಮಿತಿಯೊಂದನ್ನು ರಚಿಸಿ ಜವಾಬ್ದಾರಿ ವಹಿಸಿದರೆ 770 ಪ್ರಮುಖರನ್ನು ಸೇರಿಸಲು ಅನುಕೂಲಗುತ್ತದೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಅಕ್ಕ ಗಂಗಾಂಬಿಕಾ ಹೇಳಿದರು.

‘ಶರಣರ, ಚಿಂತಕರ, ಸಾಹಿತಿಗಳ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಲು ಎಲ್ಲ ಶರಣ ಬಂಧುಗಳು ಕೈಜೋಡಿಸಬೇಕು’ ಎಂದು ಬಿಜೆಪಿ ಮುಖಂಡ ಬಾಬು ವಾಲಿ ಕೋರಿದರು.

‘ಬಸವಾದಿ ಶರಣರ ಆಶಯದ ಕಾಯಕ, ದಾಸೋಹಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚೆಗೆ ಆಯ್ಕೆ ಮಾಡಬೇಕು, ವಿವಾದಾತ್ಮಕ ವಿಷಯಗಳಿಗೆ ಅವಕಾಶ ಕೊಡಬಾರದು’ ಎಂದು ಮುಚಳಂಬದ ಶ್ರೀಗಳು ತಿಳಿಸಿದರು.

ಶಿವಾನಂದ ಸ್ವಾಮೀಜಿ ಹುಲಸೂರ, ಪ್ರಣವಾನಂದ ಸ್ವಾಮೀಜಿ ಮುಚಳಂಬ, ಮಹೆಕರದ ರಾಜೇಶ್ವರ ಶಿವಾಚಾರ್ಯರು , ಶಿವಕುಮಾರ ಸ್ವಾಮೀಜಿ ಬೇಲೂರ, ಡಾ.ರಾಜಶೇಖರ ಶಿವಾಚಾರ್ಯ, ಪಂಡಿತರಾಧ್ಯ ಶಿವಾಚಾರ್ಯರು ಹಳ್ಳಿಖೇಡ, ಹಾವಗಿಲಿಂಗ ಶಿವಾಚಾರ್ಯ ಹಲಬರ್ಗಾ, ಜಯಶಾಂತಲಿಂಗ ,ಪಂಚಾಕ್ಷರ ಸ್ವಾಮೀಜಿ ಬೇಲೂರ, ಚೆನ್ನಮಲ್ಲ ಸ್ವಾಮೀಜಿ ಹುಡುಗಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವಾಂಜಲಿ ತಾಯಿ, ಸಮಾಜ ಸೇವಕಿ ಶಕುಂತಲಾ ವಾಲಿ, ಸಾಹಿತಿಗಳಾದ ಜಗನ್ನಾಥ ಹೆಬ್ಬಾಳೆ, ಸೋಮನಾಥ ಯಾಳವಾರ, ಸಮಾಜ ಸೇವಕ ಅಬ್ದುಲ್ ಖದೀರ್, ಬಿಕೆಡಿಬಿಯ ಶಿವರಾಜ ನರಶೆಟ್ಟಿ, ಗುರುನಾಥ ಗಡ್ಡೆ, ಜಾನಪದ ಅಕಾಡೆಮಿಯ ರಾಜ್ಯ ಸಮಿತಿ ಸದಸ್ಯರಾದ ವಿಜಯಕುಮಾರ ಸೋನಾರೆ, ಮುಖಂಡರಾದ ವಿರೂಪಾಕ್ಷ ಗಾದಗಿ, ಫರ್ನಾಂಡಿಸ್ ಹಿಪ್ಪಳಗಾಂವ್ ಇದ್ದರು. ಬಸವಕಲ್ಯಾಣ ಸಹಾಯಕ ಆಯುಕ್ತ ಶರಣಬಸಪ್ಪ ಕೋಟಪ್ಪಗೋಳ ಸ್ವಾಗತಿಸಿದರು.

* * 

ಬಸವ ಉತ್ಸವದಲ್ಲಿ ಶರಣರ ತತ್ವಗಳ ಮಂಥನಕ್ಕೆ ಪ್ರಾಧಾನ್ಯ ನೀಡಲಾಗುವುದು. ಉತ್ಸವದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ.

ಎಚ್‌.ಆರ್.ಮಹಾದೇವ

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry