ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೇ ಮೊದಲ ಪಾಠಶಾಲೆ

Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

ಅಪ್ಪ, ಅಮ್ಮನಿಗೆ ಕೂತಲ್ಲಿ ಕೂರಲು ಬಿಡದೆ, ನಿಂತಲ್ಲಿ ನಿಲ್ಲಲು ಬಿಡದೆ, ಹಟ ಮಾಡಿ, ಕಾಟ ಕೊಟ್ಟು, ಸೈಕಲ್ ತೆಗೆಸಿಕೊಂಡಿದ್ದ ಅಭಿ. ‘ಇನ್ನೊಂದೆರಡು ವರ್ಷ ಕಳೀಲಿ ಕಣೋ. ಇನ್ನೂ ಸಣ್ಣವನು ನೀನು. ಎಲ್ಲಾದ್ರೂ ಬಿದ್ದು ಕೈಕಾಲು ಮುರ‍್ಕೊಂಡ್ರೆ ಯಾರಿಗೆ ಹೇಳೋದು?’ ಎಂದು ಎಂಟು ವರ್ಷದ ಮಗನಿಗೆ ಅಮ್ಮ ಹೇಳುವಷ್ಟು ಬುದ್ಧಿವಾದ ಹೇಳಿ ಸೋತಿದ್ದಳು. ನಿದ್ದೆಯಲ್ಲೂ ಅಭಿ ಅದನ್ನೇ ಕನವರಿಸುತ್ತಿದ್ದ, ಸೈಕಲ್ಲು... ಸೈಕಲ್ಲು...

‘ಹೋಗ್ಲಿ ಬಿಡೇ, ತರಿಸಿ ಕೊಟ್ಬಿಡೋಣ. ಪಾಪ, ಸಣ್ಣದು...’ ಅಪ್ಪ ಸಹಾನುಭೂತಿಯ ಮಾತಾಡಿದ್ದರು.

‘ಹೂಂ ಕಣ್ರೀ. ಸಣ್ಣವನು ಅಂತ್ಲೇ ಬೇಡ ಅಂತಿರೋದು. ದೊಡ್ಡೋನಾಗಿದ್ರೆ ನಾನ್ಯಾಕೆ ಬೇಡ ಅಂತಿದ್ದೆ?’ ಪ್ರತ್ಯುತ್ತರ ಕೊಟ್ಟಿದ್ದಳು ಅಮ್ಮ.

‘ಪ್ಲೀಸ್ ಅಮ್ಮಾ... ಪ್ಲೀಸ್ ಅಮ್ಮಾ...’ ಅಮ್ಮನ ಸೆರಗು ಹಿಡಿದುಕೊಂಡು ಹಿಂದೆ ಮುಂದೆ ತಿರುಗುತ್ತಾ ಕೊನೆಗೂ ಅವಳ ಮನಸ್ಸನ್ನು ಒಲಿಸಿಕೊಂಡುಬಿಟ್ಟಿದ್ದ ಅಭಿ. ಕೆಂಪು ಬಣ್ಣದ, ಮಿರುಮಿರುಗುವ, ಎರಡು ಚಕ್ರದ ಸೈಕಲ್ ಮನೆಗೆ ಬಂದಿತ್ತು. ಎರಡು ದಿನ ಅಪ್ಪ ಸೈಕಲ್ ಹೊಡೆಯಲು ಕಲಿಸಿ ಕೊಟ್ಟಿದ್ದರು. ಸೈಕಲ್ ಇರುವ ಗೆಳೆಯರನ್ನು ಓಲೈಸಿ, ಒಂದು ರೌಂಡು, ಎರಡು ರೌಂಡು ಎಂದು ಗಿಂಜಿ, ಆಗ ಈಗ ಚಾಕೊಲೇಟ್ ಕೊಡಿಸಿ, ಅಭಿ ಸೈಕಲ್ ಹೊಡೆಯೋ ವಿದ್ಯೆಯನ್ನು ಮೊದಲೇ ಅಷ್ಟಿಷ್ಟು ಕಲಿತುಕೊಂಡಿದ್ದ.

‘ಏನೋಂತಿದ್ದೆ, ನಿನ್ನ ಮಗ ಬುದ್ಧಿವಂತ’ ಶಭಾಷ್‌ಗಿರಿ ಕೊಟ್ಟಿದ್ದರು ಅಪ್ಪ. ಆದರೂ ಅಮ್ಮನಿಗೆ ಹೆದರಿಕೆ. ಅವಳು ಯಾವಾಗಲೂ ಹಾಗೇ. ಕೇಳಿ ಕೇಳಿ ಅಜೀರ್ಣವಾಗುವಷ್ಟು ದಿನಾ ಉಪದೇಶ.
‘ಸೈಕಲ್ ಸಿಕ್ತು ಅಂತ ಮೂರು ಹೊತ್ತೂ ಅದೇ ಕೆಲಸ ಮಾಡ್ತಿರ‍್ಬಾರ‍್ದು. ಏನಿದ್ರೂ ಮನೆ ಹತ್ರ ದಿನಾ ಒಂದರ್ಧ ಗಂಟೆ.. ’

ಅಮ್ಮ ಹೇಳುವುದನ್ನು ಯಾವ ಮಕ್ಕಳು ಪೂರ್ತಿ ಕೇಳಿಸಿಕೊಳ್ಳುತ್ತಾರೆ? ಸ್ಕೂಲಿನಿಂದ ಬಂದ ಅಂದರೆ ಅಭಿಯ ಕೇರಾಫ್ ಅಡ್ರೆಸ್ – ರಸ್ತೆ!

‘ಹೀಗೆ ಸುತ್ತುತ್ತಾ ಇದ್ರೆ ಒಂದಿನ ತಲೆ ತಿರುಗಿ ರಸ್ತೇಲಿ ಬೀಳ್ತಿ...’ ಅಂತಿರ್ತಿದ್ದಳು ಅಮ್ಮ. ಹೊಸ ಸೈಕಲ್. ಉತ್ಸಾಹ ಅಷ್ಟು ಬೇಗ ತಗ್ಗುತ್ತದೆಯೇ?

***

ರಾತ್ರಿ ಏಳೂವರೆಯಾದರೂ ಬೀದಿಯಲ್ಲಿರುತ್ತಿದ್ದ ಅಭಿ ಅವತ್ತು ಆರೂವರೆಗೇ ಮನೆಗೆ ಬಂದ. ಯಾಕೋ ಮಗ ಯಾವತ್ತಿನ ಹಾಗಿಲ್ಲ ಅನಿಸಿತು ಅಮ್ಮನಿಗೆ. ಕಳ್ಳಬೆಕ್ಕಿನ ಹಾಗೆ ಮಿಣ್ಣಗಿದ್ದಾನೆ.
‘ಏನಾಯ್ತೋ?’ ಕೇಳಿದಳು ಅಮ್ಮ.
‘ಏನಿಲ್ಲಪ್ಪಾ.., ಏನಿಲ್ಲಪ್ಪಾ..’
‘ಸತ್ಯ ಹೇಳು, ಏನಾಯ್ತು? ನಿನ್ನ ಮುಖ ನೋಡಿದ್ರೆ ಗೊತ್ತಾಗುತ್ತೆ ನಂಗೆ...’
ಅಭಿ ನಿಧಾನಕ್ಕೆ ಬಾಯ್ಬಿಟ್ಟ. ಅವನ ತಪ್ಪು ಏನೂ ಇಲ್ಲ. ಅವನು ಸೈಕಲ್ ಹೊಡೆಯುತ್ತಿದ್ದಾಗ ಹಿಂದಿನ ಬೀದಿಯ ಅಜ್ಜಿ ಅಡ್ಡ ಬಂದು, ಚೂರು ಹ್ಯಾಂಡಲ್ ತಾಗಿದ್ದು, ಅಷ್ಟೇ. ಅಜ್ಜಿ ಬಿದ್ದುಬಿಟ್ಟರು. ಇವನು ಮಿಂಚಿನ ವೇಗದಲ್ಲಿ ಮನೆಗೆ ಬಂದುಬಿಟ್ಟಿದ್ದಾನೆ.

‘ಅದಕ್ಕೇ ಹೇಳಿದ್ದು, ಮೈಮೇಲೆ ಎಚ್ಚರ ಇರ‍್ಬೇಕು ಅಂತ. ಸೈಕಲ್ ಮೇಲೆ ಕೂತ್ರೆ ನಿಂಗೆ ಕಣ್ಣು ನೆತ್ತಿಗೆ ಹೋಗುತ್ತೆ...’ ಬೈದಳು ಅಮ್ಮ. ಅಭಿಗೆ ಒಂದೇ ಧೈರ್ಯ. ಅವನು ಅಜ್ಜಿಗೆ ಸೈಕಲ್ ತಾಗಿಸಿ, ಅಜ್ಜಿ ಬಿದ್ದಿದ್ದನ್ನು ಯಾರೂ ನೋಡಿಲ್ಲ. ಅದನ್ನೇ ಅಮ್ಮನಿಗೆ ಹೇಳಿದ. ಗುಢುಮ್ಮನೆ ಬೆನ್ನ ಮೇಲೆ ಒಂದು ಗುದ್ದು ಬಿತ್ತು.

‘ಯಾರೂ ನೋಡ್ಲಿಲ್ಲ ಅಂದ್ರೆ ನಿನ್ನ ತಪ್ಪು ತಪ್ಪಲ್ಲ ಅಂತಾನಾ? ದೊಡ್ಡ ಮನುಷ್ಯ, ಒಳ್ಳೇ ಬುದ್ಧಿ ಕಲೀತಿದ್ದಿ...’

***

ಅಭಿಯನ್ನು ಹಿಂದಿಟ್ಟುಕೊಂಡು ಅಮ್ಮ ಅಜ್ಜಿಯ ಮನೆಗೆ ಹೋದಳು. ಪಾಪ, ಮನೆಯಲ್ಲಿ ಮತ್ತ್ಯಾರಿಲ್ಲ. ಅಜ್ಜಿ ಒಬ್ಬರೇ. ನರಳುತ್ತಾ ಕೂತಿದ್ದಾರೆ ಅಜ್ಜಿ.

‘ತುಂಬಾ ಪೆಟ್ಟಾಯ್ತಾ?’ ಅಮ್ಮ ಕೇಳಿದ್ದೇ ತಡ, ಅಜ್ಜಿಗೆ ಕಣ್ಣಲ್ಲಿ ನೀರು ಬಂತು.

‘ಯಾರಿಗೆ ಗೊತ್ತಮ್ಮಾ? ಬೆಳಿಗ್ಗೆ ಡಾಕ್ಟರ ಹತ್ರ ಹೋದ್ಮೇಲೆ ಗೊತ್ತಾಗುತ್ತೆ. ಯಾರೋ ಪೋಕರಿ ಹುಡುಗ. ಗುದ್ದಿ ಬೀಳಿಸಿಬಿಟ್ಟ ನೋಡು...’

‘ಇಲ್ಲೇ ಇದಾನೆ ನೋಡಿ. ಎರಡು ಬಿಗೀರಿ...’

ಅಜ್ಜಿ ದೊಡ್ಡಕ್ಕೆ ಕಣ್ಣು ಬಿಟ್ಟು ಅಭಿಯನ್ನು ನೋಡಿದರು. ಕಣ್ಣು ಸಮಾ ಕಾಣಲ್ಲ ನಂಗೆ. ನಂದೇ ತಪ್ಪಿರಬಹುದು ಅಂದರು. ಅಭಿಗೆ ಅಳು ಬಂತು.

***

ಅಭಿಯ ಅಪ್ಪ ತಮ್ಮ ಕಾರಲ್ಲಿ ಅಜ್ಜಿಯನ್ನು ಡಾಕ್ಟರ ಹತ್ತಿರ ಕರೆದುಕೊಂಡು ಹೋದರು. ಪರೀಕ್ಷೆ ಗಿರೀಕ್ಷೆ ನಡೀತು. ಅಜ್ಜಿಯ ಎಡಗೈ ಮೂಳೆ ಸಣ್ಣಗೆ ಫ್ರ್ಯಾಕ್ಚರ್ ಆಗಿತ್ತು. ವಯಸ್ಸಾದೋರಲ್ವಾ? ಮೂಳೆ ಲಡ್ಡಾಗಿರುತ್ತಂತೆ. ಪಟ್ಟಿ ಕಟ್ಟಿಸಿ ಅಜ್ಜೀನ ಮನೆಗೆ ಕರೆದುಕೊಂಡು ಬಂದರು ಅಪ್ಪ. ಅವತ್ತಿಂದ ಅಜ್ಜಿಯ ತಿಂಡಿ, ಊಟ ಇವರ ಮನೆಯಿಂದ ಸಪ್ಲೈ ಆಗೋಕೆ ಶುರುವಾಯ್ತು. ಕ್ಯಾರಿಯರ್ ಹಿಡ್ಕೊಂಡು ಅಭಿ ತಾನೇ ಹೋಗಿ ಅಜ್ಜಿಗೆ ಕೊಟ್ಟು ಬರ‍್ತಿದ್ದ. ಎರಡು ತಿಂಗಳು ಕಳೆದು ಪ್ಲಾಸ್ಟರ್ ಬಿಚ್ಚುವಷ್ಟರಲ್ಲಿ ಅಜ್ಜಿ ಮತ್ತು ಅಭಿ ಅದೆಷ್ಟು ಫ್ರೆಂಡ್ಸಾಗಿಬಿಟ್ಟಿದ್ರು ಅಂದ್ರೆ, ‘ದೇವ್ರು ನಂಗೆ ಮೊಮ್ಮಗನ್ನ ಕೊಟ್ಟ’ ಅಂತಿದ್ರು ಅಜ್ಜಿ.

‘ಅಜ್ಜೀ, ಏನು ಹೆಲ್ಪ್ ಬೇಕಾದ್ರೂ ಕೇಳಿ. ನಾನಿದೀನಿ...’ ಅಂತಿದ್ದ ಅಭಿ.

‘ಮೂರು ಹೊತ್ತೂ ಅಲ್ಲೇ ತುಕ್ತಿರ‍್ತೀಯಲ್ಲೋ...’ ಸುಳ್ಳೇ ಬೈಯುತ್ತಿದ್ದಳು ಅಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT