ತಾಂತ್ರಿಕ ಸಹಾಯಕನಿಗೆ ಸಿಇಒ ಕಪಾಳಮೋಕ್ಷ

7
ಅಧಿಕಾರ ದುರ್ಬಳಕೆ: ಸಿಟ್ಟಿಗೆದ್ದ ಪ್ರಶಾಂತ್‌ ಕುಮಾರ್‌ ಮಿಶ್ರ

ತಾಂತ್ರಿಕ ಸಹಾಯಕನಿಗೆ ಸಿಇಒ ಕಪಾಳಮೋಕ್ಷ

Published:
Updated:
ತಾಂತ್ರಿಕ ಸಹಾಯಕನಿಗೆ ಸಿಇಒ ಕಪಾಳಮೋಕ್ಷ

ಸೋಮವಾರಪೇಟೆ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಶನಿವಾರ ದಿಢೀರ್‌ ಭೇಟಿ ನೀಡಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರ ಅವರು ನೌಕರನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಾದಾಪುರ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಹಾಯಕ ರಂಜಿತ್‌, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಸಹಿ ಪಡೆಯದೇ ಹಣ ಪಾವತಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪರಿಶೀಲನೆಗಾಗಿ ಮಿಶ್ರ ಕಚೇರಿಗೆ ಭೇಟಿ ನೀಡಿದ್ದರು.

ಆಗ ರಂಜಿತ್‌ ಅವರು ಮಿಶ್ರ ಎದುರೇ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಸಿಇಒ ಬಂದಿದ್ದಾರೆ. ಕೂಡಲೇ ಕಚೇರಿಗೆ ಬನ್ನಿ ಎಂದು ತಿಳಿಸಿದ್ದಾರೆ. ಕಚೇರಿಗೆ ಹಿರಿಯ ಅಧಿಕಾರಿ ಬಂದಿದ್ದರೂ ನಿಯಮ ಪಾಲಿಸಿಲ್ಲ ಎಂದು ಮಿಶ್ರ ಮೊದಲಿಗೆ ಸಿಟ್ಟಿಗೆದ್ದಿದ್ದರು ಎನ್ನಲಾಗಿದೆ.

ಪರಿಶೀಲನೆಯ ವೇಳೆ ಇಒಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನೀಡಿರುವ ‘ಡಿಜಿಟಲ್‌ ಕೀ’ ಅನ್ನು ದುರುಪಯೋಗ ಮಾಡಿಕೊಂಡು ಕಾಮಗಾರಿಗಳಿಗೆ ನಕಲಿ ಥಂಬ್ ನೀಡಿ ಹಣವನ್ನು ನೀಡಿರುವುದು ಬೆಳಕಿಗೆ ಬಂದಿದೆ. ರಂಜಿತ್‌ ಅವರನ್ನು ವಿಚಾರಿಸಿದಾಗ, ‘ಇಒ ಅವರು ಗ್ರಾಮ ಪಂಚಾಯಿತಿಗಳಿಗೆ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದರು. ಖಾತ್ರಿ ಕಾಮಗಾರಿಗೆ ಸಂಬಂಧಪಟ್ಟಂತೆ ಹೆಬ್ಬೆಟ್ಟಿನ ಗುರುತನ್ನು ತನಗೆ ಹೊಂದಾಣಿಕೆ ಆಗುವಂತೆ ಮಾಡಿಕೊಂಡಿರುವೆ’ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆಗ ಮತ್ತಷ್ಟು ಕುಪಿತರಾದ ಮಿಶ್ರ ಕಪಾಳಕ್ಕೆ ಲಘುವಾಗಿ ಹೊಡೆದಿದ್ದಾರೆ ಎನ್ನಲಾಗಿದೆ. 

ಕರ್ತವ್ಯ ದುರುಪಯೋಗ ಆರೋಪದ ಮೇಲೆ ರಂಜಿತ್‌ ವಿರುದ್ಧ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಾದ ಬಳಿಕ ನೌಕರ ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ರಂಜಿತ್‌ ಸಹ ಸಿಇಒ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry