ನಕಲಿ ಅಂಕಪಟ್ಟಿ ದಂಧೆಗೆ ಬೀಳಲಿದೆ ಕಡಿವಾಣ

7

ನಕಲಿ ಅಂಕಪಟ್ಟಿ ದಂಧೆಗೆ ಬೀಳಲಿದೆ ಕಡಿವಾಣ

Published:
Updated:
ನಕಲಿ ಅಂಕಪಟ್ಟಿ ದಂಧೆಗೆ ಬೀಳಲಿದೆ ಕಡಿವಾಣ

ದಾವಣಗೆರೆ: ಅಂಕಪಟ್ಟಿ ಕಳೆದುಹೋಯಿತು ಎಂದು ವಿದ್ಯಾರ್ಥಿಗಳು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ನೌಕರಿ ಪಡೆಯುವ ವೇಳೆ ಪ್ರಮಾಣಪತ್ರ ದೃಢೀಕರಣಗೊಂಡಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿ ಅಥವಾ ಕಂಪನಿಗಳಿಗೆ ಅಲೆಯಬೇಕಾಗಿಲ್ಲ. ನಕಲಿ ಅಂಕಪಟ್ಟಿ ನೀಡಿ ಅನರ್ಹರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಆತಂಕವನ್ನೂ ಪಡಬೇಕಾಗಿಲ್ಲ!

ಹೌದು, ಕೇಂದ್ರ ಸರ್ಕಾರವು ಮಾನವ ಸಂಪನ್ಮೂಲ ಇಲಾಖೆಯ ಮೂಲಕ ಜಾರಿಗೆ ತಂದಿರುವ ‘ರಾಷ್ಟ್ರೀಯ ಶೈಕ್ಷಣಿಕ ಕಣಜ’ (National Academic Depository) ಯೋಜನೆಯಿಂದಾಗಿ ಇನ್ನು ಮುಂದೆ ಇದು ಸಾಧ್ಯವಾಗಲಿದೆ. ದೇಶದ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೂ ವೃತ್ತಿಪರ ಕೋರ್ಸ್‌ ಸೇರಿ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಕಪಟ್ಟಿ ಹಾಗೂ ಹಲವು ಬಗೆಯ ಪ್ರಮಾಣಪತ್ರಗಳನ್ನು ಡಿಜಿಟಲೀಕರಣ ಮಾಡಿ, ಆನ್‌ಲೈನ್‌ನಲ್ಲಿ ಒಂದೆಡೆ ಲಭ್ಯವಾಗುವಂತೆ ಮಾಡುವ ಪ್ರಕ್ರಿಯೆ ‘ನ್ಯಾಡ್’ (NAD)ನಲ್ಲಿ ಈಗಾಗಲೇ ಪ್ರಾರಂಭವಾಗಿದೆ.

ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳು ‘ನ್ಯಾಡ್‌’ನಲ್ಲಿ ಹೆಸರು ನೋಂದಾಯಿಸಿಕೊಂಡು ಡಿಜಿಟಲ್‌ ಪ್ರಮಾಣಪತ್ರ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತಂದರೆ ನಕಲಿ ಅಂಕಪಟ್ಟಿ ದಂಧೆಗೆ ಕಡಿವಾಣ ಬೀಳಲಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಏನಿದು ‘ನ್ಯಾಡ್‌’?: ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್‌ ಇಂಡಿಯಾ’ದ ಭಾಗವಾಗಿ 2016ರ ನವೆಂಬರ್‌ನಲ್ಲಿ ವಿಶ್ವವಿದ್ಯಾಲಯ ಹಣಕಾಸು ಆಯೋಗದಡಿ (ಯುಜಿಸಿ) ‘ನ್ಯಾಡ್‌’ ಅಸ್ತಿತ್ವಕ್ಕೆ ಬಂತು. ಎನ್‌ಎಸ್‌ಡಿಎಲ್‌ ಡೇಟಾಬೇಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ (ಎನ್‌ಡಿಎಂಎಲ್‌) ಹಾಗೂ ಸಿಡಿಎಸ್‌ಎಲ್‌ ವೆಂಚರ್ಸ್‌ ಲಿಮಿಟೆಡ್‌ (ಸಿವಿಎಲ್‌) ಕಂಪನಿಗಳು ಶಿಕ್ಷಣ ಸಂಸ್ಥೆಗಳ ಪ್ರಮಾಣಪತ್ರಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿವೆ.

ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರ ಸೇರಿ ಎಲ್ಲ ಬಗೆಯ ಶೈಕ್ಷಣಿಕ ಚಟುವಟಿಕೆಗಳ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ‘ನ್ಯಾಡ್‌’ನಲ್ಲಿ ದಿನದ 24 ಗಂಟೆಯೂ ಡಿಜಿಟಲ್‌ ಪ್ರಮಾಣಪತ್ರಗಳು ಲಭ್ಯವಿರಲಿವೆ. ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಅಂಕಪಟ್ಟಿಗಳನ್ನು ನೋಡಬಹುದಾಗಿದೆ.

ಬಹೂಪಯೋಗಿ ವ್ಯವಸ್ಥೆ: ಈ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಪ್ರಮಾಣಪತ್ರಗಳು ಒಂದೇ ಕಡೆ ಸುರಕ್ಷಿತವಾಗಿರುತ್ತವೆ. ಅಂಕಪಟ್ಟಿ ಕಳೆದರೆ ಅದರ ಇನ್ನೊಂದು ನಕಲು ಪ್ರತಿ ಪಡೆಯಲು ವಿಶ್ವವಿದ್ಯಾಲಯಕ್ಕೆ ಅಲೆಯಬೇಕಾಗಿಲ್ಲ. ವೆಬ್‌ಸೈಟ್‌ನಿಂದ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಕಲಿ ಪ್ರಮಾಣಪತ್ರ ನೀಡಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸುವವರು ಈ ವ್ಯವಸ್ಥೆಯಿಂದಾಗಿ ಸಿಕ್ಕಿ ಬೀಳುತ್ತಾರೆ. ವಿದೇಶಗಳಲ್ಲಿರುವ ಉದ್ಯೋಗದಾತ ಕಂಪನಿಗಳೂ ಅಭ್ಯರ್ಥಿಯ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಕ್ಷಣಮಾತ್ರದಲ್ಲಿ ದೃಢೀಕರಿಸಿಕೊಳ್ಳಬಹುದು.

‘2017ನೇ ಸಾಲಿನಲ್ಲಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಗಳನ್ನು ‘ನ್ಯಾಡ್‌’ಗೆ ಲಿಂಕ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಬಗ್ಗೆ ಮೌಲ್ಯಮಾಪನ ವಿಭಾಗದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಬಳಿಕ ಮೊದಲನೇ ಹಂತದಲ್ಲಿ ಮುಂದಿನ ವರ್ಷದ ಘಟಿಕೋತ್ಸವದ ವೇಳೆಗೆ ಪಿಎಚ್‌.ಡಿ. ಪದವಿ ಪ್ರಮಾಣಪತ್ರಗಳು ‘ನ್ಯಾಡ್‌’ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ‘ನ್ಯಾಡ್‌’ ಶಾಖೆಯ ನೋಡಲ್‌ ಅಧಿಕಾರಿ ಪ್ರೊ. ರಮೇಶ ಆರ್‌. ನಾಯ್ಕ ತಿಳಿಸಿದರು.

https://cvl.nad.co.in ಅಥವಾ https://nad.ndml.in ನಲ್ಲಿ ವಿದ್ಯಾರ್ಥಿಗಳು ತಮ್ಮ ‘ಆಧಾರ್‌’ ಕಾರ್ಡ್‌ ಸಂಖ್ಯೆಯನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ನ್ಯಾಡ್‌ನ ವೆಬ್‌ಸೈಟ್‌ http://www.nad.gov.in ನೋಡಬಹುದು.

ಹರಿಹರದ ಯುವಕನೇ ಪ್ರೇರಣೆ

ನಕಲಿ ಪದವಿ ಪ್ರಮಾಣಪತ್ರಗಳ ಹಾವಳಿ ತಡೆಯಲು ಡಿಜಿಟಲ್‌ ವ್ಯವಸ್ಥೆಯನ್ನು ಜಾರಿಗೆ ತಂದು, ‘ಸ್ಮಾರ್ಟ್‌ ಕಾರ್ಡ್‌’ ವಿತರಿಸುವಂತೆ ಹರಿಹರ ತಾಲ್ಲೂಕಿನ ನಂದಿತಾವರೆಯ ಡಾ.ವಿ.ಟಿ.ಬಸವರಾಜ್‌ 2014ರ ಜೂನ್‌ 16ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ–ಮೇಲ್‌ ಮಾಡಿದ್ದರು. ‘ಒಳ್ಳೆಯ ಪ್ರಸ್ತಾವ ನೀಡಿದ್ದೀರಿ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು 2015ರಲ್ಲಿ ಪ್ರಧಾನಿ ಕಚೇರಿಯಿಂದ ಬಸವರಾಜ್‌ ಅವರಿಗೆ ಪ್ರತಿಕ್ರಿಯೆ ಬಂದಿತ್ತು. ನಂತರ ಮಾನವಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಅವರು ಈ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ ವಿಭಾಗಕ್ಕೆ ಸಲಹೆ ನೀಡುವಂತೆಯೂ ಇ–ಮೇಲ್‌ ಮಾಡಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿಯನ್ನೂ ಪ್ರಕಟಿಸಿತ್ತು.

‘ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಹೆಮ್ಮೆಯ ವಿಷಯ. 2019 ಶೈಕ್ಷಣಿಕ ಸಾಲಿನ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ಆಗ ನಕಲಿ ಅಂಕಪಟ್ಟಿ ದಂಧೆಗೆ ಕಡಿವಾಣ ಬೀಳಲಿದ್ದು, ಅರ್ಹರಿಗೇ ಕೆಲಸ ಸಿಗಲಿದೆ’ ಎಂದು ಡಾ. ಬಸವರಾಜ್‌ ಸಂತಸ ಹಂಚಿಕೊಂಡರು.

283 ಶಿಕ್ಷಣ ಸಂಸ್ಥೆಗಳ ನೋಂದಣಿ

55 ಶಾಲಾ ಶಿಕ್ಷಣ ಮಂಡಳಿಗಳು, 365 ರಾಜ್ಯ ವಿಶ್ವವಿದ್ಯಾಲಯಗಳು, 123 ಡೀಮ್ಡ್‌ ವಿಶ್ವವಿದ್ಯಾಲಯಗಳು, 47 ಕೇಂದ್ರೀಯ ವಿಶ್ವವಿದ್ಯಾಲಯಗಳು, 268 ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಐಐಎಸ್ಸಿ, ಐಐಟಿ, ಐಐಎಂನಂತಹ ಇತರೆ 107 ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ 12 ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿವರ್ಷ ಸುಮಾರು 1.5 ಕೋಟಿ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುತ್ತಿದ್ದಾರೆ. ಸಿಬಿಎಸ್‌ಸಿ, ರಾಜ್ಯ ಶಿಕ್ಷಣ ಮಂಡಳಿ ಹಾಗೂ ಐಸಿಎಸ್‌ಸಿ 3.5 ಕೋಟಿ ಪ್ರಮಾಣಪತ್ರಗಳನ್ನು ನೀಡುತ್ತಿವೆ. ‘ನ್ಯಾಡ್‌’ನಡಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಯುಜಿಸಿ ಕಳೆದ ವರ್ಷವೇ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಮೂಲಕ ಸೂಚಿಸಿದೆ. ಈಗಾಗಲೇ ಸಿವಿಎಲ್‌ನಡಿ 159 ಹಾಗೂ ಎನ್‌ಡಿಎಂಎಲ್‌ನಡಿ 124 ಶಿಕ್ಷಣ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ. 18,770 ವಿದ್ಯಾರ್ಥಿಗಳು ಸಹ ‘ನ್ಯಾಡ್‌’ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 77.14 ಲಕ್ಷ ಪ್ರಮಾಣಪತ್ರಗಳು ಈಗಾಗಲೇ ಡಿಜಿಟಲೀಕರಣಗೊಂಡಿವೆ.

**

ಈ ಅವಕಾಶ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳ ಸಮಯ, ಹಣ ಉಳಿಯಲಿದೆ. ಪ್ರಮಾಣಪತ್ರಗಳ ದೃಢೀಕರಣ ಪ್ರಕ್ರಿಯೆಯೂ ಸುಲಭವಾಗಲಿದೆ.

–ಡಾ. ನಿಜಲಿಂಗಪ್ಪ ಮಟ್ಟಿಹಾಳ, ಮೌಲ್ಯಮಾಪನ ಕುಲಸಚಿವ, ಕೆ.ಯು.ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry