ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

7

ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

Published:
Updated:

ಬೆಂಗಳೂರು: ಮೂಡಲಪಾಳ್ಯ ಸಮೀಪದ ಪಂಚಶೀಲನಗರದಲ್ಲಿ ದುಷ್ಕರ್ಮಿಗಳು ರಿಯಲ್‌ ಎಸ್ಟೇಟ್ ಏಜೆಂಟ್ ಗಣೇಶ್ (48) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಗಣೇಶ್ ಪತ್ನಿ ಉಮಾ ಹಾಗೂ ಮಗ ಅಭಿಷೇಕ್ ಗುರುವಾರ ಶಿವಮೊಗ್ಗಕ್ಕೆ ಹೋಗಿದ್ದರು. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಂತಕರು ತಲೆ, ಕೈ ಹಾಗೂ ಎದೆಗೆ ಎಂಟು ಬಾರಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ವಿಜಯನಗರ ಪೊಲೀಸರು ಹೇಳಿದ್ದಾರೆ.

ಗಣೇಶ್ ಹಾಗೂ ಉಮಾ ಇಬ್ಬರೂ ಶಿವಮೊಗ್ಗದವರು. ದಂಪತಿ 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಹಳೇ ವಾಹನಗಳ ವಿತರಕರಾಗಿದ್ದ ಗಣೇಶ್, ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿದ್ದರು. ಹಣಕಾಸಿನ ವೈಷಮ್ಯದಿಂದಲೇ ಪತಿಯ ಹತ್ಯೆ ನಡೆದಿರಬಹುದು ಎಂದು ಉಮಾ ಅನುಮಾನ ವ್ಯಕ್ತಪಡಿಸಿದ್ದಾರೆ.

‘ತವರು ಮನೆಯಲ್ಲಿ ಪೂಜೆ ಇತ್ತು. ಹೀಗಾಗಿ, ಎಲ್ಲರೂ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಪತಿ, ‘ನಾನು ನಿವೇಶನ ನೋಡಲು ಚಿತ್ತೂರಿಗೆ ಹೋಗಬೇಕು. ನೀನು ಮಗನನ್ನು ಕರೆದುಕೊಂಡು ಊರಿಗೆ ಹೋಗಿರು. ನಾನು ಶನಿವಾರ ಮಧ್ಯಾಹ್ನ ಬಂದು ಬಿಡುತ್ತೇನೆ’ ಎಂದು ಹೇಳಿ ನಮ್ಮಿಬ್ಬರನ್ನೇ ಕಳುಹಿಸಿದ್ದರು’ ಎಂದು ಉಮಾ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.

‘ಮರುದಿನ ಮ‌ಧ್ಯಾಹ್ನ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ. ಚಿತ್ತೂರಿಗೆ ಹೋಗಿರಬಹುದೆಂದು ಸುಮ್ಮನಾದೆ. ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಕರೆ ಮಾಡುತ್ತಿದ್ದರೂ ಅವರಿಂದ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ, ಪೂಜೆ ಮುಗಿಸಿಕೊಂಡು ಅದೇ ದಿನ ಮಧ್ಯಾಹ್ನ ನಗರಕ್ಕೆ ಮರಳಿದೆವು. ಮನೆಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಒಳಗೆ ಹೋಗಿ ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು’ ಎಂದು ಹೇಳಿದ್ದಾರೆ.

‘ನಿರ್ದಿಷ್ಟವಾಗಿ ಯಾವ ಸಮಯಕ್ಕೆ ಹತ್ಯೆ ನಡೆದಿದೆ ಎಂಬುದು ಗೊತ್ತಾದರೆ ತನಿಖೆಗೆ ಅನುಕೂಲವಾಗುತ್ತದೆ. ಹೀಗಾಗಿ, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಮೃತರ ಕೆಲ ಸ್ನೇಹಿತರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry