ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

7

ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

Published:
Updated:
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

ಚಾಮರಾಜನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು. ನಗರದ ಹಳೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಭಾನುವಾರ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಲ್ಲಿ ನಿಲ್ತೀನಿ, ಇಲ್ಲಿ ನಿಲ್ತೀನಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಅವರು ನಿಲ್ಲಲಿ. ಜನರು ಕಲಿಸುವ ಪಾಠ ಗೊತ್ತಾಗಲಿ. ಇನ್ನು ನಾಲ್ಕು ತಿಂಗಳು ಕಾಯಿರಿ. ಜನ ಅವರ ನಿಜವಾದ ಬಣ್ಣ ಬಯಲು ಮಾಡುತ್ತಾರೆ ಎಂದು ಲೇವಡಿ ಮಾಡಿದರು.

‘ಮೈಸೂರು, ಚಾಮರಾಜನಗರ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ನಾನು ನೀಡಿದ ಕೊಡುಗೆ ಏನು ಎಂಬುದನ್ನು ಜನರ ಮುಂದಿಡಿ. ಸತ್ಯ ಸಂಗತಿ ಗೊತ್ತಾಗಲಿ’ ಎಂದರು.

‘ಸಿದ್ದರಾಮಯ್ಯ ಅವರು ಹೋದಲ್ಲೆಲ್ಲ, ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ವ್ಯಂಗ್ಯವಾಡುತ್ತಾರೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗೆ ಓಡಾಡುತ್ತಿರುವುದು ನಿಜವಲ್ಲವೇ? ನನಗೆ ಜಾಮೀನು ಸಿಗದ ಕಾರಣ ಜೈಲಿಗೆ ಹೋದೆ. ಅಪರಾಧಿಯಾಗಿ ಅಲ್ಲ. ಹೀಗೆ ಹೇಳುವುದರಿಂದ ಲಾಭ ಆಗುತ್ತದೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಜನ ಅದರಿಂದ ಬೇಸೆತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ಹೇಳಿದರು.

ಇದು ಲಜ್ಜೆಗೆಟ್ಟ ಸರ್ಕಾರ. ಮರುಳು ನೀತಿ ಅವೈಜ್ಞಾನಿಕ, ಸರ್ಕಾರಕ್ಕೆ ಮೆದುಳಿಲ್ಲ ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ. ಅಧಿಕಾರಿಗಳನ್ನು ಮನಬಂದಂತೆ ವರ್ಗಾವಣೆ ಮಾಡುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಸಮಿತಿಯೊಂದು ವರದಿ ನೀಡಿದೆ. ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆದರೆ, ಬೆಂಗಳೂರಿನಲ್ಲಿಯೇ ರಾತ್ರಿ 8–9 ಗಂಟೆ ವೇಳೆಗೆ ಹೆಣ್ಣುಮಕ್ಕಳು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಬದುಕಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಇದುವರೆಗೂ ಶೇ 40–50ರಷ್ಟು ಮಾತ್ರ ಹಣ ಖರ್ಚು ಮಾಡಿದೆ. ಉಳಿದ ₹80,000 ಕೋಟಿಯನ್ನು ಮೂರು ತಿಂಗಳಲ್ಲಿ ಹೇಗೆ ವೆಚ್ಚ ಮಾಡುತ್ತದೆ? ಬಿಲ್‌ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ. ಇದು ತಲೆತಿರುಕ ಸರ್ಕಾರ ಎಂದು ಟೀಕಿಸಿದರು.

‘...ಉಂಡೋನೆ ಜಾಣ’:

‘ಕಾಮಗಾರಿಗಳಿಗೆ ಮಾಡಿದ ವೆಚ್ಚಗಳಿಗೆ ಲೆಕ್ಕವೇ ಇಲ್ಲ. ₹100 ಕೋಟಿಯ ಕಾಮಗಾರಿಗೆ ₹125 ಕೋಟಿ ತೋರಿಸುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅಂದಾಜುವೆಚ್ಚದ ಪರಿಶೀಲನೆ ನಡೆಸಿ ವಂಚನೆಯಾಗದಂತೆ ನೋಡಿಕೊಳ್ಳಲೆಂದೇ ಸಮಿತಿಯೊಂದನ್ನು ರಚಿಸಿದ್ದೆ. ಈಗ ಹುಚ್ಚುಮುಂಡೆ ಮದುವೇಲಿ ಉಂಡೋನೆ ಜಾಣ ಎಂಬ ಗಾದೆಯಂತೆ ಸರ್ಕಾರ ನಡೆಯುತ್ತಿದೆ. ಈ ಪದ ಬಳಕೆಗೆ ತಾಯಂದಿರು ಕ್ಷಮಿಸಬೇಕು. ರಾಜ್ಯದ ಸ್ಥಿತಿ ಈ ರೀತಿ ಹೇಳುವಂತೆ ಮಾಡುತ್ತಿದೆ ಎಂದರು.

ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್‌ ಹೀಗೆ ಎಲ್ಲರ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಆ ನೈತಿಕ ಅರ್ಹತೆ ಇಲ್ಲ. 80 ಸೀಟುಗಳಲ್ಲಿ ಯೋಗಿ 71 ಸೀಟುಗಳನ್ನು ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದಿದ್ದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮಾತ್ರ ಎಂದು ಲೇವಡಿ ಮಾಡಿದರು.

‘ಸಿದ್ದರಾಮಯ್ಯ ಅವರೇ, ನೀವು ಹಗುರವಾಗಿ ಮಾತನಾಡುವ ವೇದಿಕೆಯ ನೆಲವೇ ಕುಸಿದುಹೋಗಲಿದೆ. ಜನರು ಈಗಲೇ ತೀರ್ಮಾನ ತೆಗೆದುಕೊಳ್ಳಿ. 5 ವರ್ಷ ನೆಮ್ಮದಿ, ಗೌರವಯುತ ಮತ್ತು ಸ್ವಾಭಿಮಾನದ ಬದುಕಿನ ಭರವಸೆ ನೀಡುತ್ತೇನೆ. ಆ ಪುಣ್ಯಾತ್ಮನ ಕೈಗೆ ಸಿಕ್ಕಿ ಏಕೆ ನರಳುತ್ತೀರಿ’ ಎಂದರು.

‘75–80 ದಿನದಿಂದ 208 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿದ್ದೇನೆ. 1.75 ಕೋಟಿ ಜನರ ಎದುರು ಮಾತನಾಡಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ. ಸಿದ್ದರಾಮಯ್ಯಗೂ ಅದೇ ಚಿಂತೆಯಾಗಿರುವುದು. ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡವನು. ಎಲ್ಲ ತಾಯಂದಿರು ಪೂಜೆ ಮಾಡುವಾಗ ಯಡಿಯೂರಪ್ಪನ ಆರೋಗ್ಯ ಚೆನ್ನಾಗಿರಲಿ ಎಂದು ಒಂದು ಹೂವನ್ನು ಹಾಕಿ. ಸಿದ್ದರಾಮಯ್ಯನ ಕಥೆ ಏನಾಗುತ್ತದೆ ನೋಡಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ರೇಣುಕಾಚಾರ್ಯ, ಎಸ್‌.ಎ. ರಾಮದಾಸ್‌, ಪರಿಮಳಾನಾಗಪ್ಪ, ಶಿವಣ್ಣ, ಸಿ. ಗುರುಸ್ವಾಮಿ, ನಾಗಶ್ರೀ, ಸಿ.ಎನ್. ಬಾಲರಾಜು, ಜಿ. ನಿಜಗುಣರಾಜು, ಡಾ.ಎ.ಆರ್. ಬಾಬು, ನಾಗೇಂದ್ರಸ್ವಾಮಿ, ಮಲ್ಲೇಶ್‌ ಶಾಂತಮೂರ್ತಿ ಹಾಜರಿದ್ದರು.

ಬಾಲಕಿ ಬರೆದ ಪತ್ರ

ಕಾರ್ಯಕ್ರಮ ನಡೆಯುವ ವೇಳೆಗೆ ಬಾಲಕಿಯೊಬ್ಬಳು ವೇದಿಕೆಗೆ ತೆರಳಿ ಯಡಿಯೂರಪ್ಪ ಅವರಿಗೆ ಪತ್ರ ನೀಡಿದಳು. ಭಾಷಣದ ಆರಂಭದಲ್ಲಿ ಆ ಪತ್ರವನ್ನು ಓದಿದ ಯಡಿಯೂರಪ್ಪ, ಅಧಿಕಾರಿಗಳಿಗೆ ಸರ್ಕಾರ ನೀಡಿದ ಕಿರುಕುಳ, ಹತ್ಯೆ ಪ್ರಕರಣಗಳ ಬಗ್ಗೆ ಏಕೆ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಕೇಳಿದ್ದಾಳೆ ಎಂದು ತಿಳಿಸಿದರು.

ಈ ಪತ್ರವನ್ನು ಚೌಕಟ್ಟು ಹಾಕಿಸಿ ಇಡುತ್ತೇನೆ. ದುರಾಡಳಿತದ ವಿರುದ್ಧ ಮಕ್ಕಳು ಬರೆಯುವ ಮಟ್ಟಕ್ಕೆ ಸಿದ್ದರಾಮಯ್ಯ ಸರ್ಕಾರ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಪಿತೂರಿಗಾರ’

ಚಾಮರಾಜನಗರ: ‘ಹುನ್ನಾರ ಮತ್ತು ಒಳಸಂಚು ನಡೆಸುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ’ ಎಂದು ಬಿಜೆಪಿ ಮುಖಂಡ ಶ್ರೀನಿವಾಸಪ್ರಸಾದ್‌ ಟೀಕಿಸಿದರು. ಜಿ. ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಾಗಲಿದ್ದಾರೆ ಎಂದು ಪಿತೂರಿ ನಡೆಸಿ ಅವರು ಸೋಲುವಂತೆ ಮಾಡಿದರು. ಬೇರೆಯವರ ಬೆಳವಣಿಗೆಯನ್ನು ಅವರು ಸಹಿಸುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಡೋಂಗಿ ಜಾತ್ಯತೀತವಾದಿ. ಸಮಾಜವಾದಿಯಲ್ಲ, ಅವರು ಮಜಾವಾದಿ. ಅವರ ಮಾತಿಗೂ ಕೃತಿಗೂ ಬಹಳ ವ್ಯತ್ಯಾಸವಿದೆ. 12 ವರ್ಷ ಹಣಕಾಸು ಸಚಿವನಾಗಿದ್ದೇನೆ ಎನ್ನುತ್ತಾರೆ. ₹1.30 ಲಕ್ಷ ಕೋಟಿ ಸಾಲದ ಹೊರೆ ಇದೆ. ಅವರ ಸಾಧನೆ ನಗು ತರುತ್ತಿದೆ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry