ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

7

ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

Published:
Updated:
ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

ಹೊಸದುರ್ಗ: ತಾಲ್ಲೂಕಿನ ಸೋಮಸಂದ್ರದ ರಾಜ್ಯ ಹೆದ್ದಾರಿ ಬದಿಯ ದೊಡ್ಡ ಹುಣಸೆ ಮರಗಳನ್ನು ಕಿಡಿಗೇಡಿಗಳು ಕಡಿಯುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಕಳೆದ ವರ್ಷ ಪರಿಸರ ಸಮತೋಲನ ಕಾಪಾಡಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಕೋಟಿ ವೃಕ್ಷ ಆಂದೋಲನ ಅನುಷ್ಠಾನಗೊಳಿಸಿತ್ತು. ಈ ಆಂದೋಲದಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವೆಡೆ ಸಸಿ ನೆಡಲಾಯಿತು. ಸಮೃದ್ಧ ಮಳೆ, ಬೆಳೆಗೆ ಹಾಗೂ ಜೀವಸಂಕುಲದ ಅಸ್ತಿತ್ವಕ್ಕೆ ಯಥೇಚ್ಛವಾಗಿ ಗಿಡ–ಮರ ಬೆಳೆಸಬೇಕು ಎಂಬ ಜನಜಾಗೃತಿ ಜಗತ್ತಿನೆಲ್ಲೆಡೆ ನಡೆಯುತ್ತಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳನ್ನು ಕಡಿದು ಹಾಕಿದ್ದಾರೆ. ಸೋಮಸಂದ್ರ ಬಳಿ 3 ಹಾಗೂ ಗರೀಂಬೀಳು ಬಳಿ 1 ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಟ್ಟು 4 ದೊಡ್ಡ ಹುಣಸೆ ಮರಗಳನ್ನು ವ್ಯಾಪಾರ ವಹಿವಾಟಿಗಾಗಿ ನೆಲಕ್ಕುರುಳಿಸಿದ್ದಾರೆ. ಏಕೆ ಮರ ಕಡಿಯು ತ್ತೀರಾ ಎಂದು ಕೇಳಿದರೆ ಮಾಹಿತಿ ಹೇಳುತ್ತಿಲ್ಲ.

ಇನ್ನೂ ಕೆಲವರು ಮರದ ಸ್ವಾಲೆ ಜಮೀನಿಗೆ ಆಗುತ್ತದೆ. ಇದರಿಂದ ಹೊಲದಲ್ಲಿ ಬೆಳೆ ಸಮೃದ್ಧವಾಗಿ ಆಗುವು ದಿಲ್ಲವೆಂದು ಯಾರಿಗೂ ಕಾಣಿಸದಂತೆ ಮರದ ಬುಡದ ಒಂದು ಭಾಗಕ್ಕೆ ಆಗಾಗ ಬೆಂಕಿ ಇಡುತ್ತಿದ್ದಾರೆ. ಮರವು ತನ್ನ ಬುಡದ ಅಸ್ತಿತ್ವ ಕಳೆದುಕೊಂಡಾಗ ರಸ್ತೆಗೆ ಉರುಳುತ್ತದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂಬ ನೆಪದಲ್ಲಿ ಇಟ್ಟಿಗೆ ಸುಡುವವರು ಮರ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನು ತ್ತಾರೆ ಹೊಸದುರ್ಗದ ಸಮಾಜ ಸೇವಕ ಎ.ಆರ್‌.ಶಮಂತ್‌.

ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಸದ್ದಿಲ್ಲದೆ ನಡೆಯುತ್ತಿರುವ ಇಂತಹ ಕೃತ್ಯದಿಂದಾಗಿ ರಸ್ತೆ ಬದಿಯಲ್ಲಿದ್ದ ಹಳೆಯ ಮರಗಳು ಕಣ್ಮರೆಯಾಗುತ್ತಿದ್ದು, ದಾರಿ ಹೋಕರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಮರಗಳು ಇಲ್ಲವಾಗುತ್ತಿವೆ. ಕಾಯ್ದಿರಿಸಿದ ಕುದುರೆ ಕಣಿವೆ, ಲಕ್ಕಿಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಗಳು ಕಣ್ಮರೆಯಾಗುತ್ತಿವೆ. ಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂಬುದು ಪರಿಸರ ಪ್ರಿಯರ ಮನವಿ.

* * 

ಮರ ಕಡಿದಿರುವ ಬಗ್ಗೆ ನಮ್ಮ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು

ಡಿ.ಭರತ್‌, ವಲಯ ಅರಣ್ಯಾಧಿಕಾರಿ ಹೊಸದುರ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry