ಜಗಳೂರು ಜನರ ಕಾತರದ ಹುಣ್ಣಿಮೆ

5

ಜಗಳೂರು ಜನರ ಕಾತರದ ಹುಣ್ಣಿಮೆ

Published:
Updated:
ಜಗಳೂರು ಜನರ ಕಾತರದ ಹುಣ್ಣಿಮೆ

ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ದಶಕಗಳ ಭವ್ಯ ಇತಿಹಾಸ ಇದೆ. ಸ್ವಾಂತಂತ್ರ್ಯ ಕಾಲಘಟ್ಟದಿಂದ ಆರಂಭಗೊಂಡ ಮಹೋತ್ಸವ ಇಂದಿನವರೆಗೆ ಅಡೆತಡೆ ಇಲ್ಲದೆ ಸಾಗಿ ಬಂದಿದೆ. ರಾಜ್ಯದ ವಿವಿಧ ಮೂಲೆಗಳಲ್ಲಿ ಹಂಚಿಹೋಗಿರುವ ಲಕ್ಷಾಂತರ ಭಕ್ತರ ಮಹಾಪೂರವೇ ಪ್ರತಿ ವರ್ಷ ನಡೆಯುವ ಹುಣ್ಣಿಮೆ ಉತ್ಸವಕ್ಕೆ ಹರಿದುಬರುತ್ತದೆ.

ಕೃಷಿ, ನೀರಾವರಿ, ರಾಜಕೀಯ ಕ್ಷೇತ್ರದ ಸುಧಾರಣೆ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಕುರಿತು ತಜ್ಞರು, ಚಿಂತಕರು ಈ ವೇದಿಕೆಯಲ್ಲಿ ಚಿಂತನ–ಮಂಥನದ ಭಾಗವಾಗಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ವೇದಿಕೆಯಲ್ಲಿ ಗೌರವಿಸಲಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜನಪರ ಕಾಳಜಿಯಿಂದಾಗಿ ಈಚೆಗೆ ಬರಿದಾದ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸ್ವಾಮೀಜಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ರೈತರ ಪರ ಸಂಘಟನೆಗಳನ್ನು ಒಗ್ಗೂಡಿಸಿ ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಬರಿದಾಗಿದ್ದ ಹಲವು ಕೆರೆಗಳಿಗೆ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ ಜರುಗಬೇಕಿದ್ದ ಜಗಳೂರು ಹುಣ್ಣಿಮೆ ಮಹೋತ್ಸವ ಬರಗಾಲದ ಪರಿಣಾಮ ಈ ವರ್ಷ ನಡೆಯುತ್ತಿದೆ.

ಜಗಳೂರಿನಲ್ಲಿ 3ನೇ ಹುಣ್ಣಿಮೆ: 1940ರ ದಶಕದಲ್ಲಿ ಸಿರಿಗೆರೆಯ ಮಠದಲ್ಲಿ ಹುಣ್ಣಿಮೆ ಮಹೋತ್ಸವವನ್ನು ಆಚರಿಸಲಾಗುತ್ತಿತ್ತು. ಮಠದಿಂದ ಹೊರಗೆ ಮೊದಲ ಬಾರಿ 1950ರಲ್ಲಿ ಜಗಳೂರಿನಲ್ಲಿ ಹುಣ್ಣಿಮೆ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗಿತ್ತು. ನಂತರ ರಾಜ್ಯದ ವಿವಿಧೆಡೆ ಪ್ರತಿವರ್ಷ ಮಹೋತ್ಸವ ಯಶಸ್ವಿಯಾಗಿ ಸಾಗುತ್ತಾ ಬಂದಿದೆ. ಈ ಭಾಗದ ಭಕ್ತರ ಒತ್ತಾಸೆಯ ಮೇರೆಗೆ 43 ವರ್ಷಗಳ ತರುವಾಯ 1993ರಲ್ಲಿ ಜಗಳೂರಿನಲ್ಲಿ 9 ದಿನಗಳ ಕಾಲ ಸಂಭ್ರಮದ ಹುಣ್ಣಿಮೆ ನಡೆದಿತ್ತು. ನಾಡಿನ ಪ್ರಸಿದ್ಧ ಸಾಹಿತಿಗಳು ಕಲಾವಿದರು, ರಾಜಕಾರಣಿಗಳು ನಿತ್ಯ ಉಪನ್ಯಾಸ, ಚರ್ಚೆಯಲ್ಲಿ ಭಾಗವಹಿಸಿ ಪ್ರೇಕ್ಷಕರಿಗೆ ಜ್ಞಾನದಾಸೋಹ ಒದಗಿಸಿದ್ದರು. ತಾಲ್ಲೂಕಿನ ಜನರು ಅಕ್ಷರಶ: ಪರಿಷೆ ರೀತಿಯಲ್ಲಿ ಸಾಗಿದ ಹುಣ್ಣಿಮೆಯ ಅನುಭವದಿಂದ ಪುಳಕಿತರಾಗಿದ್ದರು. ಇದೀಗ ಮೂರನೇ ಬಾರಿ 2018ರ ಹುಣ್ಣಿಮೆ ನಡೆಯುತ್ತಿರುವುದು ಮಧ್ಯ ಕರ್ನಾಟಕದ ಭಕ್ತಾದಿಗಳಲ್ಲಿ ಉತ್ಸಾಹ ಮೂಡಿಸಿದೆ.

ಸಾಕಾರಗೊಂಡ ತರಳಬಾಳು ಕಟ್ಟಡ: ಸಿರಿಗೆರೆ ಮಠದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕೈಂಕರ್ಯಗಳನ್ನು ಮೆಚ್ಚಿದ್ದ ಮೈಸೂರು ಸಂಸ್ಥಾನದಲ್ಲಿ ಖಾಸಗಿ ಸಚಿವರಾಗಿದ್ದ ಜಗಳೂರು ಇಮಾಂ ಸಾಹೇಬ್‌ ಅವರು ಪಟ್ಟಣದಲ್ಲಿ 3 ಎಕರೆ ಸ್ಥಳವನ್ನು ಸಿರಿಗೆರೆ ಮಠಕ್ಕೆ ಮಂಜೂರು ಮಾಡಲು ಸಹಕರಿಸಿದ್ದರು.

ಕಾರಣಾಂತರಗಳಿಂದ ಹಲವು ದಶಕಗಳಿಂದ ಸಮುದಾಯ ಭವನ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಹುಣ್ಣಿಮೆ ಹಿನ್ನೆಲೆಯಲ್ಲಿ ಸಿರಿಗೆರೆ ಸ್ವಾಮೀಜಿ ಅವರ ಆಶಯದಂತೆ ಭಕ್ತಾದಿಗಳು ಉದಾರವಾಗಿ ಸ್ಪಂದಿಸಿದ್ದು, ಇಲ್ಲಿ ಭವ್ಯವಾದ ಕಟ್ಟಡ ಪ್ರಗತಿಯಲ್ಲಿದೆ.

ನೀರಾವರಿ ವಂಚಿತ ಜಗಳೂರು: ವಾರ್ಷಿಕವಾಗಿ ಕೇವಲ 500 ಮಿ.ಮೀ ಮಳೆ ಬೀಳುವ ಜಗಳೂರು ತಾಲ್ಲೂಕು ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ. ಯಾವುದೇ ನದಿ ಅಥವಾ ಜಲಾಶಯ ಮೂಲಗಳಿಲ್ಲದ ತಾಲ್ಲೂಕಿನಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅಂತರ್ಜಲವನ್ನೇ ನೆಚ್ಚಿಕೊಳ್ಳಲಾಗಿದೆ.

ನಿರುದ್ಯೋಗ, ಬಡತನ ಹೆಚ್ಚಾಗಿರುವ ಇಲ್ಲಿನ ಬಹುತೇಕ ಹಳ್ಳಿಗಳ ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ಕಾಫಿಸೀಮೆ ಅಥವಾ ದೂರದ ಊರುಗಳಿಗೆ ಮಕ್ಕಳು, ಮರಿಯೊಂದಿಗೆ ಸಾಮೂಹಿಕವಾಗಿ ಗುಳೆ ಹೋಗುವುದು ದಶಕಗಳಿಂದ ಇಲ್ಲಿ ಅವ್ಯಾಹತವಾಗಿ ಸಾಗಿ ಬಂದಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ, ರೈಲ್ವೇ ಸೌಲಭ್ಯದಿಂದ ತಾಲ್ಲೂಕು ವಂಚಿತವಾಗಿದೆ. ಕೆಲವು ವರ್ಷಗಳಿಂದ ನೀರಾವರಿ ಜಾರಿಗಾಗಿ ಸಾಕಷ್ಟು ಹೋರಾಟ ನಡೆಯುತ್ತಿದ್ದರೂ ಪ್ರಭುತ್ವಗಳ ಅಸಡ್ಡೆಯಿಂದ ಯೋಜನೆಗಳು ಕಾಗದದ ಮೇಲಷ್ಟೇ ಉಳಿದಿವೆ.

ಸತತ ಬರದಿಂದ ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಅಂತರ್ಜಲ ಕುಸಿದಿದ್ದು, ವಿಷಕಾರಿ ಫ್ಲೋರೈಡ್‌ ಮುಂತಾದ ಲವಣಾಂಶಗಳಿಂದ ಜನರು ರೋಗಪೀಡಿತರಾಗುತ್ತಿದ್ದಾರೆ. ಈ ಮಧ್ಯೆ 44 ಕೆರೆಗಳಿಗೆ ನದಿ ನೀರು ತುಂಬಿಸುವ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ.

ವಿಶ್ವ ಭೂಪಟದಲ್ಲಿ ಜಗಳೂರಿನ ಕೊಂಡುಕುರಿ: ನೈಸರ್ಗಿಕವಾಗಿ ಬಯಲುಸೀಮೆಯ ತಾಲ್ಲೂಕಿನಲ್ಲಿ ಭಾರತ ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಕುರುಚಲು ಅರಣ್ಯ ಇದೆ. 78 ಚದರ ಕಿ.ಮೀ ವಿಸ್ತೀರ್ಣದ ರಂಗಯ್ಯನದುರ್ಗ ಅರಣ್ಯ ಪ್ರದೇಶದ ವಿಶಿಷ್ಟ ವನ್ಯಜೀವಿ ಹಾಗೂ ಸಸ್ಯ ಸಂಕುಲಕ್ಕೆ ಶತಮಾನಗಳಿಂದ ಆಶ್ರಯ ನೀಡಿದೆ.

ಜಗತ್ತಿನಲ್ಲೇ ಅಳಿವಿನ ಅಂಚಿನಲ್ಲಿರುವ ನಾಲ್ಕು ಕೊಂಬುಗಳ ಕೊಂಡುಕುರಿ ಸೇರಿದಂತೆ. ಚಿರತೆ, ಕೃಷ್ಣಮೃಗ, ಕರಡಿ, ಕತ್ತೆ ಕಿರುಬ, ಚಿಪ್ಪು ಹಂದಿ,ಮುಳ್ಳು ಹಂದಿ, ನಕ್ಷತ್ರ ಆಮೆ, ನೂರಾರು ಜಾತಿಯ ಪಕ್ಷಿಗಳು ಹಾಗೂ ವಿಶಿಷ್ಟ ಸಸ್ಯ ಸಂಕುಲ ನೆಲೆ ಕಂಡುಕೊಂಡಿವೆ. 2010ರಲ್ಲಿ ಸರ್ಕಾರ ವನ್ಯಧಾಮವ್ನನಾಗಿ ಘೋಷಿಸಿದ್ದು, ಜಗತ್ತಿನ ಏಕೈಕ ಕೊಂಡುಕುರಿ ಧಾಮ ಇದಾಗಿದೆ.

ತಲೆ ಎತ್ತಿದ ಆಕರ್ಷಕ ಮಂಟಪ

ತರಳಬಾಳು ಪರಂಪರೆಯನ್ನು ಸಾರುವ ಮತ್ತು ಮೈಸೂರು ಅರಮನೆಯನ್ನು ಹೋಲುವ ಸುಂದರ ಮಂಟಪ ಹುಣ್ಣಿಮೆ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದು. ಇಲ್ಲಿನ ದಾವಣಗೆರೆ ರಸ್ತೆಯ 20 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಮಂಟಪ ಅತ್ಯಂತ ಕಲಾತ್ಮಕವಾಗಿ ಮೂಡಿ ಬಂದಿದೆ. ಸಾಗರ ಮತ್ತು ತಿಪಟೂರಿನ ಏಜೆನ್ಸಿಯಿಂದ ನಿರ್ಮಿಸಿರುವ ಬೃಹತ್‌ ವೇದಿಕೆ ಮತ್ತು ಆಕರ್ಷಕ ಮಂಟಪದ ಹಿಂದೆ ನೂರಾರು ಕುಸುರಿ ಕಲಾವಿದರ ಕೈಚಳಕ ಎದ್ದು ಕಾಣುತ್ತಿದೆ. ಉಳಿದಂತೆ 50 ಎಕರೆ ಪ್ರದೇಶದಲ್ಲಿ ವಿಶಾಲವಾದ ವಾಹನ ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ.

‘ಡಾ.ಶಿವಮೂರ್ತಿ ಸ್ವಾಮೀಜಿ ಅವರು ಆಗಾಗ್ಗೆ ಇಲ್ಲಿಗೆ ಆಗಮಿಸಿ ವೇದಿಕೆ ಮತ್ತು ಕಾರ್ಯಕ್ರಮದ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ಅಂತಿಮಗೊಳಿಸಿದ್ದಾರೆ. ಜಾತಿ ಮತ್ತು ಪಕ್ಷಭೇದ ಮರೆತು ಎಲ್ಲರೂ ಮಹೋತ್ಸವದ ಯಶಸ್ಸಿಗೆ ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ’ ಎಂದು ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಭಾಷ್‌ಚಂದ್ರ ಬೋಸ್‌ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry