ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

7

ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

Published:
Updated:
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣ ಹೊರವಲಯದ ಐತಿಹಾಸಿಕ ಗಡಿದಂ ಲಕ್ಷ್ಮಿ ವೆಂಕರಮಣಸ್ವಾಮಿ ದೇವಾಲಯದ ಸನ್ನಿಧಿ ಭಾನುವಾರ ಎಸ್‌.ಎನ್.ಸುಬ್ಬಾರೆಡ್ಡಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸುತ್ತಿರುವ ಮತ್ತೊಂದು ಬಡವರ ಮದುವೆ ‘ಹಬ್ಬ’ಕ್ಕೆ ಸಾಕ್ಷಿಯಾಗಲು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಭಾನುವಾರ ಬೆಳಿಗ್ಗೆ ನಡೆಯುವ ಅದ್ದೂರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 200 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಲಿದ್ದಾರೆ.

ಸಾಮೂಹಿಕ ಮದುವೆಗಾಗಿ ವೆಂಕರಮಣಸ್ವಾಮಿ ದೇವಾಲಯದ ಎದುರು ಭವ್ಯ ವೇದಿಕೆಯುಳ್ಳ ಬೃಹತ್ ಶಾಮಿಯಾನ ತಲೆ ಎತ್ತಿದ್ದು, ಈ ಮದುವೆಯ ಹಬ್ಬಕ್ಕೆ ಸುಮಾರು 30 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. ಮದುವೆಗೆ ಬರುವ ಪ್ರತಿಯೊಬ್ಬರ ಊಟಕ್ಕೂ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿನ್ನಕಾಯಲಪಲ್ಲಿಯ ಕೊಡುಗೈ ದಾನಿ

ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದ ಒಂದು ಸಣ್ಣ ರೈತ ಕುಟುಂಬದಲ್ಲಿ ಜನಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಲ್ಯದಲ್ಲಿ ಬಡತನ ಹೊದ್ದುಂಡು ಬೆಳೆದರೂ, ‘ಭಗಿನಿ’ ಎಂಬ ದೈತ್ಯ ಹೋಟೆಲ್ ಸಮೂಹ ಕಟ್ಟಿ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡುವ ಮಟ್ಟಕ್ಕೆ ಬೆಳೆದದ್ದೇ ಒಂದು ರೋಚಕ ಛಲದ ಕಥನ.

ಬಡತನದ ಬೇಗೆಯಲ್ಲಿ ಬೆಂದ ಬಡ ಜನರು ಆರ್ಥಿಕ ಮುಗ್ಗಟ್ಟಿನ ನಡುವೆ ಮಕ್ಕಳ ಮದುವೆ ಮಾಡಲು ಪಡುವ ಪಡಿಪಾಟಲು ಕಂಡು ಸುಬ್ಬಾರೆಡ್ಡಿ ಅವರು 18 ವರ್ಷಗಳ ಹಿಂದೆಯೇ ತಮ್ಮ ಸಮಾಜ ಸೇವಾ ಕಾರ್ಯಗಳಲ್ಲಿ ಉಚಿತ ಸಾಮೂಹಿಕ ಮದುವೆ ಕಾರ್ಯವನ್ನು ಒಂದಾಗಿ ಸೇರಿಸಿಕೊಂಡು ಅಂದಿನಿಂದ ಇಂದಿನವರೆಗೆ ಅದನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ.

‘ಸಮಾಜದಲ್ಲಿ ಸಮಾನತೆ ಎತ್ತಿ ಹಿಡಿಯುವಲ್ಲಿ ಸಾಮೂಹಿಕ ವಿವಾಹಗಳು ಸಹಕಾರಿ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಸುಬ್ಬಾರೆಡ್ಡಿ ಅವರು ಈವರೆಗೆ ಸುಮಾರು 7,555 ಬಡವರ ಮನೆ ಮಕ್ಕಳ ಜೋಡಿಗೆ ಮದುವೆಗೆ ಅಗತ್ಯವಾದ ಉಡುಗೆ, ತಾಳಿ, ಬಾಸಿಂಗ ಸೇರಿದಂತೆ ಅನೇಕ ಸಾಮಗ್ರಿಗಳನ್ನು ನೀಡುವ ಜತೆಗೆ ಕಲ್ಯಾಣ ಭಾಗ್ಯ ಕರುಣಿಸಿ ತಮ್ಮ ಸಂಕಲ್ಪಕ್ಕೆ ಮುಕ್ಕಾದಂತೆ ನೋಡಿಕೊಂಡು ಬಂದಿದ್ದಾರೆ.

ಕಳೆದ 5 ವರ್ಷಗಳಿಂದ ತಮ್ಮ ಟ್ರಸ್ಟ್ ಮೂಲಕ ಸಾಮೂಹಿಕ ವಿವಾಹವಾಗುವ ಪ್ರತಿ ಜೋಡಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸುಮಾರು ₹ 50 ಸಾವಿರ ಬೆಲೆ ಬಾಳುವ ಸೀಮೆ ಹಸು ಉಡುಗೊರೆಯಾಗಿ ನೀಡುವ ಮೂಲಕ ಉದಾತ್ತ ಚಿಂತನೆಯ ಸಮಾಜಮುಖಿ ಕಾರ್ಯಕ್ಕೆ ಮಾದರಿಯಾಗಿದ್ದಾರೆ.

ಸಾಟಿಯಿಲ್ಲದ ಸಮಾಜಸೇವೆ

ಬಾಗೇಪಲ್ಲಿ ಮತ್ತು ಗುಡಿಬಂಡೆಯ ಸರ್ಕಾರಿ ಆಸ್ಪತ್ರೆಗೆ ತಲಾ ಒಂದು ಸುಸಜ್ಜಿತವಾದ ಆಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿರುವ ಸುಬ್ಬಾರೆಡ್ಡಿ ಅವರು, ಈ ಎರಡು ಆಸ್ಪತ್ರೆಗಳ ಒಳರೋಗಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರತಿನಿತ್ಯ ಉಚಿತ ಉಪಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬಾಗೇಪಲ್ಲಿ

ಪಟ್ಟಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತಾ ಬಂದಿರುವ ಇವರು ಸುಮಾರು 12,000ಕ್ಕೂ ಅಧಿಕ ರೋಗಿಗಳಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸ್ವಂತ ಖರ್ಚಿನಲ್ಲಿ ಅತ್ಯಾಧುನಿಕ ರೀತಿಯ ಚಿಕಿತ್ಸೆ ಕೊಡಿಸಿದ್ದಾರೆ. ಕಣ್ಣು ಪರೀಕ್ಷಾ ಶಿಬಿರದ ಮೂಲಕ ಸುಮಾರು 15,000 ಸಾವಿರಕ್ಕೂ ಅಧಿಕ ಜನರಿಗೆ ಪೊರೆಯ ಶಸ್ತ್ರಚಿಕಿತ್ಸೆ ಮಾಡಿಸುವ ಜತೆಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದ್ದಾರೆ.

ಅನೇಕ ವರ್ಷಗಳಿಂದ ಸುಬ್ಬಾರೆಡ್ಡಿ ಅವರು ತಮ್ಮ ಟ್ರಸ್ಟ್ ಮೂಲಕ ಪ್ರತಿ ವರ್ಷ ಗ್ರಾಮೀಣ ಭಾಗದಿಂದ ಪಟ್ಟಣಗಳಿಗೆ ಓದಲು ಬರುವ ಸುಮಾರು 23 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಕೊಡಿಸುವ ಜತೆಗೆ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕುಗಳಲ್ಲಿ ಸುಮಾರು 30ಕ್ಕೂ ಅಧಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ಅವಶ್ಯಕವಾದ ಪುಸ್ತಕ, ಬಟ್ಟೆ, ಊಟದ ತಟ್ಟೆ-ಲೋಟ, ಬ್ಯಾಗ್‌ ಹಾಗೂ ಲೇಖನ ಸಾಮಗ್ರಿಗಳನ್ನು ಒದಗಿಸುತ್ತ ಹಳ್ಳಿಗಳ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತ ಬರುತ್ತಿದ್ದಾರೆ.

ಅನೇಕ ದೇವಾಲಯ, ಮಸೀದಿ-, ದರ್ಗಾಗಳ ಜೀರ್ಣೋದ್ಧಾರ, ನಿರ್ಮಾಣ, ಧಾರ್ಮಿಕ ಕೈಂಕರ್ಯಗಳಿಗೆ ಆರ್ಥಿಕ ನೆರವು ನೀಡುತ್ತ ಬರುತ್ತಿರುವ ಸುಬ್ಬಾರೆಡ್ಡಿ ಅವರು ರಂಜಾನ್ ಮಾಸದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಮುಸ್ಲಿಂ ಕುಟುಂಬಗಳಿಗೆ ಸಕ್ಕರೆ, ಅಕ್ಕಿ, ಶಾವಿಗೆ ಸೇರಿದಂತೆ ಹಬ್ಬಕ್ಕೆ ಬೇಕಾದ ವಿವಿಧ ಪದಾರ್ಥಗಳ ಕೀಟ್‌ ವಿತರಣೆ ಮಾಡುತ್ತಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ನಾರೇಮದ್ದೇಪಲ್ಲಿ ಮದುವೆಯಾಗುವ ಪ್ರತಿ ಮುಸ್ಲಿಮ ಜೋಡಿಗೂ ಒಂದು ಮಂಚ, ಐದು ಜೊತೆ ಬಟ್ಟೆ, ಚಿನ್ನದ ತಾಳಿ, ಬೆಳ್ಳಿಯ ಕಾಲು ಚೈನು, ಒಂದು ಅಲ್ಮೇರಾ, ಹಾಸಿಗೆ, ಹೊದಿಕೆ, ನೀಡುವ ಮೂಲಕ ನವದಂಪತಿಗೆ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಬೇಕಾದ ಎಲ್ಲವನ್ನೂ ನೀಡುವ ಮೂಲಕ ಸಾವಿರಾರು ಕುಟುಂಬಗಳಲ್ಲಿ ಮಂದಹಾಸ ಮೂಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಎಲ್ಲಾ ಬೀದಿ ವ್ಯಾಪಾರಿಗಳ ನೆಲಸುಂಕವನ್ನು ತಾವೇ ಭರಿಸುವ ಮೂಲಕ ಬಡ ವ್ಯಾಪಾರಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ನೀಡುವ ಮೂಲಕ ಕೊಡುಗೈ ದಾನಿಯಾಗಿ ಜನಮಾನಸದಲ್ಲಿ ನೆಲೆ ನಿಂತಿರುವ ಸುಬ್ಬಾರೆಡ್ಡಿ ಅವರದು ಸಾರ್ಥಕ ಬದುಕು ಎನ್ನುವುದಕ್ಕೆ ಅವರ ಈ ಸಮಾಜಸೇವೆಗಳೇ ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry