ಕೆರೆಗೆ ಮತ್ತೆ ಮತ್ತೆ ಬೆಂಕಿ ಗಂಭೀರವಾಗಿ ಪರಿಗಣಿಸಿ

7

ಕೆರೆಗೆ ಮತ್ತೆ ಮತ್ತೆ ಬೆಂಕಿ ಗಂಭೀರವಾಗಿ ಪರಿಗಣಿಸಿ

Published:
Updated:
ಕೆರೆಗೆ ಮತ್ತೆ ಮತ್ತೆ ಬೆಂಕಿ ಗಂಭೀರವಾಗಿ ಪರಿಗಣಿಸಿ

ಬೆಂಕಿ ಹತ್ತಿದರೆ ಸಾಮಾನ್ಯವಾಗಿ ಏನು ಮಾಡುತ್ತಾರೆ? ನೀರು ಹಾಕಿ ಆರಿಸುತ್ತಾರೆ. ನೀರು ಜಾಸ್ತಿ ಬೇಕು ಎನ್ನುವುದಾದರೆ ಕೆರೆ, ಬಾವಿಯಿಂದ ತರುತ್ತಾರೆ. ಅಂದರೆ ಬಹಳಷ್ಟು ಸಂದರ್ಭಗಳಲ್ಲಿ ನೀರಿನಿಂದ ಬೆಂಕಿಯನ್ನು ಹತೋಟಿಗೆ ತರಬಹುದು. ಆದರೆ ಬೆಂಗಳೂರಿನ ಕತೆಯೇ ಬೇರೆ. ಇಲ್ಲಿ ನೀರಿರುವ ಕೆರೆಗೇ ಬೆಂಕಿ ಹತ್ತಿಕೊಳ್ಳುತ್ತದೆ. ಅತ್ಯಾಧುನಿಕ ಅಗ್ನಿಶಾಮಕ ವ್ಯವಸ್ಥೆಗೂ ಬಗ್ಗದೆ ದಿನಗಟ್ಟಲೆ ಉರಿಯುತ್ತದೆ. ಕಳೆದ ಶುಕ್ರವಾರ ಇಂತಹುದೇ ಅನಾಹುತ ಮರುಕಳಿಸಿತು. ಬೆಳ್ಳಂದೂರು ಕೆರೆಗೆ ಮತ್ತೆ ಬೆಂಕಿ ಹತ್ತಿಕೊಂಡಿತ್ತು. ಸುಲಭವಾಗಿ ಅದನ್ನು ಶಮನಗೊಳಿಸಲು ಆಗಲೇ ಇಲ್ಲ. ಅಗ್ನಿಶಾಮಕ ದಳ ಮಾತ್ರವಲ್ಲದೆ ಸೇನೆಯ ಸಿಬ್ಬಂದಿ ಕೂಡ ಕೈಜೋಡಿಸಬೇಕಾಯಿತು. ನೂರಾರು ಪರಿಣತರು, ಅತ್ಯಾಧುನಿಕ ವಾಹನಗಳು ಮತ್ತು ಬೆಂಕಿ ಶಮನ ಸಾಧನಗಳನ್ನು ಬಳಸಿದರೂ ಅದು ನಿಯಂತ್ರಣಕ್ಕೆ ಬಂದದ್ದು 28 ತಾಸಿನ ನಂತರ. ಈಗಲೂ ಯಾವ ಕ್ಷಣದಲ್ಲಿ ಅದು ಮತ್ತೆ ಕಾಣಿಸಿಕೊಳ್ಳುತ್ತದೋ ಗೊತ್ತಿಲ್ಲ. ಏಕೆಂದರೆ ಈ ಕೆರೆಗೂ ಬೆಂಕಿಗೂ ಬಲವಾದ ನಂಟು. ಮೂರು ವರ್ಷಗಳಲ್ಲಿ ನಾಲ್ಕು ಸಲ ಕೆರೆ ಧಗಧಗ ಉರಿದಿದೆ ಎಂದರೆ ಇದೇನೂ ನಿರ್ಲಕ್ಷಿಸುವ ಸಂಗತಿಯಲ್ಲ.

ಬೆಂಕಿಗೆ ಕಾರಣ ಏನು ಎನ್ನುವ ವಿಷಯದಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳಲ್ಲೇ ಗೊಂದಲ ಇದೆ. ‘ಕೆರೆ ಅಂಗಳದ ಹುಲ್ಲು ಕಡ್ಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಅಂಗಳದಲ್ಲಿ ಶೇಖರಣೆಯಾಗಿರುವ ನೀರಿನಲ್ಲಿ ರಾಸಾಯನಿಕ ಹೆಚ್ಚಿದ್ದು, ಅದರಿಂದಲೂ ಬೆಂಕಿ ಇನ್ನಷ್ಟು ಹರಡಿರಬಹುದು’ ಎಂದು ಬಿಡಿಎ ಆಯುಕ್ತ ಹೇಳಿದರೆ, ‘ಇಲ್ಲ. ಇದು ರಾಸಾಯನಿಕಗಳಿಂದ ಹತ್ತಿಕೊಂಡ ಬೆಂಕಿ ಅಲ್ಲ’ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯ ವಾದ. ‘ಕೆರೆಯ ನೀರಲ್ಲಿ ಬೆಂಕಿ ಹತ್ತಿಲ್ಲ. ಒಣಗಿದ ಹುಲ್ಲಿಗೆ ಹತ್ತಿಕೊಂಡಿದೆ’ ಎನ್ನುವುದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯ ವಿವರಣೆ. ಬೆಂಕಿಯ ಕಾರಣವೇ ಗೊತ್ತಿಲ್ಲದೆ ಹೋದರೆಮುಂದೆ ಇಂತಹುದೇ ಅನಾಹುತಗಳು ಮರುಕಳಿಸದಂತೆ ತಡೆಯುವ ಬಗೆಯಾದರೂ ಹೇಗೆ? ಈ ಕೆರೆಯ ವಿಚಾರದಲ್ಲಿಯಂತೂ ಅಧಿಕಾರಶಾಹಿಯ ಮಧ್ಯೆ ಸಮನ್ವಯದ ಕೊರತೆ, ನಿರ್ಲಕ್ಷ್ಯ, ಹೊಣೆಗೇಡಿತನ ಎದ್ದು ಕಾಣುತ್ತದೆ. ಏಕೆಂದರೆ 2016ರ ಫೆಬ್ರುವರಿಯಲ್ಲೂ ಈ ಕೆರೆಗೆ ಹೀಗೇ ಬೆಂಕಿ ಹತ್ತಿಕೊಂಡಿತ್ತು. ರಾಷ್ಟ್ರಮಟ್ಟದ ಸುದ್ದಿಯೂ ಆಗಿತ್ತು. ಆಗ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಇದನ್ನು ಗಣನೆಗೆ ತೆಗೆದುಕೊಂಡು, ಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಸರ್ಕಾರದ ವಿವಿಧ ಇಲಾಖೆಗಳಿಗೆ ಛೀಮಾರಿ ಹಾಕಿತ್ತು. ಕಾಲಮಿತಿಯೊಳಗೆ ಕ್ರಮ ತೆಗೆದುಕೊಳ್ಳಲು ಗಡುವು ಕೊಟ್ಟಿತ್ತು. ಆದರೂ ಮತ್ತೆ ಬೆಂಕಿ ಹತ್ತಿಕೊಂಡಿದೆ ಎಂದರೆ ಎನ್‌ಜಿಟಿ ಆದೇಶಕ್ಕೆ ಅಧಿಕಾರಶಾಹಿ ಎಷ್ಟು ಬೆಲೆ ಕೊಟ್ಟಿದೆ ಎನ್ನುವುದು ಗೊತ್ತಾಗುತ್ತದೆ.

ಇದಕ್ಕೆ ಸಂಬಂಧಪಟ್ಟಂತೆ ಕರೆದ ಸಭೆಗಳಲ್ಲಿ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸುವುದರಲ್ಲಿಯೇ ಕಾಲಹರಣ ಮಾಡುತ್ತ ಬಂದಿದ್ದಾರೆ. ತಮ್ಮ ತಮ್ಮ ಪಾಲಿನ ಕೆಲಸ ನಿರ್ವಹಿಸಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಅವರಲ್ಲಿ ಕಾಣುತ್ತಿಲ್ಲ. ಏಕೆಂದರೆ ನಿರ್ವಹಣೆ ಬಿಡಿಎ ಕೈಯಲ್ಲಿದ್ದರೆ, ಸಂಸ್ಕರಿಸದ ಕೊಚ್ಚೆ ನೀರು ಮತ್ತು ಕೈಗಾರಿಕಾ ಮಾಲಿನ್ಯ ಕೆರೆಗೆ ಸೇರದಂತೆ ತಡೆಯುವ ಕೆಲಸ ಜಲಮಂಡಳಿಯದು. ಕೆರೆಗೆ ಕಸ ಸುರಿಯದಂತೆ ಉಸ್ತುವಾರಿ ವಹಿಸಬೇಕಾಗಿರುವುದು ಬಿಬಿಎಂಪಿ. ಇವುಗಳ ಮಧ್ಯೆ ಹೊಂದಾಣಿಕೆಯೇ ಇಲ್ಲ. ಈ ಮೂರೂ ವಿಭಾಗಗಳ ಮೇಲೆ ಪೂರ್ಣ ಅಧಿಕಾರ ಹೊಂದಿದ ನಗರಾಭಿವೃದ್ಧಿ ಇಲಾಖೆ ಇವುಗಳ ಕಿವಿ ಹಿಂಡಿ ಕೆಲಸ ಮಾಡಿಸುತ್ತಿಲ್ಲ. ಕೆರೆಗಳ ನೊರೆ, ಬೆಂಕಿ ಹತೋಟಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ 2016ರ ಮೇ ತಿಂಗಳಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿತಜ್ಞರ, ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿತ್ತು. ಅದರ ವರದಿಯನ್ನಾದರೂ ಸರಿಯಾಗಿ ಜಾರಿಗೆ ತಂದಿದ್ದರೆ ಅನಾಹುತ ಮರುಕಳಿಸುತ್ತಿರಲಿಲ್ಲ. ಇಂತಹ ಉದಾಸೀನ, ಉಡಾಫೆ ಮನೋಭಾವ ಸರಿಯಲ್ಲ. ಎನ್‌ಜಿಟಿಯಿಂದ ಮತ್ತೆ ಕಿವಿ ಹಿಂಡಿಸಿಕೊಳ್ಳುವ ಬದಲು ರಾಜ್ಯ ಸರ್ಕಾರ ಈಗಲಾದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನೆಪಮಾತ್ರಕ್ಕೆ ಸಭೆ ಕರೆಯುವುದರಿಂದ, ತಾತ್ಕಾಲಿಕ ಕ್ರಮಗಳಿಂದ ಏನೂ ಪ್ರಯೋಜನ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry