ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

7

ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

Published:
Updated:
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

ಬಳ್ಳಾರಿ: ‘ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಆಸಕ್ತಿ ತೋರಿದರೆ ಜಿಲ್ಲೆಯಲ್ಲಿ ಕೌಶಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು’ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಭರವಸೆ ನೀಡಿದರು.

ಇಲ್ಲಿನ ಆರ್‌ಬಿವೈಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಇನ್ನು ಮುಂದೆ ಸ್ಥಾಪಿಸುವುದಿಲ್ಲ. ಅದರ ಬದಲು ಮುಂಚೂಣಿಯಲ್ಲಿರುವ ಸಂಸ್ಥೆಗಳಿಗೇ ಅನುದಾನ ನೀಡುತ್ತದೆ. ಕೌಶಲ ಭಾರತ ಯೋಜನೆಯನ್ನು ಸ್ವಾಗತಿಸುವವರಿಗೆ ಮಾತ್ರ ಆದ್ಯತೆ’ ಎಂದು ಸ್ಪಷ್ಟಪಡಿಸಿದರು.

‘ದೇಶವು ಇನ್ನು ಮುಂದೆ ಕೌಶಲ ತರಬೇತಿಯ ತಾಣವಾಗಲಿದೆ. ಪ್ರತಿ ವರ್ಷ 2 ಕೋಟಿ ಯುವಜನರಿಗೆ ಉದ್ಯೋಗ ನೀಡುವ ಸವಾಲಿದೆ. ಕೌಶಲವುಳ್ಳವರಿಗೆ ಉದ್ಯೋಗ ದೊರಕುತ್ತದೆ. ಆದರೆ ಉದ್ಯೋಗ ದೊರಕದವರಗೆ ಕೌಶಲ್ಯ ಕಲಿಸಿ ಉದ್ಯೋಗ ದೊರಕಿಸುವುದೇ ನಿಗಮದ ಪ್ರಮುಖ ಉದ್ದೇಶ’ ಎಂದರು.

‘ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ 7ರಷ್ಟು ಮಂದಿಗೆ ಮಾತ್ರ ಕೌಶಲವಿರುತ್ತದೆ. ಶೇ 93ರಷ್ಟು ಮಂದಿಗಾಗಿ ಕೌಶಲ ಭಾರತ ಕಾರ್ಯಕ್ರಮವನ್ನು ರೂಪಿಸಿರುವುದು ವಿಶೇಷ. ವಿದ್ಯಾಲಯಗಳು ನೀಡುವ ಪದವಿ ಪ್ರಮಾಣಪತ್ರಗಳು ಬದುಕು ಕಟ್ಟಿಕೊಡುವುದಿಲ್ಲ. ಕೌಶಲಕ್ಕಾಗಿ ತುಡಿತವಿರಬೇಕು. ಅಂಥವರಿಗಾಗಿ ಪ್ರತಿ ಜಿಲ್ಲೆಯಲ್ಲೂ ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದರು.

ಸಂಸದ ಬಿ.ಶ್ರೀರಾಮುಲು, ಮುಖಂಡ ಜಿ.ಸೋಮಶೇಖರರೆಡ್ಡಿ, ನಿಗಮದ ಆಂಧ್ರಪ್ರದೇಶ ಪ್ರಧಾನ ಕನ್‌ಸಲ್ಟೆಂಟ್‌ ಎನ್‌.ಶೈಲಜಾ, ಕೇಂದ್ರ ವಿಮಾ ನಿಗಮದ ಸದಸ್ಯ ಕೆ.ದಿಲೀಪ್‌ಕುಮಾರ್‌, ಮೈಸೂರಿನ ರಾಮನ್‌ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಶನ್ ಟೆಕ್ನಾಲಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ವಿ.ವೆಂಕಟೇಶ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್‌ಗೋಪಾಲ್‌ ಮಾತನಾಡಿದರು. ಬಿಜೆಪಿ ಮುಖಂಡರಾದ ಫಕೀರಪ್ಪ ಮತ್ತು ಜೆ.ಶಾಂತಾ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ ವೇದಿಕೆಯಲ್ಲಿದ್ದರು.

42 ಕಂಪನಿಗಳು, ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗಿ...

ಮೇಳದಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ನ 42ಕ್ಕೂ ಹೆಚ್ಚು ಕಂಪ‌ನಿಗಳು ಪಾಲ್ಗೊಂಡಿದ್ದು, ಪ್ರಮುಖರ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ ಉದ್ಯೋಗಾಕಾಂಕ್ಷಿಗಳ ಸಂದರ್ಶನವನ್ನು ನಡೆಸಿದರು. ಜಿಲ್ಲೆಯವರಷ್ಟೇ ಅಲ್ಲದೆ, ಕೊಪ್ಪಳ ಮತ್ತು ರಾಯಚೂರಿನಿಂದಲೂ ಯುವಜನರು ಬಂದಿದ್ದರು.

* * 

ಉದ್ಯೋಗ ಮೇಳದಲ್ಲಿ ಕೆಲಸ ದೊರಕದವರಿಗೆ ನಿಗಮವು ಕೌಶಲ ತರಬೇತಿ ನೀಡಿ, ಉದ್ಯೋಗವನ್ನೂ ದೊರಕಿಸಲಿದೆ

ಅನಂತಕುಮಾರ ಹೆಗಡೆ ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry