ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಎದುರು ವಯೋವೃದ್ಧ ತಾಯಿಯ ಧರಣಿ

Last Updated 23 ಜನವರಿ 2018, 8:56 IST
ಅಕ್ಷರ ಗಾತ್ರ

ಕೋಲಾರ: ಮಗನಿಂದ ಮನೆ ಬಿಡಿಸಿ ಕೊಡುವಂತೆ ಒತ್ತಾಯಿಸಿ ರಾಧಾಬಾಯಿ ಎಂಬುವರು ನಗರ ಪೊಲೀಸ್‌ ಠಾಣೆ ಎದುರು ಸೋಮವಾರ ವಿಷದ ಬಾಟಲಿ ಹಿಡಿದು ಧರಣಿ ನಡೆಸಿದರು.

ರಾಧಾಬಾಯಿ ನಗರದ ಕೀಲುಕೋಟೆ ನಿವಾಸಿಯಾಗಿದ್ದು, ಅವರ ಮಗ ರೆಡ್ಡಿ ರಾಮಮೋಹನ್‌ ರಾವ್‌ ತಾಲ್ಲೂಕಿನ ವೇಮಗಲ್‌ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದಾರೆ.

‘ಕಿರಿಯ ಮಗ ರಾಮಮೋಹನ್‌ ರಾವ್‌ ನನ್ನ ಹೆಸರಿನಲ್ಲಿದ್ದ ಮನೆಯನ್ನು ತನ್ನ ಪತ್ನಿ ಲತಾಬಾಯಿ ಹೆಸರಿಗೆ ಬರೆಸಿಕೊಂಡು ಬೀದಿಪಾಲು ಮಾಡಿದ್ದಾನೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ದೂರು ನೀಡಿದ್ದೆ. ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಯು ಮಗನಿಂದ ಮನೆ ಬಿಡಿಸಿಕೊಡುವಂತೆ ಆದೇಶ ಮಾಡಿದ್ದಾರೆ. ಆದರೆ, ಪೊಲೀಸರು ಆದೇಶ ಪಾಲಿಸುತ್ತಿಲ್ಲ’ ಎಂದು ರಾಧಾಬಾಯಿ ಕಣ್ಣೀರಿಟ್ಟರು.

ವಿದ್ಯಾರ್ಥಿನಿಲಯದಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ ಮನೆ ಖರೀದಿಸಿದ್ದೆ. ಪತಿ ಕೃಷ್ಣಮೂರ್ತಿ ಹಾಗೂ ಹಿರಿಯ ಮಗ ರಾಧಾಕೃಷ್ಣರೆಡ್ಡಿ ಮೃತಪಟ್ಟಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಿರಿಯ ಮಗ ಮನೆ ಬರೆಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಿದರು.

ಮನೆ ಬಿಟ್ಟು ಕೊಡುವಂತೆ ಕೇಳಿದರೆ ಮಗ ಕೊಲೆ ಬೆದರಿಕೆ ಹಾಕುತ್ತಾನೆ. ಮನೆಯೂ ಇಲ್ಲದೆ ಜೀವನ ನಿರ್ವಹಣೆಗೆ ಹಣವೂ ಇಲ್ಲದೆ ಸಾಕಷ್ಟು ಸಮಸ್ಯೆಯಾಗಿದೆ. ಪೊಲೀಸರು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿ ಕಾರಿಯ ಆದೇಶ ಪಾಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಪೊಲೀಸರು ಮಗನಿಂದ ಮನೆ ವಾಪಸ್‌ ಕೊಡಸದಿದ್ದರೆ ಠಾಣೆ ಎದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ
ಹಾಕಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಸಿಬ್ಬಂದಿಗೆ ಕರೆ ಮಾಡಿ ರಾಮಮೋಹನ್‌ ರಾವ್‌ ಅವರನ್ನು ಮಂಗಳವಾರ (ಜ.23) ಠಾಣೆಗೆ ಕರೆಸಿ ಪ್ರಕರಣ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು. ಬಳಿಕ ರಾಧಾಬಾಯಿ ಧರಣಿ ಕೈಬಿಟ್ಟು ಮನೆಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT