ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

7

ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

Published:
Updated:
ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

ಚಿಕ್ಕಬಳ್ಳಾಪುರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಒಳಗೆ ಎಪಿಎಂಸಿ ಕಚೇರಿ ಬಳಿಯಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ನೀಡಲು ಸೋಮವಾರ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಎಪಿಎಂಸಿ ಒಳಗೆ ಕ್ಯಾಂಟೀನ್‌ಗೆ ಜಾಗ ನೀಡುವ ನಿರ್ಧಾರಕ್ಕೆ ಸದಸ್ಯ ಕೆ.ಎಸ್. ಕೃಷ್ಣಾರೆಡ್ಡಿ ವಿರೋಧ ವ್ಯಕ್ತಪಡಿಸಿದರು. ಆದರೂ ಅವರ ಮಾತಿಗೆ ಧ್ವನಿಗೂಡಿಸುವವರು ಇಲ್ಲದೆ ಹೋದ ಕಾರಣಕ್ಕೆ ಹೆಚ್ಚಿನ ವಿರೋಧವಿಲ್ಲದೆ ಕ್ಯಾಂಟೀನ್ಗೆ ಸ್ಥಳ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಜಾಗ ನೀಡುವ ನಿರ್ಧಾರ ವಿರೋಧಿಸಿ ಮಾತನಾಡಿದ ಕೃಷ್ಣಾರೆಡ್ಡಿ, ‘ಇಂದಿರಾ ಕ್ಯಾಂಟೀನ್ ಕೇವಲ ಚುನಾವಣೆ ದೃಷ್ಟಿಯಿಂದ ಮಾಡಿರುವ ಯೋಜನೆ. ಅದು ಎಲ್ಲಿಯವರೆಗೂ ನಡೆಯುತ್ತೋ ಗೊತ್ತಿಲ್ಲ. ಎಪಿಎಂಸಿ ಒಳಗೆ ಕ್ಯಾಂಟೀನ್ ತೆರೆಯುವುದರಿಂದ ಜನ ಮತ್ತು ವಾಹನ ದಟ್ಟಣೆ ಹೆಚ್ಚಲಿದೆ. ಇದರಿಂದ ವರ್ತಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಎಪಿಎಂಸಿ ಹೊರಗಡೆ ಪರ್ಯಾಯ ಜಾಗ ನೀಡಿದರೆ ಉತ್ತಮ’ ಎಂದು ಸಲಹೆ ನೀಡಿದರು.

ಈ ವೇಳೆ ಎಪಿಎಂಸಿ ಅಧ್ಯಕ್ಷ ಎಚ್‌.ವಿ.ಗೋವಿಂದಸ್ವಾಮಿ ಮಾತನಾಡಿ, ‘ನಮ್ಮ ಪ್ರಾಂಗಣದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸ್ಥಳ ಸೂಕ್ತ ಎಂದು ಜಿಲ್ಲಾಧಿಕಾರಿ ಅವರು ಈಗಾಗಲೇ ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಚೇರಿ ಬಳಿ ಇರುವ 40*60 ಅಳತೆಯ ನಿವೇಶನವನ್ನು ಕ್ಯಾಂಟೀನ್ಗಾಗಿ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ’ ಎಂದು ಹೇಳಿದರು.

‘ಸದ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಉದ್ದೇಶಿಸಿರುವ ಜಾಗವನ್ನು ಅಂಚೆ ಇಲಾಖೆಗೆ ಮೀಸಲಾಗಿಡಲಾಗಿತ್ತು. ಅವರಿಗೆ ಜಾಗ ಬೇಕು ಎಂದರೆ ಪರ್ಯಾಯವಾಗಿ ಬೇರೆ ಕಡೆ ಒದಗಿಸೋಣ. ವಾಹನ ದಟ್ಟಣೆ ಹೆಚ್ಚಾಗದಂತೆ ಮಾರ್ಗೋಪಾಯ ಕಂಡುಕೊಳ್ಳೋಣ’ ಎನ್ನುತ್ತಿದ್ದಂತೆ ಸಭೆಯಲ್ಲಿದ್ದ ಸದಸ್ಯರೆಲ್ಲರೂ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ನೀಡಲು ಸಹಮತ ವ್ಯಕ್ತಪಡಿಸಿದರು.

ಇದೇ ವೇಳೆ ಕೃಷ್ಣಾರೆಡ್ಡಿ, ‘ರಾತ್ರಿ ವೇಳೆ ಮಾರುಕಟ್ಟೆ ಪ್ರಾಂಗಣ ಕುಡುಕರ ತಾಣ ಮಾರ್ಪಾಡುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಮಾರುಕಟ್ಟೆ ಪ್ರವೇಶದ್ವಾರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು. ಗೇಟ್‌ ಅಳವಡಿಸಬೇಕು. ಸಂಜೆ ಐದು ಗಂಟೆ ನಂತರ ಮಾರುಕಟ್ಟೆಯಲ್ಲಿ ಹೊರಗಿನ ಜನರು ಸುಳಿಯದಂತೆ ನಿಗಾ ಇಡುವ ಕೆಲಸವಾಗಬೇಕು. ಸಿಸಿಟಿವಿ ಅಳವಡಿಸುವ ಅಥವಾ ಇತರ ತಂತ್ರಜ್ಞಾನ ಬಳಸಬೇಕು’ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಜಾಲಪ್ಪ ಮಾತನಾಡಿ, ‘ಸದ್ಯ ಮಾರುಕಟ್ಟೆಗೆ ಇರುವ ಪ್ರವೇಶದ್ವಾರ ತುಂಬಾ ಕಿರಿದಾಗಿವೆ. ಇದರಿಂದ ಮಾರುಕಟ್ಟೆಗೆ ಬರುವ ವಾಹನಗಳು ತಿರುವು ಪಡೆಯಲು ತೊಂದರೆಯಾಗಿ ಎಂ.ಜಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಾಣಿಸಿಕೊಂಡು ಇದರಿಂದ ಪಾದಚಾರಿಗಳು, ಸವಾರರಿಗೆ ಪದೇ ಪದೇ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರವೇಶದ್ವಾರ ವಿಸ್ತರಣೆ ಮಾಡುವ ಮೂಲಕ ಈ ಸಮಸ್ಯೆ ಬಗೆಹರಿಸಬೇಕಿದೆ’ ಎಂದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಿಡುಗಡೆಯಾಗಿರುವ ₹ 30 ಲಕ್ಷ ವೆಚ್ಚದಲ್ಲಿ ಬಹಿರಂಗ ಹರಾಜು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಕ್ಕೆ, ನಿಶ್ಚಿತ ಠೇವಣಿಯನ್ನು ಆಯಾ ಬ್ಯಾಂಕ್‌ಗಳಲ್ಲೇ ಮುಂದುವರೆಸುವುದಕ್ಕೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಸದಸ್ಯರಾದ ಮಿಲ್ಟನ್ ವೆಂಕಟೇಶ್, ಬಿ.ಎಸ್. ಲೀಲಾವತಿ, ನಾಗಲಕ್ಷ್ಮಿ, ನಾರಾಯಣಸ್ವಾಮಿ, ಹನುಮಪ್ಪ, ಡಿ. ನಾರಾಯಣಸ್ವಾಮಿ, ಸರ್ಕಾರಿ ನಾಮನಿರ್ದೇಶಕರಾದ ಅಶ್ವತ್ಥಮ್ಮ, ಡಿ.ಆರ್. ನರಸಿಂಹಮೂರ್ತಿ, ಕೆ.ಎಸ್. ನಾರಾಯಣಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಸಿ. ರಾಮದಾಸು ಇದ್ದರು.

* * 

ಎಪಿಎಂಸಿ ಒಳಗೆ ಇಂದಿರಾ ಕ್ಯಾಂಟಿನ್ ತೆರೆಯುವುದರಿಂದ ಮಾರುಕಟ್ಟೆಗೆ ಬರುವ ರೈತರಿಗೆ, ಕಾರ್ಮಿಕರಿಗೆ ತುಂಬಾ ಅನುಕೂಲವಾಗಲಿದೆ ಎಚ್‌.ವಿ.ಗೋವಿಂದಸ್ವಾಮಿ ಎಪಿಎಂಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry