‘ಶಸ್ತ್ರಚಿಕಿತ್ಸಕ ರಾಜಕಾರಣ ಇಂದಿನ ಅಗತ್ಯ’

7

‘ಶಸ್ತ್ರಚಿಕಿತ್ಸಕ ರಾಜಕಾರಣ ಇಂದಿನ ಅಗತ್ಯ’

Published:
Updated:
‘ಶಸ್ತ್ರಚಿಕಿತ್ಸಕ ರಾಜಕಾರಣ ಇಂದಿನ ಅಗತ್ಯ’

ಚಿತ್ರದುರ್ಗ: 'ಪ್ರಸ್ತುತ ಇರುವ 'ಕಟುಕ' ರಾಜಕಾರಣಕ್ಕೆ 'ಕಟ್ಟುವ' ರಾಜಕಾರಣ ಮುಖಾಮುಖಿಯಾಗಬೇಕಿದೆ' ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಂಡಳಿ ಸದಸ್ಯ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಆಶಯ ಮಾತುಗಳನ್ನಾಡಿದ ಅವರು, 'ಕಟುಕ ಮತ್ತು ಸರ್ಜನ್ (ಶಸ್ತ್ರಚಿಕಿತ್ಸಕ) ಇಬ್ಬರದ್ದೂ ಕತ್ತರಿಸುವ ಕೆಲಸ. ಆದರೆ ಕಟುಕ ಜೀವ ತೆಗೆದರೆ, ಶಸ್ತ್ರಚಿಕಿತ್ಸಕ ಜೀವ ಉಳಿಸುತ್ತಾನೆ. ಈಗ ಇಂಥ ಜೀವ ಉಳಿಸುವ ಶಸ್ತ್ರಚಿಕಿತ್ಸಕ ರಾಜಕಾರಣ ಮತ್ತು ಚಿಕಿತ್ಸಕ ದೃಷ್ಟಿಯ ನೈತಿಕ ರಾಜಕಾರಣಿಗಳ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.

'ಇವತ್ತಿನ ರಾಜಕಾರಣ ಭೂಮಿಯನ್ನು ಉಳಿಸಿಲ್ಲ. ಗಣಿಗಾರಿಕೆ ಪ್ರದೇಶವನ್ನು ಗಮನಿಸಿದರೆ, ಮನುಷ್ಯತ್ವದ ಮೇಲೆ ದ್ವೇಷವಿರುವ ಅನ್ಯಗ್ರಹ ಜೀವಿಗಳು ಬಂದು ಭೂಮಿಯನ್ನು ಧ್ವಂಸ ಮಾಡಿದಂತೆ ಕಾಣುತ್ತದೆ. ನೆಲ-ಜಲ-ಗಾಳಿ ವಿಷವಾಗುತ್ತಿದೆ. ಭೂಮಿ ಹಿಟ್ಲರ್‌ನ ಗ್ಯಾಸ್ ಚೇಂಬರ್‌ನಂತಾಗುತ್ತಿದೆ. ಇವೆಲ್ಲ ಕಟುಕ ರಾಜಕಾರಣದ ಕೊಡುಗೆ' ಎಂದು ಆತಂಕ ವ್ಯಕ್ತಪಡಿಸಿದರು.

'ಇಂದಿನ ಬಹುತೇಕ ಕಟುಕ ರಾಜಕಾರಣಿಗಳಿಂದ ನಾಡು ವಿಲವಿಲ ಒದ್ದಾಡುತ್ತಿದೆ. ಸಮುದಾಯ ಆತಂಕದಲ್ಲಿದೆ. ಸ್ವರಾಜ್ ಇಂಡಿಯಾ ಪಕ್ಷ ಶಸ್ತ್ರಚಿಕಿತ್ಸಕ ರಾಜಕಾರಣಿಗಳೊಂದಿಗೆ ನಾಡುಕಟ್ಟುವಕೆಲಸಕ್ಕೆ ಮುಂದಾಗಿದೆ' ಎಂದು ದೇವನೂರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry