ಸೂಟ್‌ಕೇಸ್ ಕದ್ದು ಕಸದ ರಾಶಿಯಲ್ಲಿ ಎಸೆದ!

7

ಸೂಟ್‌ಕೇಸ್ ಕದ್ದು ಕಸದ ರಾಶಿಯಲ್ಲಿ ಎಸೆದ!

Published:
Updated:

ಬೆಂಗಳೂರು: ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ಬಳಿ ಉದ್ಯಮಿಯ ಕಾರಿನಿಂದ ಸೂಟ್‌ಕೇಸ್ ಕದ್ದೊಯ್ದಿದ್ದ ವ್ಯಕ್ತಿಯೊಬ್ಬ, ಅದರಲ್ಲಿ ಹಣದ ಬದಲಾಗಿ ರಿವಾಲ್ವರ್ ಇದ್ದುದರಿಂದ ಕಸದ ರಾಶಿಯಲ್ಲಿ ಸೂಟ್‌ಕೇಸ್ ಎಸೆದು ಹೋಗಿದ್ದಾನೆ.

ಹಾಸನದ ಟಿ.ಬಿ.ಎ ರೆಹಮಾನ್ ಎಂಬುವರು ಪತ್ನಿ ಜತೆ ಸೋಮವಾರ ಸಂಜೆ 5.30ರ ಸುಮಾರಿಗೆ ನ್ಯಾಷನಲ್‌ ಮಾರ್ಕೆಟ್‌ಗೆ ಬಂದಿದ್ದಾಗ ಈ ಕಳ್ಳತನ ನಡೆದಿದ್ದು, ಮೂರು ತಾಸುಗಳ ಬಳಿಕ ಎನ್‌.ಆರ್. ರಸ್ತೆಯಲ್ಲಿ ಸೂಟ್‌ಕೇಸ್ ಸಿಕ್ಕಿದೆ.

‘ಸ್ಪೇನ್‌ ನಿರ್ಮಿತ .32 ರಿವಾಲ್ವರ್ (ರೂಬಿ ಎಕ್ಸ್ಟ್ರಾ), ಅದರ ಆರು ಕಾರ್ಟ್‌ರಿಜ್‌ಗಳು, ರಿವಾಲ್ವರ್‌ನ ಪರವಾನಗಿ, ಕಾರಿನ ಅಸಲಿ ದಾಖಲೆಗಳು ಸೂಟ್‌ಕೇಸ್‌ನಲ್ಲಿದ್ದವು’ ಎಂದು ರೆಹಮಾನ್ ಹೇಳಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಪತ್ನಿಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕಿತ್ತು. ಹೀಗಾಗಿ, ಸೋಮವಾರ ಬೆಳಿಗ್ಗೆ ಕಾರಿನಲ್ಲಿ ನಗರಕ್ಕೆ ಬಂದಿದ್ದೆವು. ತಪಾಸಣೆ ಮುಗಿದ ನಂತರ ಮೊಬೈಲ್ ರಿಪೇರಿ ಮಾಡಿಸಲು ಸಂಜೆ ಗಾಂಧಿನಗರಕ್ಕೆ ತೆರಳಿದ್ದೆವು. ಪತ್ನಿಯನ್ನು ಕಾರಿನಲ್ಲೇ ಕೂರಿಸಿ ನಾನು ಮೊಬೈಲ್ ಅಂಗಡಿಗೆ ತೆರಳಿದ್ದೆ. ಈ ವೇಳೆ ವ್ಯಕ್ತಿಯೊಬ್ಬ ಹಿಂಬದಿ ಸೀಟಿನಲ್ಲಿದ್ದ ಸೂಟ್‌ಕೇಸನ್ನು ಆಕೆಗೆ ಗೊತ್ತೇ ಆಗದಂತೆ ತೆಗೆದುಕೊಂಡು ಓಡಿದ್ದಾನೆ’ ಎಂದು ಹೇಳಿದರು.

‘ಆತ ಓಡುತ್ತಿರುವುದನ್ನು ಕಂಡ ‘ದಿ–ಲಗೇಜ್ ಸೆಂಟರ್’ ಅಂಗಡಿಯವರು, ಕೂಡಲೇ ಪತ್ನಿಗೆ ವಿಷಯ ತಿಳಿಸಿದರು. ಆಕೆ ನನಗೆ ಕರೆ ಮಾಡಿದಳು. ಕಾರಿನ ಹತ್ತಿರ ತೆರಳುವಷ್ಟರಲ್ಲಿ ಸಂಚಾರ ಪೊಲೀಸರು ಬಂದಿದ್ದರು. ಅವರ ಸೂಚನೆಯಂತೆ ಉಪ್ಪಾರಪೇಟೆ ಠಾಣೆಗೆ ದೂರು ಕೊಟ್ಟು ಊರಿಗೆ ಹೊರಟೆ’ ಎಂದು

ಹೇಳಿದರು.

ಸ್ಥಳೀಯರಿಂದ ಮಾಹಿತಿ: ಉಪ್ಪಾರಪೇಟೆ ಪೊಲೀಸರು ತಕ್ಷಣ ನಿಯಂತ್ರಣ ಕೊಠಡಿ ಮೂಲಕ ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಿದ್ದಾರೆ. ರಾತ್ರಿ 8.30ರ ಸುಮಾರಿಗೆ ಕಸದ ರಾಶಿಯಲ್ಲಿ ಸೂಟ್‌ಕೇಸ್ ಕಂಡ ಸ್ಥಳೀಯರು, ‘100’ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ರೆಹಮಾನ್ ಅವರದ್ದೇ ಸೂಟ್‌ಕೇಸ್ ಎಂಬುದು ಖಚಿತವಾಗಿದೆ.

45 ವರ್ಷಗಳಿಂದ ರಿವಾಲ್ವರ್ ಇದೆ

‘ಮಂಗಳವಾರ ಬೆಳಿಗ್ಗೆ ರೆಹಮಾನ್ ಅವರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದೇವೆ. ರಿವಾಲ್ವರ್‌ಗೆ ಪರವಾನಗಿ ಇದೆ. ಆತ್ಮರಕ್ಷಣೆ ಹೆಸರಿನಲ್ಲಿ 1973ರಿಂದ ಅದನ್ನು ಇಟ್ಟುಕೊಂಡಿದ್ದಾರೆ. ಕಳ್ಳನ ಸುಳಿವಿಗಾಗಿ ನ್ಯಾಷನಲ್ ಮಾರ್ಕೆಟ್ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಉಪ್ಪಾರಪೇಟೆ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry