ಅಡಿಕೆ ಸಿಪ್ಪೆ ರಾಶಿ: ಪ್ರಯಾಣಿಕರಿಗೆ ಕಿರಿಕಿರಿ

7

ಅಡಿಕೆ ಸಿಪ್ಪೆ ರಾಶಿ: ಪ್ರಯಾಣಿಕರಿಗೆ ಕಿರಿಕಿರಿ

Published:
Updated:
ಅಡಿಕೆ ಸಿಪ್ಪೆ ರಾಶಿ: ಪ್ರಯಾಣಿಕರಿಗೆ ಕಿರಿಕಿರಿ

ಶಿವಮೊಗ್ಗ: ರಸ್ತೆ ಮಗ್ಗುಲಲ್ಲಿ ಸುರಿಯುತ್ತಿರುವ ಅಡಿಕೆ ಸಿಪ್ಪೆ ಹಾಗೂ ಕಸದ ರಾಶಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಹೌದು, ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಕೆಲ ಬೆಳೆಗಾರರು, ವರ್ತಕರು ಅಡಿಕೆಯನ್ನು ಸುಲಿಸಿ ಸಿಪ್ಪೆಯನ್ನು ರಸ್ತೆ ಪಕ್ಕಕ್ಕೆ ತಂದು ಸುರಿಯುತ್ತಿದ್ದಾರೆ. ಇದರಿಂದ ಪ್ರಯಾಣಿಕರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದಲೂ ಇಂತಹದೇ ಸನ್ನಿವೇಶ ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಮೌನ ವಹಿಸುತ್ತಿದ್ದಾರೆ.

ಪ್ರತಿವರ್ಷ ಶಿವಮೊಗ್ಗ ನಗರಕ್ಕೆ ಅಂಟಿಕೊಂಡಿರುವ ಹರಕೆರೆ, ಹೊಸಳ್ಳಿ, ಲಕ್ಷ್ಮೀಪುರ, ಒಡ್ಡಿನಕೊಪ್ಪ, ಸಂತೆಕಡೂರು, ಗೊಂದಿ ಚಟ್ನಳ್ಳಿ, ತ್ಯಾವರೆ ಚಟ್ನಹಳ್ಳಿ, ಹನಸವಾಡಿ, ಗುರುಪುರ, ಹೊಳೆ ಬೆನವಳ್ಳಿ, ಪಿಳ್ಳಂಗಿರಿ, ಚನ್ನಾಮುಂಬಾಪುರ, ಅಬ್ಬಲಗೆರೆ ಹೀಗೆ ಸುತ್ತಮುತ್ತಲ ರಸ್ತೆಯ ಇಕ್ಕೆಲಗಳಲ್ಲಿ ಕೆಲವರು ಅಡಿಕೆ ಸಿಪ್ಪೆ ಸುರಿದು ಅದಕ್ಕೆ ಬೆಂಕಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಬೆಳೆಗಾರರು ಅಡಿಕೆ ಸಿಪ್ಪೆಯನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಮರುಬಳಕೆಗೆ ನಿರ್ಲಕ್ಷ್ಯ: ಅಡಿಕೆ ಬೆಳೆಗಾರರು ಹಾಗೂ ವರ್ತಕರು ಸಿಪ್ಪೆಯ ಮರುಬಳಕೆಗೆ ಚಿಂತನೆ ನಡೆಸದೆ ರಸ್ತೆಯ ಪಕ್ಕದಲ್ಲೇ ಹಾಕುತ್ತಿರುವುದರಿಂದ ವಾಹನಗಳು ದಿನಂಪ್ರತಿ ಸಂಚರಿಸಿ ಸಿಪ್ಪೆಯ ರಾಶಿ ರಸ್ತೆಯನ್ನು ಆವರಿಸಿಕೊಳ್ಳುತ್ತಿವೆ. ಇದರಿಂದ ವಾಹನಗಳು ನಿಯಂತ್ರಣಕ್ಕೆ ಸಿಗದಂತಾಗುತ್ತಿವೆ. ಕೆಲವೊಮ್ಮೆ ರಸ್ತೆಯಲ್ಲಿಯ ಗುಂಡಿಗಳು ಕಾಣಸಿಗದೇ ಸಮಸ್ಯೆಗೆ ಸಿಲುಕುವಂತಾಗಿದೆ. ಇನ್ನು ಸಿಪ್ಪೆಯ ಗುಡ್ಡೆಗಳು ಕೊಳೆತು ನಾರುವುದರ ಕೊಳೆತ ವಾಸನೆ ಕುಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದಟ್ಟ ಹೊಗೆ: ಸಿಪ್ಪೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಬೆಂಕಿ ಹಾಕಿದಾಗ ದಟ್ಟ ಹೊಗೆ ಕವಿಯುವುದರಿಂದ ಹಾಗೂ ವಾಸನೆಯಿಂದಾಗಿ ವಾಹನ ಚಾಲಕರು ವಿಚಲಿತರಾಗುತ್ತಿದ್ದಾರೆ. ಹೊಗೆಯ ದಟ್ಟಣೆ ಕೆಲವೊಮ್ಮೆ ಅಪಾಯಕ್ಕೂ ಎಡೆಮಾಡಿಕೊಟ್ಟಿದೆ. ತೀರ್ಥಹಳ್ಳಿ ಮತ್ತು ಹೊನ್ನಾಳಿ ರಸ್ತೆಗಳಲ್ಲಿ ಇದೇ ಕಾರಣಕ್ಕೆ ಇತ್ತೀಚೆಗೆ ಅನಾಹುತಗಳು ನಡೆದಿದ್ದು, ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯಗಳೊಂದಿಗೆ ಬೈಕ್‌ ಸವಾರರು ಪಾರಾಗಿದ್ದಾರೆ.

ಗಿಡಿ–ಮರ ನಾಶ: ಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲಿ ಹುಣಸೆ, ಬೇವು, ನೇರಳೆ ಮರಗಳು ಅನೇಕ ವರ್ಷಗಳಿಂದ ಹುಲುಸಾಗಿ ಬೆಳೆದು ರಸ್ತೆಯ ಸೌಂದರ್ಯವನ್ನು ಹೆಚ್ಚಿಸಿವೆ. ಆದರೆ, ಕೆಲವರು ಅಡಿಕೆ ಸಿಪ್ಪೆಗೆ ಬೆಂಕಿ ಹಾಕುತ್ತಿರುವುದರಿಂದ ರಸ್ತೆ ಬದಿಯ ಗಿಡಮರಗಳು ಬೆಂಕಿಗೆ ಆಹುತಿಯಾಗುತ್ತಿವೆ. ಈಗಾಗಲೇ ಬಿಸಿಲ ಝಳ ಹೆಚ್ಚಾಗಿದ್ದು, ಬೆಂಕಿ ವ್ಯಾಪಿಸುವ ಆತಂಕವೂ ಶುರುವಾಗಿದೆ.

ಈ ಸಮಸ್ಯೆಗಳನ್ನು ಮನಗಂಡ ಲೋಕೋಪಯೋಗಿ ಇಲಾಖೆ ಎರಡು ವರ್ಷಗಳ ಹಿಂದೆ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು. ಕೆಲ ರೈತರ ವಿರುದ್ಧ ದೂರನ್ನೂ ದಾಖಲಿಸುವ ಎಚ್ಚರಿಕೆ ನೀಡಿ, ಸಿಪ್ಪೆ ತೆರವುಗೊಳಿಸಿತ್ತು. ಇದರಿಂದಾಗಿ ಕೆಲಕಾಲ ಇದಕ್ಕೆ ಕಡಿವಾಣವೂ ಬಿದ್ದಿತ್ತು. ಆದರೆ, ಈಗ ಪುನರಾವರ್ತನೆಯಾಗಿದೆ. ಇಂತಹ ಮನಸ್ಥಿತಿಯಿಂದ ಹೊರಬಂದು ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಸುಂದರ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

* * 

ರೈತರು ಹಾಗೂ ವರ್ತಕರು ರಸ್ತೆ ಬದಿಯಲ್ಲಿ ಅಡಿಕೆ ಸಿಪ್ಪೆ, ಕಸದ ರಾಶಿ ಹಾಕುತ್ತಿರುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ

ಪ್ರಶಾಂತ್, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry