ಕರಾಟೆಗೆ ಜೀವನ ಮೀಸಲಿಟ್ಟ ಪಾಷಾ

7

ಕರಾಟೆಗೆ ಜೀವನ ಮೀಸಲಿಟ್ಟ ಪಾಷಾ

Published:
Updated:
ಕರಾಟೆಗೆ ಜೀವನ ಮೀಸಲಿಟ್ಟ ಪಾಷಾ

ಸುರಪುರ: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ಹೊತ್ತು ಹಾ, ಹೋ, ಹೊಡೆ, ಕಿಕ್... ಶಬ್ದಗಳು ಕೇಳುತ್ತವೆ. ಏನಪ್ಪಾ ಇದು ಜಗಳ ನಡೆಯುತ್ತಿದೆಯೇ ಎಂದು ಒಳಹೋದರೆ ಅಲ್ಲಿ ಕರಾಟೆ ತರಬೇತಿ ಅನಾವರಣಗೊಳ್ಳುತ್ತದೆ.

ಮಕ್ಕಳು ಪ್ರದರ್ಶಿಸುವ ಪಂಚ್, ಕಿಕ್, ಬ್ಲಾಕ್, ಫೈಟ್ ಸಾಹಸ ದೃಶ್ಯಗಳು ಮನ ಸೆಳೆಯುತ್ತವೆ. ನೀಳಕಾಯದ ಸಧೃಢ ವ್ಯಕ್ತಿಯೊಬ್ಬರು ತನ್ಮಯತೆಯಿಂದ ತರಬೇತಿ ನೀಡುತ್ತಿರು ವುದು ಕಂಡುಬರುತ್ತದೆ. ಅವರೇ ಕರಾಟೆ ಮಾಸ್ಟರ್ ಪಾಷಾ ಹವಾಲ್ದಾರ್.

ನಗರದ ಮೋಜಂಪುರ ನಿವಾಸಿ ಪಾಶಾ ಬಾಲ್ಯದಲ್ಲಿ ಕೃಶರಾಗಿದ್ದರು. ಉತ್ತಮ ಆರೋಗ್ಯಕ್ಕೆ ಕರಾಟೆ ಕಲಿಯುವಂತೆ ಮನೆಯವರು ಸಲಹೆ ನೀಡಿದರು. ಸಿನಿಮಾದಲ್ಲಿನ ಕರಾಟೆಗೂ ಪಾಷಾ ಮಾರು ಹೋಗಿದ್ದರು. ಆರೋಗ್ಯಕ್ಕಾಗಿ ಕರಾಟೆ ತರಬೇತಿಗೆ ಕಲಿತ ಅವರು ಅದನ್ನೆ ಈಗ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಬಸವರಾಜ ಮತ್ತು ಕಲ್ಯಾಣಿ ಅವರಲ್ಲಿ ತರಬೇತಿ ಆರಂಭಿಸಿದ ಪಾಷಾ ಅವರು ನಂತರದ ದಿನಗಳಲ್ಲಿ ಖ್ಯಾತ ಕರಾಟೆ ಪಟು ಗಳಾದ ಪರಶುರಾಮ ನಾಯಕ ಅವರಿಂದ ಬುಡೋಕಾನ್, ಮನೋಹರ ಬೀರನೂರ ಅವರಿಂದ ಜನ್‌ಶಿಟೊರಿಯೋ, ಮಹ್ಮದ್‌ ಹಮೀದ್‌ ಅಲಿ ಅವರಿಂದ ಟೇಕ್ವಾಂಡೊ ಮಾರ್ಷಲ್ ಆರ್ಟ್‌ ಕರಗತ ಮಾಡಿಕೊಂಡರು.

ಬುಡೋಕಾನ್‌ನಲ್ಲಿ ಬ್ರೌನ್ ಬೆಲ್ಟ್, ಗುಜೋರಿಯೋ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿರುವ ಪಾಷಾ ಈಗ ಜಿಲ್ಲೆಯ ನಂ.1 ಮತ್ತು ರಾಜ್ಯದ ಶ್ರೇಷ್ಠ 50 ಕರಾಟೆಪಟುಗಳಲ್ಲಿ ಒಬ್ಬರು. ತಮ್ಮ ಜೀವನವನ್ನು ಕರಾಟೆಗೆ ಮೀಸಲಿಟ್ಟಿರುವಅವರು ಜಿಲ್ಲೆಯಾದ್ಯಂತ ತರಬೇತಿ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕರಾಟೆ ಅಭಿವೃದ್ಧಿಗೆ ಜಿಲ್ಲಾಮಟ್ಟದ ಟೀಕ್ವಾಂಡೋ ಸಂಸ್ಥೆ ಹುಟ್ಟುಹಾಕಿರುವ ಪಾಷಾ ಅದರ ಕಾರ್ಯದರ್ಶಿಯಾಗಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಅಧ್ಯಕ್ಷರಾಗಿ ಜಾವೇದ ಹುಸೇನ್ ಹವಾಲ್ದಾರ್, ಉಪಾಧ್ಯಕ್ಷರಾಗಿ ರಮೀಜ ರಾಜಾ, ಖಜಾಂಚಿಯಾಗಿ ಲಕ್ಷ್ಮಣ ವಾಸ್ಟರ್ ಕರಾಟೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

2016ರಲ್ಲಿ ಸಿಂಧನೂರಿನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ವಿನೋದ ಕುಮಾರ, ಹರೀಶಕುಮಾರ ಭಜಂತ್ರಿ, ವಿಶ್ವ ಅವರು ಬೆಳ್ಳಿ ಪದಕ, ಶೇಖ್‌ ಮಹಿಬೂಬ, ಲಕ್ಷ್ಮಣ ವಾಸ್ಟರ್, ಮಿರ್ಜಾ ಅಮಾನ ಬೇಗ್‌ ಕಂಚಿನ ಪದಕ ಪಡೆದು ತಮ್ಮ ಗುರು ಪಾಷಾ ಅವರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

2017ರಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಕರಾಟೆ ಸ್ಪರ್ಧೆಯಲ್ಲಿ ಹರೀಶಕುಮಾರ ಮುಷ್ಟಳ್ಳಿ ಬೆಳ್ಳಿ ಪದಕ, ಅದೇ ವರ್ಷ ಮಡಿಕೇರಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಜ್ವಲ್‌ಕುಮಾರ ಚಿನ್ನ, ಶಾಹೀದ ಖುರೇಶಿ ಕಂಚಿನ ಪದಕ ಪಡೆದು ಸಾಧನೆ ಮೆರೆದಿದ್ದಾರೆ.

15 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಿರುವ ಪಾಷಾ, ಬೆಂಗಳೂರಿನ ಕಂಠೀರವ ಸ್ಟೇಡಿಯಂ, ಮೈಸೂರಿನ ದಸರಾ ಕ್ರೀಡೆಗಳು, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಯಾದಗಿರಿಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಘಟಾನುಘಟಿಗಳನ್ನು ಸೋಲಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಟೈಲ್ಸ್ ಬ್ರೇಕ್, ಸ್ಟಂಟ್, ಫ್ಲೈಯಿಂಗ್ ಕಿಕ್, ಹೊಟ್ಟೆ ಮೇಲೆ ಬೈಕ್ ಓಡಿಸುವುದು, ಹೊಟ್ಟೆ ಮೇಲೆ ಬಂಡೆ ಒಡೆಯುವುದು ಮೊದಲಾದ ಸಾಹಸ ಪ್ರದರ್ಶನಗಳಲ್ಲಿ ಅವರಿಗೆ ಅವರೇ ಸಾಟಿ. ಅವರ ಮತ್ತು ಅವರ ಶಿಷ್ಯಂದಿರ ಕರಾಟೆ ಹಾಗೂ ಸಾಹಸ ಪ್ರದರ್ಶನ ವೀಕ್ಷಿಸಲು ಜನ ಕಿಕ್ಕಿರಿದು ಸೇರುತ್ತಾರೆ.

ಪಾಷಾ ಅವರ ಸೇವೆಯನ್ನು ಪರಿಗಣಿಸಿ ಶಿಕ್ಷಣ ಇಲಾಖೆ ಆರ್.ಎಂ.ಎಸ್. ಯೋಜನೆಯಡಿ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳ ವಿದ್ಯಾರ್ಥಿನಿಯ ರಿಗೆ ಕರಾಟೆ ತರಬೇತಿ ನೀಡುವ ಹೊಣೆಗಾರಿಕೆ ವಹಿಸಿದೆ. ಸುರಪುರದಲ್ಲಿ ಪ್ರತಿನಿತ್ಯ 100ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಆಗಾಗ ಶಿಕ್ಷಕರಿಗೆ ಕರಾಟೆ ಕಲಿಸುತ್ತಾರೆ.

‘ಕರಾಟೆ ಕಲೆಯಲ್ಲಿ ಪರಿಣಿತರಾದ ವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ದಳ, ಸಿ.ಆರ್.ಪಿ.ಎಫ್. ಪರೀಕ್ಷೆಯಲ್ಲಿ ಶೇ 5 ಅಂಕಗಳನ್ನು ನೀಡಲಾಗುತ್ತದೆ. ತಮ್ಮ ಶಿಷ್ಯರಲ್ಲಿ ಕೆಲವರು ಇದರ ಉಪಯೋಗ ಪಡೆದು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪಾಷಾ ಹವಾಲ್ದಾರ್‌.

‘ಮಕ್ಕಳು ವಿಶೇಷವಾಗಿ ಮಹಿಳೆಯರು ಕರಾಟೆ ಕಲಿಯಲು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಈ ಬಗ್ಗೆ ಯೋಜನೆ ರೂಪಿಸಿದರೂ ಯಶಸ್ವಿ ಯಾಗುತ್ತಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ಕರಾಟೆ ಕಲಿಸಲು ಪ್ರೋತ್ಸಾಹಿಸಬೇಕು. ಕರಾಟೆ ಸ್ವಯಂ ರಕ್ಷಣೆಗೂ ಮತ್ತು ಸದೃಢ ಆರೋಗ್ಯಕ್ಕೂ ಸಹಾಯಕವಾಗಿದೆ’ ಎನ್ನುತ್ತಾರೆ ಅವರು. (ಪಾಷಾ ಅವರ ಮೊಬೈಲ್ ಸಂಖ್ಯೆ: 99013 69644)

* * 

ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಅವರೂ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯಕವಾಗಿದೆ.

ಪಾಷಾ ಹವಾಲ್ದಾರ್

ಕರಾಟೆ ಮಾಸ್ಟರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry