‘ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ’

7

‘ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ’

Published:
Updated:

ಹಿರೇಕೆರೂರ: ಸರ್ಕಾರದ ಬೆಂಬಲ ಬೆಲೆಯ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಸತತ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ವರ್ಷ ಬೆಳೆ ಇಳುವರಿ ಕಡಿಮೆಯಾಗಿ ನಷ್ಟದಲ್ಲಿದ್ದರೂ ಸರ್ಕಾರಗಳು ರೈತ ವಿರೋಧ ನೀತಿ ಅನುಸರಿಸುತ್ತಿವೆ. ಕೇಂದ್ರ ಸರ್ಕಾರದ ನೀತಿಯು ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಗೋವಿನ ಜೋಳ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರ ₹ 1450 ಬೆಲೆ ನಿಗದಿ ಮಾಡಿ ಖರೀದಿ ಆರಂಭಿಸುತ್ತಿಲ್ಲ. ಕೇವಲ ಬೆಂಬಲ ಬೆಲೆ ಘೋಷಣೆ ಮಾಡಿದೆಯಷ್ಟೇ ಎಂದು ದೂರಿದರು.

ಖರೀದಿ ಕೇಂದ್ರ ತೆರೆಯಬೇಕೆಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಹತ್ತು ದಿನದೊಳಗೆ ಖರೀದಿ ಕೇಂದ್ರ ತೆರೆಯಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ ಒಂದು ತಿಂಗಳಾದರೂ ಖರೀದಿ ಕೇಂದ್ರ ಆರಂಭಿಸಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರಗಳು ಖರೀದಿ ಕೇಂದ್ರವನ್ನು ತೆರೆದು ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಗೆ ಬಿಡುಗಡೆಯಾದ ಬೆಳೆ ವಿಮೆ ಹಣವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ಗೋವಿನಜೋಳ, ಭತ್ತ, ಮೆಣಸಿನ ಕಾಯಿ ಬೆಳೆಗಳ ವಿಮೆಯನ್ನು ರೈತರಿಗೆ ಸರಿಯಾಗಿ ವಿತರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪಳವರ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಗೋವಿನ ಜೋಳ, ತೊಗರಿ, ಶೇಂಗಾ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಇರುವುದರಿಂದ ರೈತರು ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಗೆ ಬೆಳೆಗಳನ್ನು ಮಾರಿ ಜೀವನ ನಡೆಸಬೇಕಾಗಿದೆ. ದುಡಿಯುವ ವರ್ಗವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ದೇಶಕ್ಕೆ ಅನ್ನ ಕೊಟ್ಟ ರೈತನ ಬೆಳೆಗಳಿಗೆ ಬೆಂಬಲೆ ನೀಡದೆ ಅನ್ಯಾಯ ಎಸಗುತ್ತಿದೆ ಎಂದು ದೂರಿದರು.

ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿ ತಲುಪಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಸ್.ವಿ.ಚಪ್ಪರದಹಳ್ಳಿ, ಮಹ್ಮದ್‌ಗೌಸ್ ಪಾಟೀಲ, ಕರಬಸಪ್ಪ ಅಗಸಿಬಾಗಿಲು, ಕಿರಣ ಗಡಿಗೋಳ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಶಂಕರಗೌಡ ಶಿರಗಂಬಿ, ಶಾಂತನಗೌಡ ಪಾಟೀಲ, ಲೋಕಪ್ಪ ಹುಲ್ಲತ್ತಿ, ಮಲ್ಲನಗೌಡ ಮಾಳಗಿ, ಮರಿಗೌಡ ಪಾಟೀಲ, ನಾಗ

ರಾಜ ನೀರಲಗಿ, ಬಸಣ್ಣ ಕಡೂರ, ಶಂಕ್ರಪ್ಪ ಪುಟ್ಟಳ್ಳೇರ, ರಾಜು ಮುತ್ತಗಿ, ರಂಗಪ್ಪ ಹಳ್ಳೂರ, ಬಸವರಾಜಪ್ಪ ಹಾಲಿಕಟ್ಟಿ, ಮಂಜು ಕೆಂಚಣ್ಣನವರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry